ADVERTISEMENT

‌ಕದನ ವಿರಾಮ ಘೋಷಣೆ ಕುರಿತು ಟ್ರೋಲ್‌: ವಿಕ್ರಮ್ ಮಿಸ್ರಿ ಪರ ನಿಂತ ನಾಯಕರು

ಪಿಟಿಐ
Published 12 ಮೇ 2025, 4:19 IST
Last Updated 12 ಮೇ 2025, 4:19 IST
<div class="paragraphs"><p>ವಿಕ್ರಮ್ ಮಿಸ್ರಿ</p></div>

ವಿಕ್ರಮ್ ಮಿಸ್ರಿ

   

ನವದೆಹಲಿ: ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಸ್ರಿ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ‘ಟ್ರೋಲ್‌’ ಮಾಡಿದ್ದಕ್ಕೆ ನಿವೃತ್ತ ರಾಯಭಾರಿಗಳು ಮತ್ತು ರಾಜಕಾರಣಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸೇನಾ ಸಂಘರ್ಷ ಶಮನಕ್ಕೆ ಭಾರತ ಮತ್ತು ಪಾಕಿಸ್ತಾನ ಸಮ್ಮತಿಸಿದ ಕುರಿತು ಮಾಹಿತಿ ನೀಡಿದ್ದ ಮಿಸ್ರಿ ಅವರನ್ನು ಮತ್ತು ಅವರ ಕುಟುಂಬದವರನ್ನು ಗುರಿಯಾಗಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಗೇಲಿ ಮಾಡಿ, ಅವಮಾನಿಸುವ ಸಂದೇಶಗಳು ಹರಿದಾಡಿದ್ದವು. 

ADVERTISEMENT

ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ಮೆನನ್ ರಾವ್, ರಾಜಕಾರಣಿಗಳಾದ ಅಖಿಲೇಶ್‌ ಯಾದವ್‌ ಮತ್ತು ಅಸಾದುದ್ದೀನ್‌ ಓವೈಸಿ ಅವರು ಮಿಸ್ರಿ ಅವರನ್ನು ಬೆಂಬಲಿಸಿ ಪೋಸ್ಟ್‌ಗಳನ್ನು ಮಾಡಿದ್ದಾರೆ.

‘ದೇಶಕ್ಕಾಗಿ ಹಗಲು– ರಾತ್ರಿ ದುಡಿಯುತ್ತಿರುವ ಪ್ರಾಮಾಣಿಕ ಅಧಿಕಾರಿಗಳನ್ನು ನೈತಿಕವಾಗಿ ಕುಗ್ಗಿಸುವಂತೆ ಹೀಗಳಿಯುವುದು ಸರಿಯಲ್ಲ. ಸರ್ಕಾರ ತೆಗೆದುಕೊಳ್ಳುವ ನಿರ್ಧಾರಗಳಿಗೆ ಅಧಿಕಾರಿಗಳನ್ನು ವೈಯಕ್ತಿಕವಾಗಿ ಮತ್ತು ಅವರ ಕುಟುಂಬದ ಸದಸ್ಯರನ್ನು ನಿಂದಿಸುವುದು, ಟೀಕಿಸುವುದು ಸಲ್ಲ. ಅಧಿಕಾರಿಯ ಗೌರವವನ್ನು ರಕ್ಷಿಸುವ ಜವಾಬ್ದಾರಿ ಬಿಜೆಪಿ ಸರ್ಕಾರ ಅಥವಾ ಅದರ ಸಚಿವರದ್ದಾಗಿದೆ. ಅಲ್ಲದೆ ನಿಂದಿಸಿ ಪೋಸ್ಟ್‌ಗಳನ್ನು ಮಾಡಿದವರ ವಿರುದ್ಧ ಕಠಿಣ ಕ್ರಮವನ್ನೂ ಸರ್ಕಾರ ತೆಗೆದುಕೊಳ್ಳಬೇಕು’ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌ ‘ಎಕ್ಸ್‌’ನಲ್ಲಿ ಆಗ್ರಹಿಸಿದ್ದಾರೆ.

‘ಕದನ ವಿರಾಮ’ ನಿರ್ಧಾರದ ಕುರಿತು ಮಾಹಿತಿ ಪ್ರಕಟಿಸಿದ್ದಕ್ಕಾಗಿ ಮಿಸ್ರಿ ಮತ್ತು ಅವರ ಕುಟುಂಬದವರನ್ನು ಅವಮಾನಿಸುವುದು ಅತ್ಯಂತ ನಾಚಿಕೆಗೇಡಿನ ಸಂಗತಿ’ ಎಂದು ಮಾಜಿ ವಿದೇಶಾಂಗ ಕಾರ್ಯದರ್ಶಿ ನಿರುಪಮಾ ಮೆನನ್ ರಾವ್ ಕಿಡಿಕಾರಿದ್ದಾರೆ.

‘ನಿಷ್ಠಾವಂತ ಅಧಿಕಾರಿ ಆಗಿರುವ ಮಿಸ್ರಿ ಅವರು ಅತ್ಯಂತ ವೃತ್ತಿಪರವಾಗಿ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ. ಅಂಥವರ ಮಗಳು ಮತ್ತು ಕುಟುಂಬದವರ ಬಗ್ಗೆ ಟ್ರೋಲ್‌ ಮಾಡುವುದು ಎಂದರೆ, ಅದು ಸಭ್ಯತೆಯ ಎಲ್ಲೆ ಮೀರಿದಂತೆ. ಹೀಗೆ ವಿಷಕಾರಿಯಾಗಿ ದ್ವೇಷಕಾರುವುದು ನಿಲ್ಲಬೇಕು. ಅಧಿಕಾರಿಯ ಬೆಂಬಲಕ್ಕೆ ನಾವೆಲ್ಲ ಒಟ್ಟಾಗಿ ನಿಲ್ಲಬೇಕು’ ಎಂದು ಅವರು ಪೋಸ್ಟ್‌ನಲ್ಲಿ ಕರೆ ನೀಡಿದ್ದಾರೆ.

‘ಮಿಸ್ರಿ ಅವರು ಸಭ್ಯ, ಪ್ರಾಮಾಣಿಕ ಅಧಿಕಾರಿಯಾಗಿದ್ದು, ದೇಶಕ್ಕಾಗಿ ಅವಿರತ ದುಡಿಯುತ್ತಿದ್ದಾರೆ. ದೇಶದ ರಾಜಕೀಯ ನಾಯಕರು ತೆಗೆದುಕೊಳ್ಳುವ ನಿರ್ಧಾರಗಳಿಗೆ ಅಧಿಕಾರಿಗಳನ್ನು ದೂಷಿಸುವುದು ಸರಿಯಲ್ಲ’ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಈ ರೀತಿಯ ಟ್ರೋಲ್‌ಗಳು ನಾಚಿಕೆಗೇಡಿನಿಂದ ಕೂಡಿವೆ. ಇಷ್ಟಾದರೂ ಸರ್ಕಾರ ಏಕೆ ಸುಮ್ಮನಿದೆ?
– ಸಿಪಿಐ (ಎಂ)

ಎನ್‌ಸಿಡಬ್ಲ್ಯು ಖಂಡನೆ

ನವದೆಹಲಿ: ವಿದೇಶಾಂಗ ಕಾರ್ಯದರ್ಶಿ ವಿಕ್ರಮ್‌ ಮಿಸ್ರಿ ಮತ್ತು ಅವರ ಮಗಳು ಸೇರಿದಂತೆ ಇಡೀ ಕುಟುಂಬವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್‌ ಮಾಡಿರುವುದನ್ನು ರಾಷ್ಟ್ರೀಯ ಮಹಿಳಾ ಆಯೋಗ ತೀವ್ರವಾಗಿ ಖಂಡಿಸಿದೆ.

‘ಯುವತಿಯ ವೈಯಕ್ತಿಕ ಮಾಹಿತಿಯನ್ನು ಕಲೆ ಹಾಕಿ ಹಂಚಿಕೊಳ್ಳುವುದು ಅತ್ಯಂತ ಬೇಜವಾಬ್ದಾರಿಯುತ ಕೃತ್ಯವಾಗಿದೆ. ಇದು ಗೋಪ್ಯತೆಯ ಗಂಭೀರ ಉಲ್ಲಂಘನೆಯಾಗಿದ್ದು ಯುವತಿಯ ಸುರಕ್ಷತೆಗೆ ಅಪಾಯ ತಂದೊಡ್ಡಬಹುದು’ ಎಂದು ಎನ್‌ಸಿಡಬ್ಲ್ಯು ಅಧ್ಯಕ್ಷರಾದ ವಿಜಯಾ ರಹಾಟ್ಕರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತೀಯ ರಾಯಭಾರಿಗಳ ಸಂಘ ಸಹ ಇದನ್ನು ತೀವ್ರವಾಗಿ ಖಂಡಿಸಿದ್ದು ಈ ರೀತಿ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.