ADVERTISEMENT

ಜಮ್ಮು ಗಡಿಯಲ್ಲಿ ಮುಂದುವರಿದ ಸ್ಥಳಾಂತರ ಕಾರ್ಯ: ಪರಿಹಾರ ಕೇಂದ್ರಗಳಿಗೆ ಸಿಎಂ ಭೇಟಿ

ಪಿಟಿಐ
Published 10 ಮೇ 2025, 3:52 IST
Last Updated 10 ಮೇ 2025, 3:52 IST
<div class="paragraphs"><p>ಜಮ್ಮು ಮತ್ತು ಕಾಶ್ಮೀರ&nbsp;ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ</p></div>

ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ

   

ಪಿಟಿಐ ಚಿತ್ರ

ಜಮ್ಮು: ಗಡಿಯಲ್ಲಿ ಪಾಕಿಸ್ತಾನ ಸಶಸ್ತ್ರ ಪಡೆಗಳು ನಿರಂತರವಾಗಿ ದಾಳಿ ಮುಂದುವರಿಸಿದ್ದು, ಜಮ್ಮು ಭಾಗದ ಐದು ಜಿಲ್ಲೆಗಳ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ. ಈವರೆಗೆ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ.

ADVERTISEMENT

ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರು ಉಪ ಮುಖ್ಯಮಂತ್ರಿ ಸುರಿಂದರ್‌ ಚೌಧರಿ ಹಾಗೂ ಸಚಿವ ಸತೀಶ್‌ ಶರ್ಮಾ ಅವರೊಂದಿಗೆ ಜಮ್ಮು, ರಜೌರಿ ಹಾಗೂ ಸಾಂಬಾ ಜಿಲ್ಲೆಗಳಲ್ಲಿ ತೆರೆಯಲಾಗಿರುವ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿ, ವ್ಯವಸ್ಥೆಗಳ ಮೇಲ್ವಿಚಾರಣೆ ನಡೆಸಿದ್ದಾರೆ. ಸಂತ್ರಸ್ತ ಕುಟುಂಬದವರೊಂದಿಗೆ ಮಾತುಕತೆ ನಡೆಸಿದ್ದಾರೆ.

'ಗಡಿಯಲ್ಲಿನ ರಾಜೌರಿ-ಪೂಂಚ್ ವಲಯದ ಸುಮಾರು 8–10 ಸಾವಿರ ನಿವಾಸಿಗಳನ್ನು ಸ್ಥಳಾಂತರಿಸಲಾಗಿದೆ' ಎಂದಿರುವ ಸಚಿವ ಶರ್ಮಾ, ಆಹಾರ ಮತ್ತು ವೈದ್ಯಕೀಯ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪಹಲ್ಗಾಮ್‌ನಲ್ಲಿ ಉಗ್ರರು ಏಪ್ರಿಲ್ 22ರಂದು ನಡೆಸಿದ ಗುಂಡಿನ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಮೇ 7ರಂದು 'ಆಪರೇಷನ್‌ ಸಿಂಧೂರ' ಕಾರ್ಯಾಚರಣೆ ನಡೆಸಿತ್ತು.

ಇದೀಗ ಪಾಕ್‌ ಸೇನೆ ಅಂತರರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ನಾಗರಿಕರು ಹಾಗೂ ಸೇನಾ ನೆಲೆಗಳನ್ನು ಗುರಿಯಾಗಿಸಿ ಶೆಲ್‌ ಹಾಗೂ ಕ್ಷಿಪಣಿ ದಾಳಿ ನಡೆಸುವ ಪ್ರಯತ್ನ ಮಾಡುತ್ತಿದೆ. ಇದರಿಂದಾಗಿ, ಪೂಂಚ್, ಮಂಕೋಟೆ, ಮೆಂಧಾರ್, ನೌಶೇರಾ, ಅಖ್ನೂರ್, ಆರ್.ಎಸ್.ಪುರ, ಅರ್ನಿಯಾ, ಸಾಂಬಾ ಮತ್ತು ಕಥುವಾ ಮತ್ತು ಇತರ ಹಲವಾರು ಪ್ರದೇಶಗಳಲ್ಲಿ ಭಾರಿ ಹಾನಿಯಾಗಿದೆ.

ಮಿಶ್ರಿವಾಲಾ ಮಿಶ್ರಿವಾಲಾ, ನಾಗಬನಿ, ಬಿಷ್ನಾ ಮತ್ತು ಥಂಡಿ ಖುಯಿ ಪರಿಹಾರ ಕೇಂದ್ರಗಳಿಗೂ ಭೇಟಿ ನೀಡಿರುವ ಅಬ್ದುಲ್ಲಾ, ಕಟ್ಟೆಚ್ಚರ ವಹಿಸುವಂತೆ ಹಾಗೂ ಸಂತ್ರಸ್ತರಿಗೆ ಕೂಡಲೇ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಗಡಿಯುದ್ದಕ್ಕೂ ಜನರನ್ನು ಸ್ಥಳಾಂತರಿಸಲಾಗುತ್ತಿದೆ ಎಂದಿರುವ ಅಧಿಕಾರಿಗಳು, 'ಭಾರತೀಯರ ಮನೋಭಾವವನ್ನು ಕುಗ್ಗಿಸಲು ಪಾಕಿಸ್ತಾನಕ್ಕೆ ಸಾಧ್ಯವಿಲ್ಲ' ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಪಾಕ್‌ ಆಕ್ರಮಣವನ್ನು ಖಂಡಿಸಿರುವ ಅಬ್ದುಲ್ಲಾ, 'ಭಾರತವು ತನ್ನ ನಾಗರಿಕರು ಮತ್ತು ಪ್ರದೇಶವನ್ನು ಪೂರ್ಣ ಬಲದೊಂದಿಗೆ ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದೆ' ಎಂದು ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.