ಎಸ್-400 ಟ್ರಯಂಫ್ ಕ್ಷಿಪಣಿ ವ್ಯವಸ್ಥೆ
ನವದೆಹಲಿ: ಪಾಕ್ ವಿರುದ್ಧದ ‘ಆಪರೇಷನ್ ಸಿಂಧೂರ’ ಸೇನಾ ಕಾರ್ಯಾಚರಣೆ ಯಶಸ್ಸಿನ ಬೆನ್ನಲ್ಲೇ ಹೆಚ್ಚುವರಿ ಅತ್ಯಾಧುನಿಕ ಎಸ್–400 ಟ್ರಯಂಫ್ ಕ್ಷಿಪಣಿ ವ್ಯವಸ್ಥೆಯನ್ನು ಒದಗಿಸುವಂತೆ ರಷ್ಯಾಕ್ಕೆ ಭಾರತ ಮನವಿ ಮಾಡಿದೆ ಎಂದು ವರದಿಯಾಗಿದೆ.
ಭಾರತದ ಮನವಿಯನ್ನು ರಷ್ಯಾ ಶೀಘ್ರವೇ ಪೂರೈಸುವ ಸಾಧ್ಯತೆ ಇದೆ ಎಂದು ಸುದ್ದಿಸಂಸ್ಥೆ ‘ಸ್ಪುಟ್ನಿಕ್ ಇಂಡಿಯಾ’ ವರದಿ ಮಾಡಿದೆ.
‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಭಾರತೀಯ ಪಡೆಗಳು ಎಸ್–400 ಟ್ರಯಂಫ್ ಕ್ಷಿಪಣಿ ವ್ಯವಸ್ಥೆ, ಬರಾಕ್–8 ಹಾಗೂ ಆಕಾಶ್ ಕ್ಷಿಪಣಿಗಳನ್ನು ಬಳಸುತ್ತಿವೆ ಎಂದು ಉನ್ನತ ಮೂಲಗಳು ಹೇಳಿವೆ.
ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ದಾಳಿಗೆ ಪ್ರತ್ಯುತ್ತರ ನೀಡಲು ಭಾರತವು ಮೇ 7ರಂದು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆ ಆರಂಭಿಸಿದೆ. ಪಾಕಿಸ್ತಾನ ಪಡೆಗಳು ಭಾರತದ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿಗಳಿಂದ ದಾಳಿ ನಡೆಸುವ ಮೂಲಕ ಉದ್ವಿಗ್ನತೆ ಸೃಷ್ಟಿಗೆ ಯತ್ನಿಸಿದವು. ಆದರೆ, ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಗಳನ್ನು ಬಳಸುವ ಮೂಲಕ ಭಾರತವು ಶತ್ರು ಪಾಳಯದ ದಾಳಿಯನ್ನು ಸಮರ್ಥವಾಗಿ ತಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.