ಮುಂಬೈ: ಭಾನುವಾರ ದುಬೈನಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಟಿ20 ಪಂದ್ಯದಲ್ಲಿ ₹1.5 ಲಕ್ಷ ಕೋಟಿಯಷ್ಟು ಜೂಜು ನಡೆದಿದೆ ಎಂದು ಶಿವಸೇನಾ(ಯುಬಿಟಿ) ನಾಯಕ, ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ಆರೋಪಿಸಿದ್ದಾರೆ.
ಇದರಲ್ಲಿ ₹25,000 ಕೋಟಿ ಪಾಕಿಸ್ತಾನಕ್ಕೆ ಹೋಗಿದೆ ಎಂದು ಅವರು ಹೇಳಿದ್ದಾರೆ.
ಪಂದ್ಯದ ಕುರಿತಂತೆ ವರದಿಗಾರರ ಜೊತೆ ಮಾತನಾಡಿದ ರಾವುತ್, ಈ ಪಂದ್ಯದಿಂದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ₹1,000 ಕೋಟಿ ಆದಾಯ ಬಂದಿದೆ. ಮತ್ತೆ ಅದೆಲ್ಲವನ್ನೂ ಅವರು ನಮ್ಮ ದೇಶದ ವಿರುದ್ಧವೇ ಬಳಸುತ್ತಾರೆ ಎಂದಿದ್ದಾರೆ.
'ನಿನ್ನೆಯ ಪಂದ್ಯದಲ್ಲಿ ₹1.5 ಲಕ್ಷ ಕೋಟಿಯಷ್ಟು ಜೂಜಾಟ ನಡೆದಿದ್ದು, ಅದರಲ್ಲಿ ₹25,000 ಕೋಟಿ ಪಾಕಿಸ್ತಾನಕ್ಕೆ ಹೋಗಿದೆ. ಈ ಹಣವನ್ನು ಅವರು ನಮ್ಮ ವಿರುದ್ಧವೇ ಬಳಸುತ್ತಾರೆ. ಸರ್ಕಾರ ಅಥವಾ ಬಿಸಿಸಿಐಗೆ ಅದು ತಿಳಿದಿಲ್ಲವೇ?’ಎಂದು ರಾವುತ್ ಪ್ರಶ್ನಿಸಿದ್ದಾರೆ.
ಪಂದ್ಯದ ಸಂದರ್ಭದಲ್ಲಿ ಪಾಕಿಸ್ತಾನದ ಆಟಗಾರರ ಜೊತೆ ಸಾಂಪ್ರದಾಯಿಕ ಹಸ್ತಲಾಘವವನ್ನು ಭಾರತದ ಆಟಗಾರರು ನಿರಾಕರಿಸಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದೊಂದು ಪ್ರಹಸನವಷ್ಟೇ. ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನತೆ ಇದ್ದರೂ ಪಂದ್ಯವನ್ನು ಏಕೆ ನಡೆಸಲಾಯಿತು? ಎಂದು ಪ್ರಶ್ನಿಸಿದ್ದಾರೆ.
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿ ಬಳಿಕ ಭಾರತವು ಪಾಕಿಸ್ತಾನದ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿತ್ತು. ಪಾಕ್‌ನ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.