ನರೇಂದ್ರ ಮೋದಿ
(ಪಿಟಿಐ ಚಿತ್ರ)
ರಾಮೇಶ್ವರಂ: ತಮಿಳುನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ₹8,300 ಕೋಟಿ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ, ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, 'ರಾಮ ದೇವರ ಉತ್ತಮ ಆಡಳಿತವು ರಾಷ್ಟ್ರ ನಿರ್ಮಾಣಕ್ಕೆ ಅಡಿಪಾಯಪಾಯವಾಗಿದೆ' ಎಂದು ಹೇಳಿದ್ದಾರೆ.
'ಇಂದು ರಾನನಾಥಸ್ವಾಮಿ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದ್ದೇನೆ. ಈ ವಿಶೇಷ ದಿನದಂದು ₹8,300 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸುವ ಅವಕಾಶ ದೊರಕಿದೆ. ಈ ರೈಲು ಹಾಗೂ ರಸ್ತೆ ಯೋಜನೆಗಳನ್ನು ತಮಿಳುನಾಡಿನ ಸಂಪರ್ಕ ಜಾಲವನ್ನು ವೃದ್ಧಿಸುತ್ತದೆ. ಇದಕ್ಕಾಗಿ ತಮಿಳುನಾಡಿನ ಜನರನ್ನು ಅಭಿನಂದಿಸುತ್ತೇನೆ' ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ನೂತನ ಪಂಬನ್ ಸೇತುವೆ ಅನ್ನು ಪ್ರಧಾನಿ ಮೋದಿ ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ. ಇದು ದೇಶದ ಮೊದಲ ವರ್ಟಿಕಲ್ ಲಿಫ್ಟ್ ರೈಲ್ವೆ ಸಮುದ್ರ ಸೇತುವೆ ಆಗಿದೆ.
'ಇದು ಭಾರತ ರತ್ನ ಡಾ. ಅಬ್ದುಲ್ ಕಲಾಂ ಅವರ ನಾಡು. ವಿಜ್ಞಾನ ಹಾಗೂ ಆಧ್ಯಾತ್ಮ ಪರಸ್ಪರ ಒಂದಕ್ಕೊಂದು ಹೊಂದಿಕೊಂಡಿದೆ ಎಂದು ಕಲಾಂ ಅವರ ಜೀವನ ನಮಗೆ ತೋರಿಸಿಕೊಟ್ಟಿದೆ. ಅದೇ ರೀತಿ ರಾಮೇಶ್ವರಂನಲ್ಲಿ ನಿರ್ಮಿಸಲಾದ ನೂತನ ಪಂಬನ್ ಸೇತುವೆ ತಂತ್ರಜ್ಞಾನ ಮತ್ತು ಸಂಪ್ರದಾಯವನ್ನು ಒಗ್ಗೂಡಿಸುತ್ತದೆ. ನಮ್ಮ ಎಂಜಿನಿಯರ್ ಹಾಗೂ ಕಾರ್ಮಿಕರ ಪರಿಶ್ರಮಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಈ ಸೇತುವೆ ದೇಶದ ಮೊದಲ ಲಿಫ್ಟ್ ರೈಲ್ವೆ ಸಮುದ್ರ ಸೇತುವೆಯಾಗಿದೆ. ದೊಡ್ಡ ಹಡಗುಗಳು ಕೆಳಗಡೆಯಿಂದ ಸಾಗಲಿವೆ. ರೈಲುಗಳು ಸಹ ವೇಗವಾಗಿ ಚಲಿಸಲು ಸಹರಿಯಾಗಿವೆ' ಎಂದು ಅವರು ಉಲ್ಲೇಖಿಸಿದ್ದಾರೆ.
ತಮಿಳು ಭಾಷೆಯ ಕುರಿತಾಗಿಯೂ ಪ್ರಧಾನಿ ಮೋದಿ ಪ್ರಸ್ತಾಪಿಸಿದರು. 'ಜಗತ್ತಿನ ಎಲ್ಲ ಕಡೆಗಳಿಗೂ ತಮಿಳು ಭಾಷೆಯನ್ನು ತಲುಪಿಸಲು ಪ್ರಯತ್ನ ನಡೆಯುತ್ತಿವೆ' ಎಂದು ಹೇಳಿದ್ದಾರೆ.
ಬಡವರಿಗೆ ತಮಿಳು ಭಾಷೆಯಲ್ಲೇ ವೈದ್ಯಕೀಯ ಶಿಕ್ಷಣ ನೀಡುವಂತೆಯೂ ಅವರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.