ADVERTISEMENT

ಚೀನಾದ ಟೆಲಿಕಾಂ ಕಂಪನಿ ಹುವಾವೆಯ ಭಾರತದ ಕಚೇರಿಗಳಲ್ಲಿ ಐಟಿ ಶೋಧ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 16 ಫೆಬ್ರುವರಿ 2022, 12:22 IST
Last Updated 16 ಫೆಬ್ರುವರಿ 2022, 12:22 IST
ಚೀನಾದ ಟೆಲಿಕಾಂ ಕಂಪನಿ ಹುವಾವೆ
ಚೀನಾದ ಟೆಲಿಕಾಂ ಕಂಪನಿ ಹುವಾವೆ   

ನವದೆಹಲಿ: ಚೀನಾದ ತಂತ್ರಜ್ಞಾನ ಮತ್ತು ದೂರಸಂಪರ್ಕ ಸಂಸ್ಥೆ ಹುವಾವೆ ಟೆಕ್ನಾಲಜಿಸ್‌ಗೆ ಸೇರಿದ ಭಾರತದಲ್ಲಿನ ಹಲವು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಶೋಧ ಕಾರ್ಯ ನಡೆಸಿರುವುದಾಗಿ ವರದಿಯಾಗಿದೆ.

ತೆರಿಗೆ ವಂಚನೆಗೆ ಸಂಬಂಧಿಸಿದಂತೆ ತನಿಖೆಯ ಭಾಗವಾಗಿ ಐಟಿ ಇಲಾಖೆ ಮಂಗಳವಾರದಿಂದ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಹಣಕಾಸು ದಾಖಲೆಗಳು, ಲೆಕ್ಕದ ಪುಸ್ತಕಗಳು ಹಾಗೂ ಕಂಪನಿಯು ದೇಶದಲ್ಲಿ ಮತ್ತು ಹೊರ ರಾಷ್ಟ್ರಗಳಲ್ಲಿ ನಡೆಸುತ್ತಿರುವ ವಹಿವಾಟಿನ ಬಗ್ಗೆ ಇಲಾಖೆ ಗಮನ ಕೇಂದ್ರೀಕರಿಸಿದೆ.

ದೆಹಲಿ, ಗುರುಗ್ರಾಮ ಹಾಗೂ ಬೆಂಗಳೂರಿನಲ್ಲಿರುವ ಹುವಾವೆಗೆ ಸೇರಿದ ಕಚೇರಿಗಳಲ್ಲಿ ಐಟಿ ಇಲಾಖೆ ಕಾರ್ಯಾಚರಣೆ ನಡೆಸಿದೆ. ಕೆಲವು ದಾಖಲೆಗಳನ್ನೂ ವಶ ಪಡಿಸಿಕೊಂಡಿದೆ.

ADVERTISEMENT

'ಕಂಪನಿಯ ಎಲ್ಲ ಕಾರ್ಯಾಚರಣೆಗಳು ಕಾನೂನು ಮತ್ತು ನಿಯಮಗಳಿಗೆ ಒಳಪಟ್ಟಿವೆ. ಹೆಚ್ಚಿನ ವಿವರಗಳಿಗೆ ಸರ್ಕಾರದ ಸಂಬಂಧಿತ ಇಲಾಖೆಗಳನ್ನು ಸಂಪರ್ಕಿಸುತ್ತೇವೆ ಹಾಗೂ ನಿಯಮಗಳ ಅನುಸಾರ ಸಂಪೂರ್ಣ ಸಹಕಾರ ನೀಡುತ್ತೇವೆ, ಸರಿಯಾದ ಕ್ರಮವನ್ನೇ ಅನುಸರಿಸುತ್ತೇವೆ, ' ಎಂದು ಹುವಾವೆ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತವು ಇತ್ತೀಚೆಗಷ್ಟೇ ಖಾಸಗೀತನ, ಸುರಕ್ಷತೆ ಹಾಗೂ ಬೇಹುಗಾರಿಕೆ ಸಾಧ್ಯತೆಯ ಕಾರಣಗಳಿಂದಾಗಿ ಚೀನಾ ಮೂಲದ 54 ಆ್ಯಪ್‌ಗಳನ್ನು ನಿರ್ಬಂಧಿಸಿದೆ. ಅದರ ಬೆನ್ನಲ್ಲೇ ಚೀನಾ ಮೂಲದ ಕಂಪನಿಯಲ್ಲಿ ಐಟಿ ಶೋಧ ನಡೆಸಲಾಗುತ್ತಿದೆ.

ಭಾರತದಲ್ಲಿ 5ಜಿ ತಂತ್ರಜ್ಞಾನದ ಪರೀಕ್ಷೆ ನಡೆಸಲು ಹುವಾವೆ ಕಂಪನಿಗೆ ಅವಕಾಶ ನೀಡಿಲ್ಲ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಚೀನಾದ ಫೋನ್‌ ತಯಾರಿಕಾ ಕಂಪನಿಗಳಾದ ಶಓಮಿ ಮತ್ತು ಒಪ್ಪೊದ ಕಚೇರಿಗಳ ಮೇಲೆ ಐಟಿ ದಾಳಿ ನಡೆಸಲಾಗಿತ್ತು. ದೇಶದ 11 ರಾಜ್ಯಗಳಲ್ಲಿ ಶೋಧ ಕಾರ್ಯಾಚರಣೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.