ಬೆಂಗಳೂರು: ದೇಶದೆಲ್ಲೆಡೆ 79ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಡಿ.ಕೆ ಶಿವಕುಮಾರ್, ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ದೇಶದ ಜನತೆಗೆ ಶುಭಾಶಯ ಕೋರಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಧಾನಿ ಮೋದಿ, ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ನನಸಾಗಿಸಲು ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಈ ದಿನವು ನಮಗೆ ಇನ್ನಷ್ಟು ಸ್ಫೂರ್ತಿ ನೀಡಲಿ ಎಂದು ಹೇಳಿದ್ದಾರೆ.
'ರಾಷ್ಟ್ರ ರಕ್ಷಣೆಯ ವಿಷಯದಲ್ಲಿ ಯಾವುದೇ ಪರಿಸ್ಥಿತಿ ಎದುರಾದರೂ ಸಶಸ್ತ್ರ ಪಡೆಗಳು ದಿಟ್ಟ ಹೋರಾಟ ನಡೆಸುತ್ತವೆ. ಇದಕ್ಕೆ ಆಪರೇಷನ್ ಸಿಂಧೂರ ಸಾಕ್ಷಿಯಾಗಿದೆ' ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ್ದಾರೆ.
'ನಮಗೆ ಸಿಕ್ಕಿರುವ ಈ ಸ್ವಾತಂತ್ರ್ಯ ನಿರಂತರ ಹೋರಾಟಗಳ ಪ್ರತಿಫಲ. ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವವನ್ನು ಮುಡಿಪಾಗಿಟ್ಟ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ಬಲಿದಾನಗಳನ್ನು ಸ್ಮರಿಸುತ್ತಾ, ಸಶಕ್ತ, ಸಮೃದ್ಧ, ವಿಕಸಿತ ಭಾರತ ನಿರ್ಮಾಣಕ್ಕೆ ಎಲ್ಲರೂ ಒಟ್ಟಾಗಿ ಮುನ್ನಡೆಯೋಣ' ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಈ ಸ್ವಾತಂತ್ರ್ಯವನ್ನು ನಮ್ಮದಾಗಿಸಿಕೊಂಡ ಧೈರ್ಯಶಾಲಿಗಳಿಗೆ ನಮನಗಳು! ಸ್ವಾತಂತ್ರ್ಯವನ್ನು ನೀಡಿದ ಅಸಂಖ್ಯಾತ ವೀರರನ್ನು ನಾನು ನೆನಪಿಸಿಕೊಳ್ಳುತ್ತೇನೆ. ಎಲ್ಲರನ್ನೂ ಒಳಗೊಳ್ಳುವ ಮತ್ತು ಅವಕಾಶಗಳಿಂದ ತುಂಬಿರುವ ಭವಿಷ್ಯಕ್ಕಾಗಿ ಒಟ್ಟಾಗಿ ಕೆಲಸ ಮಾಡುವ ಮೂಲಕ ಈ ಸ್ವಾತಂತ್ರ್ಯವನ್ನು ಗೌರವಿಸೋಣ. ಈ ಅದ್ಭುತ ಪ್ರಯಾಣದ ಭಾಗವಾಗಲು ಮತ್ತು ನನ್ನದೇ ಆದ ರೀತಿಯಲ್ಲಿ ಕೊಡುಗೆ ನೀಡಲು ನನಗೆ ಹೆಮ್ಮೆ ಇದೆ. ಈ ಸ್ವಾತಂತ್ರ್ಯ ದಿನದಂದು, ಬಲವಾದ, ಏಕೀಕೃತ ಭಾರತವನ್ನು ನಿರ್ಮಿಸುವ ನನ್ನ ಬದ್ಧತೆಯನ್ನು ನಾನು ಪುನರುಚ್ಚರಿಸುತ್ತೇನೆ. ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಸ್ವತಂತ್ರ ಭಾರತಕ್ಕಾಗಿ ಹೋರಾಟ, ತ್ಯಾಗ, ಬಲಿದಾನಗೈದ ಅಸಂಖ್ಯಾತ ಮಹಾ ಮಹಿಮರನ್ನು ಸ್ಮರಿಸಿದಾಗ ನನ್ನ ಹೃದಯವು ಹೆಮ್ಮೆ ಮತ್ತು ಕೃತಜ್ಞತೆಯಿಂದ ತುಂಬಿ ಬರುತ್ತಿದೆ. ಸರ್ವಸ್ವವನ್ನೂ ತ್ಯಜಿಸಿ ಅತೀವ ಧೈರ್ಯ, ದೃಢ ಸಂಕಲ್ಪದಿಂದ ಹೋರಾಡಿದ ಇವರೆಲ್ಲರ ತ್ಯಾಗದ ಫಲವಾಗಿ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಜನತಂತ್ರ ಪರಂಪರೆಯ ಭಾಗವಾಗಿ ನಾವು ಜೀವಿಸುತ್ತಿದ್ದೇವೆ. ನಾವೆಲ್ಲರೂ ಇಂದು ನಮ್ಮದೇ ಆಗಿರುವ ಸಾರ್ವಭೌಮ, ಪ್ರಜಾಪ್ರಭುತ್ವ ಮತ್ತು ಚೈತನ್ಯಶೀಲ ರಾಷ್ಟ್ರದಲ್ಲಿದ್ದೇವೆ.ಇದು ಕೇವಲ ಆಚರಣೆಯ ದಿನವಲ್ಲ, ತಾಯ್ನಾಡು ಗಳಿಸಿದ ಮಹೋನ್ನತ ಸ್ವಾತಂತ್ರ್ಯವನ್ನು ರಕ್ಷಿಸುವ ಮತ್ತು ಸಂರಕ್ಷಿಸುವ ನಮ್ಮ ಬದ್ಧತೆ, ಪ್ರತಿಜ್ಞೆಯನ್ನು ಪುನರುಚ್ಚರಿಸುವ ದಿನ ಎಂದು ಕೇಂದ್ರ ಸಚಿವ ಎಚ್,ಡಿ ಕುಮಾರ ಸ್ವಾಮಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.