ADVERTISEMENT

ಪಾಕ್‌ ಗೆಲುವು ಸಂಭ್ರಮಿಸಿದ ವೈದ್ಯಕೀಯ ವಿದ್ಯಾರ್ಥಿಗಳ ಮೇಲೆ ಯುಎಪಿಎ ಅಡಿ ಪ್ರಕರಣ

ಪಿಟಿಐ
Published 26 ಅಕ್ಟೋಬರ್ 2021, 16:04 IST
Last Updated 26 ಅಕ್ಟೋಬರ್ 2021, 16:04 IST
.
.   

ಶ್ರೀನಗರ: ಟ್ವೆಂಟಿ–20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಜಯಗಳಿಸಿದ್ದಕ್ಕೆ ಸಂಭ್ರಮಾಚರಣೆ ಮಾಡಿದ ಹಾಗೂ ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ ಆರೋಪಗಳ ಮೇಲೆ ಇಲ್ಲಿನ ಎರಡು ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವಿರುದ್ಧ ಪೊಲೀಸರು ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿ ಪ್ರಕರಣ ದಾಖಲಿಸಿದ್ದಾರೆ.

ಸಂಭ್ರಮಾಚರಣೆ ಹಾಗೂ ಘೋಷಣೆಗಳನ್ನು ಕೂಗಿದ್ದು ಎನ್ನಲಾದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಈ ವಿಡಿಯೊಗಳ ಆಧಾರದ ಮೇಲೆ ಎಫ್ಐಆರ್‌ಗಳನ್ನು ದಾಖಲಿಸಲಾಗಿದೆ. ಆದರೆ, ಎಫ್ಐಆರ್‌ಗಳಲ್ಲಿ ಯಾವ ವಿದ್ಯಾರ್ಥಿಯ ಹೆಸರು ಉಲ್ಲೇಖಿಸಿಲ್ಲ ಎಂದು ಮೂಲಗಳು ಹೇಳಿವೆ

‘ಪೊಲೀಸರು ಈ ವಿಡಿಯೊಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಹಾಗೂ ವಿದ್ಯಾರ್ಥಿಗಳನ್ನು ಗುರುತಿಸುವ ಪ್ರಕ್ರಿಯೆ ಆರಂಭಿಸಿದ್ದಾರೆ’ ಎಂದು ಇವೇ ಮೂಲಗಳು ಹೇಳಿವೆ.

ADVERTISEMENT

ಆರೋಪಿಗಳ ವಿರುದ್ಧ ಐಪಿಸಿಯ ಸೆಕ್ಷನ್ 105 (ಎ), 505 ಹಾಗೂ ಯುಎಪಿಎ ಸೆಕ್ಷನ್ 13ರ ಅಡಿ ಕರಣ್‌ನಗರ ಹಾಗೂ ಶ್ರೀನಗರದ ಸೌರಾ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಜಮ್ಮು–ಕಾಶ್ಮೀರ ಪೊಲೀಸ್‌ ಮುಖ್ಯಸ್ಥ ದಿಲ್‌ಬಾಗ್‌ ಸಿಂಗ್‌ ಅವರು ಈ ವಿಷಯವನ್ನು ಖಚಿತಪಡಿಸಿದ್ದಾರೆ.

‘ಭಾರತ–ಪಾಕಿಸ್ತಾನ ನಡುವಿನ ಪಂದ್ಯದ ನಂತರ, ಸಂಭ್ರಮಾಚರಣೆಗೆ ಸಂಬಂಧಿಸಿದ ಹಲವಾರು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. 2017ರಷ್ಟು ಹಳೆಯ ವಿಡಿಯೊಗಳು ಸಹ ಹರಿದಾಡುತ್ತಿವೆ’ ಎಂದು ಅವರು ಹೇಳಿದರು.

‘ಆದರೆ, ಸರ್ಕಾರಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳಿಗೆ ಸಂಬಂಧಿಸಿದ ವಿಡಿಯೊವೊಂದು ಸಹ ವೈರಲ್‌ ಆಗಿದೆ. ಈ ಸಂಬಂಧ ಎಫ್ಐಆರ್‌ ದಾಖಲಿಸಿದ್ದು, ಕ್ರಮ ಕೈಗೊಳ್ಳಲಾಗುವುದು’ ಎಂದೂ ಅವರು ಸ್ಪಷ್ಟಪಡಿಸಿದರು.

‘ಕಠಿಣ ಕ್ರಮ’: ‘ವಿದ್ಯಾರ್ಥಿಗಳ ವಿರುದ್ಧ ಪೊಲೀಸರ ಕ್ರಮ ಬಹಳ ಕಠಿಣವಾದದ್ದು. ಇದರಿಂದ ಅವರ ಭವಿಷ್ಯ ಹಾಳಾಗುವುದು. ಅಲ್ಲದೇ, ಅವರಲ್ಲಿ ಮತ್ತಷ್ಟೂ ಪರಕೀಯ ಭಾವನೆ ಮೂಡುವುದು’ ಎಂದು ಜಮ್ಮು–ಕಾಶ್ಮೀರ ವಿದ್ಯಾರ್ಥಿಗಳ ಸಂಘದ ರಾಷ್ಟ್ರೀಯ ವಕ್ತಾರ ನಾಸಿರ್‌ ಖುಹಾಮಿ ಪ್ರತಿಕ್ರಿಯಿಸಿದ್ದಾರೆ.

ಪೊಲೀಸರ ಕ್ರಮವನ್ನು ಟೀಕಿಸಿರುವ ಪೀಪಲ್ಸ್‌ ಕಾನ್ಫರೆನ್ಸ್‌ ಪಕ್ಷದ ಮುಖ್ಯಸ್ಥ ಸಜ್ಜಾದ್‌ ಗನಿ ಲೋನ್‌ ಅವರು, ‘ಸೈದ್ಧಾಂತಿಕವಾಗಿ ಭಿನ್ನ ನಿಲುವು ಹೊಂದಿರುವವರ ಜೊತೆ ಕಾಶ್ಮೀರದಲ್ಲಿ ನಾವು ಬದುಕಬೇಕಿದೆ’ ಎಂದು ಹೇಳಿದ್ದಾರೆ.

‘ಸಂಭ್ರಮಿಸಿದ್ದಕ್ಕಾಗಿ ಈ ವಿದ್ಯಾರ್ಥಿಗಳು ದೇಶಪ್ರೇಮಿಗಳಲ್ಲ ಎಂಬ ಭಾವನೆ ನಿಮ್ಮದಾಗಿದ್ದರೆ, ಅವರ ಮನಪರಿವರ್ತನೆ ಮಾಡುವ ಧೈರ್ಯ ಮತ್ತು ನಂಬಿಕೆ ನಿಮ್ಮಲ್ಲಿರಬೇಕು. ಈ ರೀತಿಯ ದಂಡನೆಗಳಿಂದ ಯಾವುದೇ ಪ್ರಯೋಜನ ಇಲ್ಲ’ ಎಂದೂ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.