ನವದೆಹಲಿ: ದೇಶದ ರೈತರು ಮತ್ತು ಸಣ್ಣ ಉದ್ದಿಮೆದಾರರ ಹಿತಾಸಕ್ತಿ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ, ಅಮೆರಿಕದ ಜತೆ ಮಾತುಕತೆ ನಡೆಸುತ್ತಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಶನಿವಾರ ತಿಳಿಸಿದರು.
ಭಾರತ ಮತ್ತು ಅಮೆರಿಕ ನಡುವೆ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಾತುಕತೆಗಳು ನಿರಂತರವಾಗಿ ನಡೆಯುತ್ತಿದ್ದು, ದೇಶದ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಭಾರತ ಬದ್ಧವಾಗಿದೆ ಎಂದು ಹೇಳಿದರು.
‘ಎಕನಾಮಿಕ್ ಟೈಮ್ಸ್ ವರ್ಲ್ಡ್ ಲೀಡರ್ಸ್ ಫೋರಂ’ನಲ್ಲಿ ಮಾತನಾಡಿದ ಜೈಶಂಕರ್, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಗತ್ತಿನೊಂದಿಗೆ ಸಾಂಪ್ರದಾಯಿಕ ವಿಧಾನದಲ್ಲಿ ವ್ಯವಹರಿಸುತ್ತಿಲ್ಲ. ಇದರಿಂದ ಭಾರತ ಸೇರಿದಂತೆ ಇಡೀ ಜಗತ್ತು ತೊಂದರೆ ಎದುರಿಸುತ್ತಿದೆ ಎಂದು ತಿಳಿಸಿದರು.
‘ವ್ಯಾಪಾರ ಸಂಬಂಧ ಭಾರತ ಮತ್ತು ಅಮೆರಿಕದ ನಡುವೆ ಮಾತುಕತೆಗಳು ನಡೆಯುತ್ತಿವೆ. ನಮ್ಮ ರೈತರು ಮತ್ತು ಸಣ್ಣ ಉದ್ದಿಮೆದಾರರ ಹಿತ ಕಾಯುವುದು ನಮಗೆ ಮುಖ್ಯವಾಗಿದ್ದು, ಈ ವಿಷಯದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ’ ಎಂದು ಅವರು ಹೇಳಿದರು.
ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಖರೀದಿಸಿ ಲಾಭ ಗಳಿಸುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಇದು ತಮಾಷೆಯಂತೆ ಕಾಣುತ್ತದೆ. ಏಕೆಂದರೆ, ಅಮೆರಿಕ ಹಿತಾಸಕ್ತಿಯೇ ಮುಖ್ಯ ಎಂದು ಹೇಳಿಕೊಳ್ಳುವ ಅಮೆರಿಕದ ಆಡಳಿತವು, ಇತರ ದೇಶದವರಿಗೆ ಹಾಗೆ ಮಾಡಬೇಡಿ ಎನ್ನುವುದು ಎಷ್ಟು ಸರಿ’ ಎಂದು ಅವರು ಪ್ರಶ್ನಿಸಿದರು.
ಲಾಡೆನ್ ಎಲ್ಲಿ ಪತ್ತೆಯಾದ ಗೊತ್ತಲ್ಲ: ಜೈಶಂಕರ್
‘ಅಮೆರಿಕ ಮತ್ತು ಪಾಕಿಸ್ತಾನವು ಚರಿತ್ರೆಯನ್ನೇ ಮರೆತುಬಿಡುವ ಚಾಳಿ ಹೊಂದಿವೆ. ಅದನ್ನು ನಾವು ಹಿಂದಿನಿಂದ ನೋಡಿಕೊಂಡು ಬಂದಿದ್ದೇವೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಟೀಕಿಸಿದರು. ಅಮೆರಿಕವು ಪಾಕಿಸ್ತಾನದ ಜತೆಗೆ ಸ್ನೇಹವನ್ನು ಹೆಚ್ಚಿಸಿಕೊಂಡಿರುವ ಕುರಿತು ಅವರು ಪ್ರತಿಕ್ರಿಯಿಸಿದರು.
‘ವಿಶ್ವಕ್ಕೆ ಅತ್ಯಂತ ಬೇಕಾದ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದ ಒಸಾಮಾ ಬಿನ್ ಲಾಡೆನ್ 2011ರಲ್ಲಿ ಪಾಕಿಸ್ತಾನದ ಅಬೋಟಾಬಾದ್ ಸೇನಾ ಪಟ್ಟಣದಲ್ಲಿ ಪತ್ತೆಯಾಗಿದ್ದ ಎಂಬುದನ್ನು ನೆನಪಿಸಬಯಸುತ್ತೇನೆ’ ಎಂದರು.
ಅಪರೇಷನ್ ಸಿಂಧೂರ ವೇಳೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಸೇನಾ ಸಂಘರ್ಷ ನಡೆಯುವಾಗ ಅಮೆರಿಕ ಸೇರಿದಂತೆ ಹಲವು ದೇಶಗಳ ನಾಯಕರು ದೂರವಾಣಿ ಕರೆ ಮಾಡಿದ್ದರು. ಸೇನಾ ಸಂಘರ್ಷಗಳು ನಡೆಯುವಾಗ ಸಹಜವಾಗಿಯೇ ಹಲವು ದೇಶಗಳ ನಾಯಕರು ಈ ರೀತಿ ಕರೆಗಳನ್ನು ಮಾಡುತ್ತಾರೆ. ಅದೇ ರೀತಿ ಭಾರತ ಸಹ ರಷ್ಯಾ– ಉಕ್ರೇನ್ ಮತ್ತು ಇಸ್ರೇಲ್– ಇರಾನ್ ಸಂಘರ್ಷದ ಸಂದರ್ಭದಲ್ಲಿ ಆ ದೇಶಗಳ ನಾಯಕರ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದೆ. ಇದು ಅಂತರರಾಷ್ಟ್ರೀಯ ಸಂಬಂಧದ ಭಾಗ ಎಂದು ಅವರು ಹೇಳಿದರು.
‘ಭಾರತ– ಪಾಕ್ ಸೇನಾ ಸಂಘರ್ಷದ ವೇಳೆ ಅಮೆರಿಕ ನಮ್ಮೊಂದಿಗೆ ಮಾತುಕತೆ ನಡೆಸಿದ್ದರೂ ಕದನ ವಿರಾಮವನ್ನು ನಿರ್ಧರಿಸಿದ್ದು ನವದೆಹಲಿ ಮತ್ತು ಇಸ್ಲಾಮಾಬಾದ್’ ಎಂದು ಅವರು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.