ADVERTISEMENT

ಹರಿಯಾಣ: ಅಕ್ರಮ ಕಲ್ಲು ಗಣಿಗಾರಿಕೆ, ಟ್ರಕ್‌ ಹರಿಸಿ ಡಿವೈಎಸ್‌ಪಿ ಹತ್ಯೆ

ಪಿಟಿಐ
Published 19 ಜುಲೈ 2022, 14:42 IST
Last Updated 19 ಜುಲೈ 2022, 14:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಗುರುಗ್ರಾಮ: ಹರಿಯಾಣದ ನೂಹ್‌ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ತಡೆಯಲು ಮುಂದಾಗಿದ್ದ ಡಿವೈಎಸ್‌ಪಿಯೊಬ್ಬರನ್ನು ಅಕ್ರಮದಲ್ಲಿ ತೊಡಗಿದ್ದ ಟ್ರಕ್‌ನಿಂದಲೇ ಹರಿಸಿ ಮಂಗಳವಾರ ಹತ್ಯೆ ಮಾಡಲಾಗಿದೆ.

‘ತವೂರು ಡಿವೈಎಸ್‌ಪಿ ಸುರೇಂದ್ರ ಸಿಂಗ್‌ ಹತ್ಯೆಯಾದವರು. ಅವರ ತಂಡವು ದಾಖಲೆಗಳ ಪರಿಶೀಲನೆಗಾಗಿ ಗಣಿ ಪ್ರದೇಶದಿಂದ ಬರುತ್ತಿದ್ದ ಟ್ರಕ್‌ ಅನ್ನು ನಿಲ್ಲಿಸಲು ಮುಂದಾಗಿತ್ತು. ಈ ವೇಳೆ ಚಾಲಕನು ಟ್ರಕ್‌ ಹರಿಸಿ ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದರು. ಸಿಂಗ್‌ ಅವರ ಜೊತೆಗಿದ್ದಗನ್‌ಮ್ಯಾನ್‌ ಹಾಗೂ ಚಾಲಕ ರಸ್ತೆ ಬದಿಗೆ ಜಿಗಿದು ಜೀವ ಉಳಿಸಿಕೊಂಡಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

‘ಪಚಗಾಂವ್ ಪ್ರದೇಶದ ಅರಾವಳಿಬೆಟ್ಟದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದವರ ಮೇಲೆ ದಾಳಿ ನಡೆಸುವುದಕ್ಕಾಗಿಸಿಂಗ್‌ ಅವರಿದ್ದ ತಂಡ ಹೋಗಿತ್ತು. ಬೆಳಿಗ್ಗೆ 11.50ರ ಸುಮಾರಿಗೆ ಟ್ರಕ್‌ವೊಂದು ಬರುತ್ತಿರುವುದನ್ನು ಗಮನಿಸಿದ್ದ ಸಿಂಗ್‌, ಟ್ರಕ್‌ಗೆ ಅಡ್ಡಲಾಗಿ ಕೈಹಾಕಿ ಅದನ್ನು ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿದ್ದರು’ ಎಂದು ತಿಳಿಸಿದ್ದಾರೆ.

ADVERTISEMENT

‘ನೂಹ್‌ ಜಿಲ್ಲೆಯಲ್ಲಿ2015ರಿಂದಲೂ ಅಕ್ರಮ ಕಲ್ಲು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಈ ಬಗ್ಗೆ ಪ್ರತಿ ವರ್ಷವೂ ಸರಾಸರಿ 50 ದೂರುಗಳು ದಾಖಲಾಗುತ್ತವೆ’ ಎಂದಿದ್ದಾರೆ.

‘ಹಿಸ್ಸಾರ್‌ ಜಿಲ್ಲೆಯ ಸರಂಗ್‌ಪುರದವರಾದ ಸಿಂಗ್‌, ಕುಟುಂಬದವರ ಜೊತೆ ಕುರುಕ್ಷೇತ್ರದಲ್ಲಿ ನೆಲೆಸಿದ್ದರು. ಕೆಲ ತಿಂಗಳುಗಳಲ್ಲಿ ಕೆಲಸದಿಂದ ನಿವೃತ್ತರಾಗಲಿದ್ದರು’ ಎಂದು ಹೇಳಿದ್ದಾರೆ.

ನ್ಯಾಯಾಂಗ ತನಿಖೆಗೆ ಕಾಂಗ್ರೆಸ್‌ ಆಗ್ರಹ
‘ಡಿವೈಎಸ್‌ಪಿ ಸುರೇಂದ್ರ ಸಿಂಗ್‌ ಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್ ಕೂಡಲೇ ರಾಜೀನಾಮೆ ನೀಡಬೇಕು’ ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.

‘ಸುರೇಂದ್ರ ಸಿಂಗ್‌ ಹತ್ಯೆಯು ಇಡಿ ದೇಶವನ್ನೇ ತಲ್ಲಣಗೊಳಿಸಿದೆ. ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಹೈಕೋರ್ಟ್‌ ಮೇಲ್ವಿಚಾರಣೆಯಲ್ಲೇ ತನಿಖೆ ನಡೆಸಬೇಕು’ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.