ADVERTISEMENT

ಲಂಡನ್‌ನಲ್ಲಿ ಮಾರ್ಚ್ 8ರಂದು ಇಳೆಯರಾಜ ‘ಸಿಂಫನಿ’

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2025, 16:05 IST
Last Updated 6 ಮಾರ್ಚ್ 2025, 16:05 IST
ಇಳೆಯರಾಜ
ಇಳೆಯರಾಜ   

ಚೆನ್ನೈ: ಚಲನಚಿತ್ರ ಗೀತೆಗಳು ಸೇರಿದಂತೆ ವಿವಿಧ ಪ್ರಕಾರದ ಹಾಡುಗಳಿಗೆ ಸ್ವರ ಸಂಯೋಜನೆ ಮಾಡಿರುವ, ಸಂಗೀತವೇ ಮೂರ್ತಿವೆತ್ತಂತಿರುವ ಸ್ವರ ಮಾಂತ್ರಿಕ ಇಳೆಯರಾಜ ಅವರು ಮಾರ್ಚ್ 8ರಂದು ಲಂಡನ್‌ನಲ್ಲಿ ನಡೆಯುವ ‘ಸಿಂಫನಿ’ಯನ್ನು (ವಾದ್ಯಮೇಳ) ಮುನ್ನಡೆಸಲಿದ್ದಾರೆ.

ಲಂಡನ್‌ನ ‘ಇವೆಂಟಿಮ್ ಅಪೋಲೊ’ ಸಭಾಂಗಣದಲ್ಲಿ ನಡೆಯುವ ಸ್ವರಸಮ್ಮೇಳನದಲ್ಲಿ, ಇಳೆಯರಾಜ ಅವರ ಚೊಚ್ಚಲ ಸ್ವರಸಂಯೋಜನೆ ‘ವ್ಯಾಲಿಯಂಟ್’ ಅನಾವರಣಗೊಳ್ಳಲಿದೆ.

ಪಾಶ್ಚಾತ್ಯ ಶಾಸ್ತ್ರೀಯ ವಾದ್ಯಮೇಳವನ್ನು ಬ್ರಿಟನ್‌ನಲ್ಲಿ ನಿರ್ವಹಿಸಿದ ಮೊದಲ ಭಾರತೀಯ ಕಲಾವಿದ ಎಂಬ ಗೌರವಕ್ಕೆ 81 ವರ್ಷದ ಇಳೆಯರಾಜ ಪಾತ್ರರಾಗಲಿದ್ದಾರೆ. ಈ ಮೂಲಕ, ಅವರು, ಸಂಗೀತ ಕ್ಷೇತ್ರದಲ್ಲಿನ ಸುದೀರ್ಘ ಪಯಣದಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಲಿದ್ದಾರೆ.

ADVERTISEMENT

ಈ ಕುರಿತು ಪ್ರತಿಕ್ರಿಯಿಸಿರುವ ಇಳೆಯರಾಜ, ‘ಇದು ನನಗೆ ಮಾತ್ರ ಹೆಮ್ಮೆಯ ವಿಷಯವಲ್ಲ; ಇಂತಹ ಗೌರವ ಸಿಕ್ಕಿರುವುದು ಭಾರತದ ಪಾಲಿಗೂ ಹೆಮ್ಮೆಯ ವಿಚಾರ’ ಎಂದಿದ್ದಾರೆ.

‘ನಮ್ಮ ದೇಶ ಕುರಿತು ನಾವು ‘ನಂಬಲಾಗದ ಭಾರತ’ ಎಂದು ಹೇಳುತ್ತೇವೆ. ಅದೇ ರೀತಿ ನನ್ನ ಈ ಸಾಧನೆ ನೋಡಿದಾಗ ‘ನಂಬಲಾಗದ ಇಳೆಯರಾಜ’ ಎಂದೇ ಹೇಳಬೇಕಿದೆ’ ಎಂದು ಇಳೆಯರಾಜ ಪ್ರತಿಕ್ರಿಯಿಸಿದ್ದಾರೆ.

ಲಂಡನ್‌ ತೆರಳಲು ಗುರುವಾರ ಇಲ್ಲಿ ವಿಮಾನವೇರುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲಂಡನ್‌ನಲ್ಲಿ ನಡೆಯಲಿರುವ ನನ್ನ ಕಾರ್ಯಕ್ರಮ ಸಂಗೀತ ಪ್ರಿಯರಿಗೆ ರಸದೌತಣ ನೀಡಲಿದೆ ಎಂಬ ವಿಶ್ವಾಸ ಹೊಂದಿದ್ದೇನೆ’ ಎಂದು ಹೇಳಿದರು.

ಕೇವಲ 35 ದಿನಗಳಲ್ಲಿ ಇಳೆಯರಾಜ ಅವರು ಈ ಸ್ವರಸಂಯೋಜನೆ ಮಾಡಿದ್ದು, ಖ್ಯಾತ ಸಂಗೀತಗಾರ ಮೈಕೆಲ್ ಟಾಮ್ಸ್ ಈ ವಾದ್ಯಗೋಷ್ಠಿ ನಿರ್ವಹಿಸುವರು. 

ರಾಯಲ್‌ ಫಿಲ್‌ಹಾರ್ಮೋನಿಕ್ ಆರ್ಕೆಸ್ಟ್ರಾದ(ಆರ್‌ಪಿಒ) 85 ಸಂಗೀತಗಾರರು ಸಾಥ್‌ ನೀಡುವರು. ಈ ಸ್ವರಸಂಯೋಜನೆಗಳ ರೆಕಾರ್ಡಿಂಗ್ಅನ್ನು ಕಳೆದ ವರ್ಷ ಮಾಡಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.