ನವದೆಹಲಿ: ಶಕ್ತಿಶಾಲಿ ‘ಎಂಕ್ಯೂ–98’ ಪ್ರಿಡೇಟರ್ ಡ್ರೋನ್‌ಗಳ ಖರೀದಿ ಒಪ್ಪಂದವನ್ನು ಅಮೆರಿಕ ಮತ್ತು ಭಾರತ ಶೀಘ್ರವೇ ಅಂತಿಮಗೊಳಿಸಲಿವೆ.
31 ಸಶಸ್ತ್ರ ಡ್ರೋನ್‌ಗಳ ಖರೀದಿಗೆ ಸಂಬಂಧಿಸಿ ಮಾರ್ಚ್ ವೇಳೆಗೆ ಉಭಯ ದೇಶಗಳ ಸರ್ಕಾರಗಳ ಮಟ್ಟದಲ್ಲಿ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ಇದಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳಿಗೆ ಮುಂದಿನ ಕೆಲ ವಾರಗಳಲ್ಲಿ ಅಮೆರಿಕ ಸಂಸತ್ ಅಧಿಕೃತ ಮುದ್ರೆ ಒತ್ತುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.
ರಕ್ಷಣಾ ವ್ಯವಸ್ಥೆಗಳನ್ನು ತಯಾರಿಸುವ ಅಮೆರಿಕದ ಜನರಲ್ ಅಟೊಮಿಕ್ಸ್ (ಜಿಎ) ಕಂಪನಿಯು ಈ ಅತ್ಯಾಧುನಿಕ ಡ್ರೋನ್‌ಗಳನ್ನು ಪೂರೈಕೆ ಮಾಡಲಿದೆ.
ಬಹಳ ಎತ್ತರದಲ್ಲಿ 35 ಗಂಟೆಗಳಿಗೂ ಹೆಚ್ಚು ಕಾಲ ಹಾರಾಡಬಲ್ಲ ಈ ಡ್ರೋನ್‌ಗಳು, 4 ‘ಹೆಲ್‌ಫೈರ್’ ಕ್ಷಿಪಣಿಗಳು ಹಾಗೂ ಅಂದಾಜು 450 ಕೆ.ಜಿ ತೂಕದ ಬಾಂಬ್‌ಗಳನ್ನು ಹೊರುವ ಸಾಮರ್ಥ್ಯ ಹೊಂದಿವೆ.
ಚೀನಾಕ್ಕೆ ಹೊಂದಿರುವ ವಾಸ್ತವ ನಿಯಂತ್ರಣ ರೇಖೆಗುಂಟ (ಎಲ್‌ಎಸಿ) ಕಣ್ಗಾವಲನ್ನು ಹೆಚ್ಚಿಸುವುದಕ್ಕಾಗಿ ಭಾರತ ಈ ಶಕ್ತಿಶಾಲಿ ಡ್ರೋನ್‌ಗಳನ್ನು ಖರೀದಿ ಮಾಡುತ್ತಿದೆ. ಡ್ರೋನ್‌ಗಳ ಬೆಲೆ ಬಗ್ಗೆ ಉಭಯ ದೇಶಗಳ ಅಧಿಕಾರಿಗಳ ನಡುವೆ ನಡೆಯುವ ಉನ್ನತ ಮಟ್ಟದ ಸಭೆಯಲ್ಲಿ ನಿರ್ಧರಿಸಲಾಗುತ್ತದೆ. ಇವುಗಳ ಖರೀದಿಗೆ ₹ 25 ಸಾವಿರ ಕೋಟಿ ತಗುಲಲಿದೆ ಎಂದು ಅಂದಾಜಿಸಲಾಗಿದೆ.
ಕಡಲಗಡಿ ರಕ್ಷಣೆಗಾಗಿ ಭಾರತೀಯ ನೌಕಾಪಡೆಯು 2020ರಲ್ಲಿ ‘ಎಂಕ್ಯೂ–9ಬಿ ಸೀ ಗಾರ್ಡಿಯನ್ ’ ಡ್ರೋನ್‌ಗಳನ್ನು ಜಿಎ ಕಂಪನಿಯಿಂದ ಒಂದು ವರ್ಷದ ಅವಧಿಗೆ ಲೀಸ್ ಮೇಲೆ ಪಡೆದಿತ್ತು. ಈಗ ಮತ್ತೆ ಲೀಸ್ ಅವಧಿಯನ್ನು ವಿಸ್ತರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.