ADVERTISEMENT

IND vs WI: ಭಾರತ ಬ್ಯಾಟಿಂಗ್; ವಿಂಡೀಸ್ ತಂಡದ ನಾಯಕ ಪೊಲಾರ್ಡ್‌ಗಿದು ನೂರನೇ ಪಂದ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಫೆಬ್ರುವರಿ 2022, 8:42 IST
Last Updated 19 ಫೆಬ್ರುವರಿ 2022, 8:42 IST
   

ಕೋಲ್ಕತ್ತ: ಮೂರು ಪಂದ್ಯಗಳ ಸರಣಿಯ ಮೊದಲ ಹಣಾಹಣಿಯಲ್ಲಿ ಜಯದನಗೆ ಬೀರಿರುವ ಆತಿಥೇಯ ಭಾರತ ಮತ್ತು ಪ್ರವಾಸಿ ವೆಸ್ಟ್‌ ಇಂಡೀಸ್ ತಂಡಗಳು ಇಲ್ಲಿನ ಈಡನ್‌ ಗಾರ್ಡನ್ಸ್‌ ಅಂಗಳದಲ್ಲಿ ಟೂರ್ನಿಯ ಎರಡನೇ ಪಂದ್ಯದಲ್ಲಿ ಕಣಕ್ಕಿಳಿದಿವೆ. ಟಾಸ್ ಗೆದ್ದಿರುವ ವಿಂಡೀಸ್ ತಂಡದ ನಾಯಕ ಕೀರನ್ ಪೊಲೀರ್ಡ್‌ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ.

ಮೊದಲ ಪಂದ್ಯದಲ್ಲಿ ಎಲ್ಲ ವಿಭಾಗಗಳಲ್ಲೂ ಪ್ರಾಬಲ್ಯ ಮೆರೆದು ಅಧಿಕಾರಯುತ ಜಯ ಸಾಧಿಸಿರುವ ಭಾರತ ಈ ಪಂದ್ಯವನ್ನೂ ಗೆದ್ದು ಸರಣಿ ಜಯಿಸುವ ವಶಪಡಿಸಿಕೊಳ್ಳುವ ವಿಶ್ವಾಸದಲ್ಲಿದೆ.ಅತ್ತ, ಪೊಲಾರ್ಡ್‌ ಪಡೆಯ ಲೆಕ್ಕಾಚಾರ ಬೇರೆಯೇ ಇದೆ. ಚುಟುಕು ಕ್ರಿಕೆಟ್ ಸರಣಿಗೂ ಮುನ್ನ ಅಹಮದಾಬಾದ್‌ನಲ್ಲಿ ನಡೆದ ಏಕದಿನ ಸರಣಿಯಲ್ಲಿ 3–0 ಅಂತರದ ಮುಖಭಂಗ ಅನುಭವಿಸಿರುವ ಪ್ರವಾಸಿ ತಂಡ, ಈ ಪಂದ್ಯವನ್ನಾದರೂ ಗೆದ್ದು ಜಯದ ಹಾದಿಗೆ ಮರಳುವ ತವಕದಲ್ಲಿದೆ.

ವಿಂಡೀಸ್ ಒಂದು ಬದಲಾವಣೆಯೊಂದಿಗೆ ಆಡುತ್ತಿದೆ. ಗಾಯದ ಸಮಸ್ಯೆಯಿಂದಾಗಿ ಮೊದಲ ಪಂದ್ಯದಿಂದ ಹೊರಗುಳಿದಿದ್ದ ಅನುಭವಿ ಆಟಗಾರ ಜೇಸನ್ ಹೋಲ್ಡರ್‌ ಫಿಟ್ ಆಗಿದ್ದು, ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಅವರಿಗಾಗಿ ಫ್ಯಾಬಿಯಾನ್ ಅಲನ್ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಭಾರತ ಯಾವುದೇ ಬದಲಾವಣೆ ಇಲ್ಲದೆ ಕಣಕ್ಕಿಳಿದಿದೆ.

ADVERTISEMENT

ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಇಶಾನ್ ಕಿಶನ್ ಕೇವಲ 2 ರನ್ ಗಳಿಸಿ ಔಟಾಗಿದ್ದಾರೆ. ಸದ್ಯ ವಿರಾಟ್ ಕೊಹ್ಲಿ ಕ್ರೀಸ್‌ಗೆ ಬಂದಿದ್ದು, ತಂಡದ ಮೊತ್ತ 2 ಓವರ್‌ ಮುಕ್ತಾಯಕ್ಕೆ 10 ರನ್ ಆಗಿದೆ.

ಪೊಲಾರ್ಡ್‌ಗೆ 100ನೇ ಪಂದ್ಯ
ವೆಸ್ಟ್‌ ಇಂಡೀಸ್ ತಂಡದ ನಾಯಕ ಕೀರನ್ ಪೊಲಾರ್ಡ್‌ ಅವರಿಗೆ ಇದು ನೂರನೇ ಪಂದ್ಯ. ಇದರೊಂದಿಗೆ ಅವರು ಅಂತರರಾಷ್ಟ್ರೀಯ ಮಟ್ಟದ ಚುಟುಕುಕ್ರಿಕೆಟ್‌ನಲ್ಲಿ 100 ಪಂದ್ಯವಾಡಿದ ವಿಶ್ವದ 9ನೇ ಆಟಗಾರ ಎನಿಸಿದರು.

ಪಾಕಿಸ್ತಾನದ ಶೋಯಬ್ ಮಲಿಕ್ (124), ಭಾರತ ತಂಡದ ನಾಯಕ ರೋಹಿತ್ ಶರ್ಮಾ (121), ಪಾಕಿಸ್ತಾನದ ಮೊಹಮ್ಮದ್ ಹಫೀಜ್ (119), ಇಂಗ್ಲೆಂಡ್ ತಂಡದ ನಾಯಕ ಎಯಾನ ಮಾರ್ಗನ್ (115), ಬಾಂಗ್ಲಾದೇಶದ ಮೊಹಮದುಲ್ಲಾ (113), ನ್ಯೂಜಿಲೆಂಡ್‌ನ ಮಾರ್ಟಿನ್‌ ಗುಪ್ಟಿಲ್ (112), ಐರ್ಲೆಂಡ್‌ನ ಕೆವಿನ್ ಒ'ಬ್ರಿಯಾನ್ (110) ಮತ್ತು ನ್ಯೂಜಿಲೆಂಡ್‌ನ ರಾಸ್ ಟೆಲರ್ (102), ಪೊಲಾರ್ಡ್‌ಗಿಂತ ಹೆಚ್ಚು ಪಂದ್ಯಗಳನ್ನಾಡಿದ್ದಾರೆ.

ಪೊಲಾರ್ಡ್ ಈ ವರೆಗೆ ಆಡಿರುವ 99 ಪಂದ್ಯಗಳ81 ಇನಿಂಗ್ಸ್‌ಗಳಲ್ಲಿ1561 ರನ್‌ ಗಳಿಸಿದ್ದಾರೆ. ಬೌಲಿಂಗ್‌ನಲ್ಲಿಯೂ ಉಪಯುಕ್ತ ಆಟವಾಡಿರುವ ಅವರು,62 ಇನಿಂಗ್ಸ್‌ಗಳಲ್ಲಿ42 ಬ್ಯಾಟರ್‌ಗಳಿಗೆ ಪೆವಿಲಿಯನ್ ದಾರಿ ತೋರಿದ್ದಾರೆ.

ಭಾರತ ತಂಡ
ಇಶಾನ್ ಕಿಶನ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್‌ ಕೀಪರ್), ವೆಂಕಟೇಶ್ ಅಯ್ಯರ್, ದೀಪಕ್ ಚಾಹರ್, ಭುವನೇಶ್ವರ್‌ ಕುಮಾರ್, ಹರ್ಷಲ್ ಪಟೇಲ್, ಯುಜವೇಂದ್ರ ಚಾಹಲ್, ರವಿ ಬಿಷ್ಣೋಯಿ

ವೆಸ್ಟ್‌ ಇಂಡೀಸ್ ತಂಡ
ಬ್ರಂಡನ್ ಕಿಂಗ್, ಕೈಲ್ ಮೆಯರ್ಸ್, ನಿಕೋಲಸ್ ಪೂರನ್ (ವಿಕೆಟ್‌ ಕೀಪರ್), ರಾಮನ್‌ ಪೊವೆಲ್, ಕೀರನ್ ಪೊಲಾರ್ಡ್ (ನಾಯಕ), ಜೇಸನ್‌ ಹೋಲ್ಡರ್‌, ರೋಸ್ಟನ್ ಚೇಸ್, ರೊಮಾರಿಯೊ ಶೆಫರ್ಡ್, ಒಡಿಯನ್ ಸ್ಮಿತ್, ಅಕೀಲ್ ಹೊಸೇನ್, ಶೆಲ್ಡನ್ ಕಾಟ್ರೆಲ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.