ರಾಜನಾಥ ಸಿಂಗ್
(ಪಿಟಿಐ ಚಿತ್ರ)
ರಾಯ್‌ಸೆನ್: ಭಾರತದ ಆರ್ಥಿಕತೆ ವಿಶ್ವದ ಅತ್ಯಂತ 'ಚುರುಕಾದ' ಹಾಗೂ 'ಕ್ರಿಯಾತ್ಮಕ' ಎಂದು ಬಣ್ಣಿಸಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್, 'ನಾವು ಎಲ್ಲರಿಗೂ ಬಾಸ್' ಎಂಬ ಮನೋಭಾವ ಹೊಂದಿರುವರಿಗೆ ಇದನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಮೆರಿಕಕ್ಕೆ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತದ ಮೇಲೆ ಹೆಚ್ಚುವರಿ ಶೇ 25 ದಂಡ ಸೇರಿದಂತೆ ಒಟ್ಟಾರೆಯಾಗಿ ಭಾರತದ ಸರಕುಗಳ ಮೇಲೆ ಅಮೆರಿಕ ಶೇ 50ರಷ್ಟು ಸುಂಕ ವಿಧಿಸಿತ್ತು.
ಮಧ್ಯಪ್ರೇಶದ ರಾಯ್‌ಸೆನ್ ಜಿಲ್ಲೆಯಲ್ಲಿ 'ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್'ನ (ಬಿಇಎಂಎಲ್) ರೈಲು ಬೋಗಿ ನಿರ್ಮಾಣ ಘಟಕದ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ರಾಜನಾಥ, 'ಭಾರತವು ಅತ್ಯಂತ ವೇಗವಾಗಿ ಬೆಳವಣಿಗೆ ಸಾಧಿಸುತ್ತಿದ್ದು, ಜಾಗತಿಕವಾಗಿ ಅಶ್ವ ಶಕ್ತಿಯಾಗುವುದನ್ನು ಜಗತ್ತಿನ ಯಾವುದೇ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ' ಎಂದಿದ್ದಾರೆ.
'ಭಾರತದ ತ್ವರಿತ ಬೆಳವಣಿಗೆಯನ್ನು ಕೆಲವರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ' ಎಂದು ಅಮೆರಿಕವನ್ನು ಉಲ್ಲೇಖಿಸದೆಯೇ ರಾಜನಾಥ ಟೀಕೆ ಮಾಡಿದ್ದಾರೆ.
'ನಾವೇ ಎಲ್ಲರಿಗೂ ಬಾಸ್' ಎಂದು ಅವರು ಭಾವಿಸುತ್ತಾರೆ. ಭಾರತಕ್ಕೆ ಕ್ಷಿಪ್ರ ಬೆಳವಣಿಗೆ ಹೇಗೆ ಸಾಧ್ಯ? ಅದಕ್ಕಾಗಿ ಏನಾದರೂ ಮಾಡಲು ಯತ್ನಿಸುತ್ತಾರೆ. ಭಾರತದ ಉತ್ಪನ್ನಗಳನ್ನು ವಿದೇಶಗಳಲ್ಲಿ ದುಬಾರಿಯಾಗುವಂತೆ ಮಾಡುತ್ತಾರೆ ಎಂದಿದ್ದಾರೆ.
'2014ರಲ್ಲಿ ಭಾರತದ ಆರ್ಥಿಕತೆ 11ನೇ ಸ್ಥಾನದಲ್ಲಿತ್ತು. ಈಗ ಅಗ್ರ 4ಕ್ಕೆ ಲಗ್ಗೆ ಇಟ್ಟಿದೆ. ವಿಶ್ವದಲ್ಲೇ ಕ್ಷಿಪ್ರ ಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿರುವ ರಾಷ್ಟ್ರ ಭಾರತವಾಗಿದೆ' ಎಂದು ಅವರು ಉಲ್ಲೇಖಿಸಿದ್ದಾರೆ.
ರಾಜನಾಥ ಸಿಂಗ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.