ADVERTISEMENT

ದೆಹಲಿ ವಿಮಾನ ನಿಲ್ದಾಣದ ನಿರ್ಗಮನ ದ್ವಾರದಲ್ಲಿ ಪಾನಮತ್ತನಿಂದ ಮೂತ್ರ ವಿಸರ್ಜನೆ!

ಏಜೆನ್ಸೀಸ್
Published 11 ಜನವರಿ 2023, 9:22 IST
Last Updated 11 ಜನವರಿ 2023, 9:22 IST
   

ನವದೆಹಲಿ: ಇಲ್ಲಿನ ಇಂದಿರಾಗಾಂಧಿ ರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಗಮನ ದ್ವಾರದಲ್ಲಿ ಪಾನಮತ್ತ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಟರ್ಮಿನಲ್‌–3ರಲ್ಲಿ ಭಾನುವಾರ ಸಂಜೆ ಮೂತ್ರ ವಿಸರ್ಜನೆ ಮಾಡಿದ್ದ 39 ವರ್ಷದ ಜೌಹರ್ ಅಲಿ ಖಾನ್ ಎಂಬಾತನನ್ನು ಬಂಧಿಸಲಾಗಿದೆ. ಬಿಹಾರದ ನಿವಾಸಿಯಾದ ಈತನನ್ನು ಬಂಧಿಸಿ ಅದೇ ದಿನ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-3 ರ ನಿರ್ಗಮನ ಪ್ರದೇಶದ ಗೇಟ್ ಸಂಖ್ಯೆ -6 ರಲ್ಲಿ ಈತ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡಿದ್ದಾನೆ. ಭಾನುವಾರ ಸಂಜೆ 5.30 ರ ಸುಮಾರಿಗೆ ನಮಗೆ ಮಾಹಿತಿ ಲಭಿಸಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

ಖಾನ್ ಪಾನಮತ್ತನಾಗಿದ್ದು ಪರೀಕ್ಷೆ ವೇಳೆ ದೃಢವಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಕಿರುಚುತ್ತಿದ್ದ ಮತ್ತು ಇತರ ಪ್ರಯಾಣಿಕರನ್ನು ನಿಂದಿಸುತ್ತಿದ್ದ. ಆತ ಸೌದಿ ಅರೇಬಿಯಾದ ದಮಾಮ್‌ಗೆ ಪ್ರಯಾಣಿಸುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಐಪಿಸಿ ಸೆಕ್ಷನ್ 294 ಮತ್ತು 510 ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ಖಾನ್ ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ.

ನವೆಂಬರ್ 26 ರಂದು ನ್ಯೂಯಾರ್ಕ್‌ನಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಕುಡಿದ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡಿದ ಪ್ರಕರಣ ಇತ್ತೀಚೆಗಷ್ಟೆ ವಿವಾದ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ನಾಗರಿಕ ವಿಮಾನಯಾನ ನಿರ್ದೇಶನಾಲಯ ಇಂತಹ ಘಟನೆಗಳ ಕುರಿತು ನಿಗಾವಹಿಸುವಂತೆ ವಿಮಾನಯಾನ ಸಂಸ್ಥೆಗಳಿಗೆ ನಿರ್ದೇಶನ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.