ಮಧ್ಯಪ್ರದೇಶದ ಜಬಲ್ಪುರದಲ್ಲಿ ಕಟಾರಿಯಾ ಫಾರ್ಮಾಸ್ಯೂಟಿಕಲ್ಸ್ ಮೇಲೆ ಡ್ರಗ್ಸ್ ಮತ್ತು ಫಾರ್ಮಾಸ್ಯೂಟಿಕಲ್ಸ್ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿ ವೇಳೆ ವಶಪಡಿಸಿಕೊಂಡ ಕೆಮ್ಮಿನ ಸಿರಪ್ ‘ಕೋಲ್ಡ್ರಿಫ್’ ಬಾಟಲಿಗಳನ್ನು ಅಧಿಕಾರಿಯೊಬ್ಬರು ಶನಿವಾರ ಪರಿಶೀಲಿಸಿದರು
–ಪಿಟಿಐ ಚಿತ್ರ
ನವದೆಹಲಿ/ಹೈದರಾಬಾದ್/ಚೆನ್ನೈ: ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಒಟ್ಟು 11 ಮಕ್ಕಳ ಸಾವಿಗೆ ಕಲುಷಿತ ಕೆಮ್ಮಿನ ಸಿರಪ್ ಕಾರಣವೇ ಎಂಬ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಆರೋಗ್ಯ ಸಚಿವಾಲಯ ಶನಿವಾರ ಹೇಳಿದೆ.
ತಮಿಳುನಾಡಿನಲ್ಲಿ ತಯಾರಾದ ಕೆಮ್ಮಿನ ಸಿರಪ್ ‘ಕೋಲ್ಡ್ರಿಫ್’ನ ಮಾದರಿಗಳಲ್ಲಿ ‘ಡೈಇಥಿಲೀನ್ ಗ್ಲೈಕೋಲ್(ಡಿಇಜಿ) ಎಂಬ ದ್ರಾವಣದ ಪ್ರಮಾಣ ಅನುಮತಿಸಿದ ಮಿತಿಗಿಂತಲೂ ಅಧಿಕ ಮಟ್ಟದಲ್ಲಿ ಇತ್ತು ಎಂಬುದು ಪರೀಕ್ಷೆಯಿಂದ ದೃಢಪಟ್ಟಿದೆ. ಹೀಗಾಗಿ, ಮಕ್ಕಳ ಸಾವಿಗೂ, ಈ ಕೆಮ್ಮಿನ ಸಿರಪ್‌ಗೂ ನಂಟು ಇದೆಯೇ ಎಂಬುದನ್ನು ಪತ್ತೆ ಮಾಡಲು ತನಿಖೆ ನಡೆಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.
ಕಾಂಚಿಪುರಂ ಜಿಲ್ಲೆಯ ಸುಂಗುವರಚತ್ರಂನಲ್ಲಿರುವ ಸ್ರೇಸನ್ ಫಾರ್ಮಾ ಕಂಪನಿಯ ಘಟಕದಲ್ಲಿ ‘ಕೋಲ್ಡ್ರಿಫ್’ ಅನ್ನು ತಯಾರಿಸಲಾಗುತ್ತಿದೆ. ಈ ಸಿರಪ್‌ಅನ್ನು ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಪುದುಚೇರಿಗೆ ಪೂರೈಸಲಾಗುತ್ತಿದೆ.
ಮಧ್ಯಪ್ರದೇಶದ ಛಿಂದ್ವಾರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ 9 ಮಕ್ಕಳು ಹಾಗೂ ರಾಜಸ್ಥಾನದಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಈ ಸಾವುಗಳಿಗೆ ಕೆಮ್ಮಿನ ಸಿರಪ್ ಸೇವನೆಯೇ ಕಾರಣ ಎಂಬ ಶಂಕೆಯೂ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ, ಸಚಿವಾಲಯ ತನಿಖೆಗೆ ಮುಂದಾಗಿದೆ.
‘ಡಿಇಜಿ’ ವಿಷಕಾರಿ ದ್ರಾವಣವಾಗಿದ್ದು, ಅದನ್ನು ವಿವಿಧ ಕೈಗಾರಿಕೆಗಳಲ್ಲಿ ಬಳಸಲಾಗುತ್ತದೆ. ಅನೇಕ ದೇಶಗಳಲ್ಲಿ ಸಂಭವಿಸಿದ ಸಾವುಗಳಿಗೆ ಈ ದ್ರಾವಣ ಕಾರಣ ಎಂದು ಹೇಳಲಾಗುತ್ತಿದೆ. ಅನುಮತಿಸಿದ ಮಿತಿಗಿಂತಲೂ ಅಧಿಕ ಪ್ರಮಾಣದಲ್ಲಿ ‘ಡಿಇಜಿ’ ಹಾಗೂ ಇಥಿಲೀನ್ ಗ್ಲೈಕೋಲ್(ಇಜಿ) ಬಳಕೆಯಿಂದ ಮೂತ್ರಪಿಂಡಕ್ಕೆ ಹಾನಿ ಉಂಟಾಗುತ್ತದೆ.
ಪರಿಶೀಲನೆ: ಆರು ರಾಜ್ಯಗಳಲ್ಲಿರುವ 19 ಔಷಧ ತಯಾರಿಕೆ ಘಟಕಗಳಲ್ಲಿ ಉತ್ಪಾದನೆಯಾಗುತ್ತಿರುವ ಕೆಮ್ಮಿನ ಸಿರಪ್ ಹಾಗೂ ಆ್ಯಂಟಿಬಯೊಟಿಕ್ ಸೇರಿ ಇತರ ಔಷಧಿಗಳು ಎಷ್ಟರ ಮಟ್ಟಿಗೆ ಸುರಕ್ಷಿತ ಎಂಬುದನ್ನು ಪರಿಶೀಲಿಸುವ ಕಾರ್ಯಕ್ಕೆ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯು (ಸಿಡಿಎಸ್‌ಸಿಒ) ಚಾಲನೆ ನೀಡಿದೆ ಆರೋಗ್ಯ ಸಚಿವಾಲಯ ತಿಳಿಸಿದೆ.
ರಾಷ್ಟ್ರೀಯ ವೈರಾಣು ಸಂಸ್ಥೆ(ಎನ್‌ಐವಿ), ಐಸಿಎಂಆರ್, ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್ ಸಂಶೋಧನಾ ಸಂಸ್ಥೆ, ಸಿಡಿಎಸ್‌ಸಿಒ ಹಾಗೂ ನಾಗ್ಪುರದ ಎಐಐಎಂಎಸ್‌ನ ತಜ್ಞರನ್ನು ಒಳಗೊಂಡ ತಂಡವು, ಮಕ್ಕಳ ಸಾವಿಗೆ ಕಾರಣ ಎನ್ನಲಾದ ಕೆಮ್ಮಿನ ಸಿರಪ್‌ನ ಮಾದರಿಗಳ ವಿಶ್ಲೇಷಣೆಯನ್ನು ಸಹ ಕೈಗೊಂಡಿದೆ.
ಮಧ್ಯಪ್ರದೇಶ ಸರ್ಕಾರದ ಮನವಿ ಮೇರೆಗೆ ತಮಿಳುನಾಡು ಆಹಾರ ಸುರಕ್ಷತೆ ಮತ್ತು ಔಷಧ ನಿರ್ವಹಣೆ ಇಲಾಖೆಯು ಕೆಮ್ಮಿನ ಸಿರಪ್ ‘ಕೋಲ್ಡ್ರಿಫ್’ನ ಮಾದರಿಗಳ ಪರೀಕ್ಷೆ ನಡೆಸಿದೆ. ಈ ಮಾದರಿಗಳಲ್ಲಿ ಅನುಮತಿಸಿದ ಮಿತಿಗಿಂತ ಅಧಿಕ ಪ್ರಮಾಣದಲ್ಲಿ ‘ಡಿಇಜಿ’ ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ತಮಿಳುನಾಡು ಆಹಾರ ಸುರಕ್ಷತೆ ಮತ್ತು ಔಷಧ ನಿರ್ವಹಣೆ ಇಲಾಖೆ ಅಧಿಕಾರಿಯೊಬ್ಬರು ಕೂಡ ಇದೇ ಮಾಹಿತಿ ನೀಡಿದ್ದಾರೆ. ತಮಿಳುನಾಡಿನ ಕಾಂಚಿಪುರಂನಲ್ಲಿರುವ ಸ್ರೇಸನ್ ಫಾರ್ಮಾ ಕಂಪನಿಯ ಘಟಕದಲ್ಲಿ ಈ ಸಿರಪ್ ಅನ್ನು ತಯಾರಿಸಲಾಗುತ್ತಿದೆ. ತನ್ನ ಘಟಕದಲ್ಲಿ ತಯಾರಾಗುವ ಕೆಮ್ಮಿನ ಸಿರಪ್‌ನಲ್ಲಿ ‘ಡಿಇಜಿ’ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿ ಇರುವ ಕುರಿತು ಸ್ರೇಸನ್ ಫಾರ್ಮಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ರಾಯಿಟರ್ಸ್ ವರದಿ ಮಾಡಿದೆ.
‘ಕೆಮ್ಮಿನ ಸಿರಪ್ ಪರೀಕ್ಷಾ ವರದಿ ಕೈಸೇರಿದ ಬೆನ್ನಲ್ಲೇ ಅಕ್ಟೋಬರ್ 1ರಿಂದ ಅನ್ವಯವಾಗುವಂತೆ ರಾಜ್ಯದಲ್ಲಿ ‘ಕೋಲ್ಡ್ರಿಫ್’ ಮಾರಾಟವನ್ನು ತಮಿಳುನಾಡು ಸರ್ಕಾರ ನಿಷೇಧಿಸಿದೆ. ಮಾರುಕಟ್ಟೆಯಿಂದ ಈ ಸಿರಪ್ ಅನ್ನು ಹಿಂಪಡೆಯುವಂತೆಯೂ ಸೂಚಿಸಿದೆ’ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಸಿಡಿಎಸ್‌ಸಿಒ ಆರು ಹಾಗೂ ಮಧ್ಯಪ್ರದೇಶದ ಆಹಾರ ಮತ್ತು ಔಷಧ ನಿರ್ವಹಣೆ(ಎಂಪಿಎಫ್‌ಡಿಎ) ಇಲಾಖೆ ಮೂರು ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿತ್ತು. ಈ ಮಾದರಿಗಳಲ್ಲಿ ಡೈಇಥಿಲೀನ್ ಗ್ಲೈಕೋಲ್(ಡಿಇಜಿ) ಮತ್ತು ಇಥಿಲೀನ್ ಗ್ಲೈಕೋಲ್(ಇಜಿ) ಕಂಡುಬಂದಿಲ್ಲ ಎಂದು ಆರೋಗ್ಯ ಸಚಿವಾಲಯ ಶುಕ್ರವಾರ ಹೇಳಿತ್ತು.
ಜೈಪುರ: ಕೆಮ್ಮಿನ ಸಿರಪ್ ಸೇವನೆಯಿಂದಾಗಿ ರಾಜ್ಯದಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಎನ್ನಲಾದ ಘಟನೆಗೆ ಸಂಬಂಧಿಸಿ ರಾಜ್ಯದ ಔಷಧ ನಿಯಂತ್ರಕ ರಾಜಾರಾಮ್ ಶರ್ಮಾ ಅವರನ್ನು ಅಮಾನತು ಮಾಡಿ ರಾಜಸ್ಥಾನ ಸರ್ಕಾರ ಶನಿವಾರ ಆದೇಶಿಸಿದೆ.
ಅಲ್ಲದೇ ಜೈಪುರ ಮೂಲದ ಕೆಸನ್ಸ್ ಫಾರ್ಮಾ ಕಂಪನಿ ಉತ್ಪಾದಿಸುವ 19 ಔಷಧಗಳು ಹಾಗೂ ಡೆಕ್ಸ್‌ಟ್ರೊಮಿಥೋರ್ಫನ್ ಹೊಂದಿರುವ ಇತರ ಎಲ್ಲ ಕೆಮ್ಮಿನ ಸಿರಪ್‌ಗಳ ಮಾರಾಟವನ್ನು ಸಹ ಸ್ಥಗಿತಗೊಳಿಸಿ ಆದೇಶಿಸಲಾಗಿದೆ. ರಾಜಾರಾಮ್ ಶರ್ಮಾ ಔಷಧಗಳ ಗುಣಮಟ್ಟ ಪತ್ತೆ ಪ್ರಕ್ರಿಯೆ ಮೇಲೆ ಪ್ರಭಾವ ಬೀರಿದ್ದರು ಎಂಬ ಆರೋಪ ಎದುರಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಅವರನ್ನು ಅಮಾನತು ಮಾಡಲಾಗಿದೆ ಎಂದು ವೈದ್ಯಕೀಯ ಮತ್ತು ಆರೋಗ್ಯ ಇಲಾಖೆ ಹೇಳಿದೆ. ಈ ಬೆಳವಣಿಗೆಗಳ ಬೆನ್ನಲ್ಲೇ ಸಮಗ್ರ ತನಿಖೆಗೆ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಆದೇಶಿಸಿದ್ದಾರೆ.
ಛಿಂದ್ವಾರದಲ್ಲಿ ‘ಕೋಲ್ಡ್ರಿಫ್’ ಸಿರಪ್ ಸೇವಿಸಿ ಮಕ್ಕಳು ಮೃತಪಟ್ಟಿರುವುದು ಹೃದಯವಿದ್ರಾವಕ. ಮಧ್ಯಪ್ರದೇಶದಲ್ಲಿ ಈ ಸಿರಪ್ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಈ ಸಿರಪ್ ತಯಾರಿಸಿರುವ ಕಂಪನಿಯ ಇತರ ಉತ್ಪನ್ನಗಳ ಮಾರಾಟವನ್ನು ಕೂಡ ನಿಷೇಧಿಸಲಾಗುತ್ತದೆ.– ಮೋಹನ್ ಯಾದವ್, ಮಧ್ಯಪ್ರದೇಶ ಮುಖ್ಯಮಂತ್ರಿ
ಕೆಮ್ಮಿನ ಸಿರಪ್ ಕೋಲ್ಡ್ರಿಫ್ ಕಲಬೆರಕೆಯಾಗಿರುವುದು ಮಾದರಿಗಳ ಪರೀಕ್ಷೆಯಿಂದ ತಿಳಿದುಬಂದಿದ್ದು ಈ ಬಗ್ಗೆ ವಿವರಣೆ ಕೇಳಲಾಗಿದೆ. ಕಂಪನಿಯು ತೃಪ್ತಿಕರ ವಿವರಣೆ ನೀಡುವವರೆಗೆ ಈ ಸಿರಪ್ ಉತ್ಪಾದನೆ ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ.–ತಮಿಳುನಾಡು ಆಹಾರ ಸುರಕ್ಷತೆ ಮತ್ತು ಔಷಧ ನಿರ್ವಹಣೆ ಇಲಾಖೆ
ಶಂಕಿತ ಮೂತ್ರಪಿಂಡ ಸಮಸ್ಯೆಯಿಂದಾಗಿ ಮಧ್ಯಪ್ರದೇಶದ ಛಿಂದ್ವಾರ ಜಿಲ್ಲೆಯಲ್ಲಿ 9 ಮಕ್ಕಳು ಮೃತಪಟ್ಟಿವೆ. ಬ್ರೇಕ್ ಆಯಿಲ್ ದ್ರಾವಣ ಮಿಶ್ರಿತ ಕೆಮ್ಮಿನ ಸಿರಪ್ ಕೊಟ್ಟಿದ್ದೇ ಮಕ್ಕಳ ಸಾವಿಗೆ ಕಾರಣ–ಕಮಲ್ ನಾಥ್, ಕಾಂಗ್ರೆಸ್‌ನ ಹಿರಿಯ ನಾಯಕ
ಕೆಮ್ಮು ನೆಗಡಿ ನಿವಾರಣೆಗಾಗಿ ಬಳಸುವ ಡೆಕ್ಸ್‌ಟ್ರೊಮಿಥೋರ್ಫನ್ ಔಷಧವನ್ನು ನಾಲ್ಕು ವರ್ಷ ಒಳಗಿನ ಮಕ್ಕಳಿಗೆ ನೀಡದಂತೆ ಕೇಂದ್ರ ಸರ್ಕಾರ 2021ರಲ್ಲಿಯೇ ಸಲಹೆ ನೀಡಿದೆ.–ಗಾಯತ್ರಿ ರಾಥೋರ್ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜಸ್ಥಾನ
ಕೇರಳದಲ್ಲಿ ಕೆಮ್ಮಿನ ಸಿರಪ್ ‘ಕೋಲ್ಡ್ರಿಫ್’ ಮಾರಾಟ ನಿಷೇಧಿಸಿ ಆದೇಶಿಸಲಾಗಿದೆ. ಕಲುಷಿತಗೊಂಡಿದೆ ಎನ್ನಲಾದ ಬ್ಯಾಚ್‌ನ ಈ ಸಿರಪ್‌ಅನ್ನು ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತಿರಲಿಲ್ಲ. ಆದಾಗ್ಯೂ ಸುರಕ್ಷತಾ ಕ್ರಮವಾಗಿ ಮಾರಾಟ ನಿಷೇಧಿಸಿ ಆದೇಶಿಸಲಾಗಿದೆ–ವೀಣಾ ಜಾರ್ಜ್, ಆರೋಗ್ಯ ಸಚಿವೆ ಕೇರಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.