ADVERTISEMENT

ಭಾರತ– ಪಾಕ್‌ ಸಂಘರ್ಷ | ಎರಡೂ ದೇಶಗಳಿಗೆ ಆಪತ್ತು: ಪಿಡಿಪಿ ಪಕ್ಷ

ಪಿಟಿಐ
Published 16 ಮೇ 2025, 5:47 IST
Last Updated 16 ಮೇ 2025, 5:47 IST
<div class="paragraphs"><p>ಪಿಡಿಪಿ ಪಕ್ಷದ ಲೊಗೊ</p></div>

ಪಿಡಿಪಿ ಪಕ್ಷದ ಲೊಗೊ

   

ಶ್ರೀನಗರ: ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ಇನ್ನು ಮುಂದೆ ಒಂದು ಆಯ್ಕೆಯಾಗಿ ಉಳಿಯದೆ ಎರಡೂ ದೇಶಗಳಿಗೆ ಆಪತ್ತಾಗಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೀಪಲ್ಸ್‌ ಡೆಮಾಕ್ರೆಟಿಕ್ ಪಕ್ಷ (ಪಿಡಿಪಿ) ಹೇಳಿದೆ.

ತನ್ನ ಮಾಸಿಕ ಸುದ್ದಿಪತ್ರ ‘ಸ್ಪೀಕ್ ಅಪ್’ ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದ ಕುರಿತು ಬರೆದಿದ್ದು, ಇದು ವಿರೋಧ ಪಕ್ಷಗಳು ಸಂಯಮವನ್ನು ತೋರಿಸುವ, ಉದ್ವಿಗ್ನತೆಯನ್ನು ಕಡಿಮೆ ಮಾಡುವ ಮತ್ತು ಸಂವಾದ ನಡೆಸುವ ಸಮಯ ಎಂದು ಹೇಳಿದೆ.

ADVERTISEMENT

ಯುದ್ಧ ಇನ್ನು ಮುಂದೆ ಒಂದು ಆಯ್ಕೆಯಲ್ಲ; ನಾಯಕತ್ವವು ಸಂದರ್ಭಕ್ಕೆ ತಕ್ಕಂತೆ ಕಾರ್ಯನಿರ್ವಹಿಸದಿದ್ದರೆ ಅದು ನೆರೆಹೊರೆಯ ಎರಡು ದೇಶಗಳಿಗೆ ವಿಪತ್ತಾಗಿ ಪರಿಣಮಿಸಲಿದೆ. ಈಗ ವಿಜಯೋತ್ಸವದ ಸಮಯವಲ್ಲ. ಸಂಯಮದ ಸಮಯ ಎಂದು ಅಭಿಪ್ರಾಯಪಟ್ಟಿದೆ.

ಕಳೆದ ಎರಡು ವಾರಗಳ ಘಟನೆಯ ಕುರಿತು ಉಲ್ಲೇಖಿಸಿ, ಈ ತಿಂಗಳು ಕೆಲವು ಭಯಾನಕ ವಾರಗಳನ್ನು ನೋಡಿದೆವು. ಕ್ಷಿಪಣಿಗಳ ಹಾರಾಟ, ಗಡಿ ಪ್ರದೇಶಗಳಲ್ಲಿ ಡ್ರೋನ್‌ಗಳ ಸದ್ದು ಗಡಿ ನಿಯಂತ್ರಣಾ ರೇಖೆಯಲ್ಲಿರುವ ಹಳ್ಳಿಗಳ ಮೇಲೆ ಪರಿಣಾಮ ಬೀರಿದೆ. ಅದು ಕೇವಲ ಉಭಯ ದೇಶಗಳ ನಡುವಿನ ಹೋರಾಟವಾಗಿರಲಿಲ್ಲ. ಎರಡೂ ಕಡೆಯ ನಾಗರಿಕರು ಬೆಲೆ ತೆತ್ತಿದ್ದಾರೆ. ಮಕ್ಕಳು ಸಾವಿಗೀಡಾದರು, ಕುಟುಂಬಗಳು ಮನೆ ತೊರೆದವು, ಕೃಷಿ ಭೂಮಿ ರಾತ್ರೋರಾತ್ರಿ ಮಿಲಿಟರಿ ಹೋರಾಟದ ಪ್ರದೇಶಗಳಾಗಿ ಮಾರ್ಪಟ್ಟಿತು ಎಂದು ವಿಷಾದಿಸಿದೆ.

ಭಯೋತ್ಪಾದನೆಗೆ ಸೇಡು ತೀರಿಸಿಕೊಳ್ಳುವುದು ಮತ್ತು ಸಾರ್ವಭೌಮತ್ವವನ್ನು ರಕ್ಷಿಸುವುದು ಈ ಸಂಘರ್ಷದ ಉದ್ದೇಶವಾಗಿದ್ದರೂ, ಜಮ್ಮು ಮತ್ತು ಕಾಶ್ಮೀರದ ಜನರು ಮತ್ತೊಮ್ಮೆ ಗುಂಡಿನ ಸದ್ದಿಗೆ ಸಾಕ್ಷಿಯಾದರು. ಯುದ್ಧದ ಸೈರನ್‌ಗಳು ಜೋರಾದಂತೆ ತಪ್ಪು, ಸುಳ್ಳು ಮಾಹಿತಿಗಳೂ ಹೆಚ್ಚಾದವು. ಟಿವಿ ಮಾಧ್ಯಮಗಳು ಬ್ಯಾರಕ್‌ಗಳಾಗಿ, ಸಾಮಾಜಿಕ ಮಾಧ್ಯಮಗಳು ಯುದ್ಧಭೂಮಿಯಾಗಿ ಮಾರ್ಪಟ್ಟವು. ನಕಲಿ ವಿಡಿಯೊಗಳು, ದೇಶದ್ರೋಹಿ ಹ್ಯಾಶ್‌ಟ್ಯಾಗ್‌ಗಳು ಸಾರ್ವಜನಿಕ ವಲಯದಲ್ಲಿ ಕಾಳ್ಗಿಚ್ಚಿನಂತೆ ಹರಡಿದವು. ಮನಸ್ಸುಗಳನ್ನು ಓಲೈಸುವ, ಭಿನ್ನಾಭಿಪ್ರಾಯಗಳನ್ನು ತಿಳಿಗೊಳಿಸುವ, ಮತಗಳನ್ನು ಗೆಲ್ಲುವ ಉದ್ದೇಶದಿಂದ ನಡೆದ ಪ್ರಚಾರ ಯುದ್ಧದಲ್ಲಿ ಸತ್ಯಕ್ಕೆ ಹಾನಿಯಾಯಿತು’ ಎಂದು ಪಕ್ಷ ಬರೆದುಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.