ನವದೆಹಲಿ: ಕುದುರೆ, ಹೇಸರಗತ್ತೆ, ನಾಯಿಗಳು ಸೇರಿದಂತೆ ಒಟ್ಟು 12,600 ಪ್ರಾಣಿಗಳು ಭಾರತೀಯ ಸೇನೆಯಲ್ಲಿ ಇದ್ದು, ಅವುಗಳಿಗೆ ಸೂಕ್ತ ತರಬೇತಿ ನೀಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರವು ರಾಜ್ಯಸಭೆಗೆ ಸೋಮವಾರ ಮಾಹಿತಿ ನೀಡಿದೆ.
ಭದ್ರತಾ ಕಾರ್ಯಾಚರಣೆಗಳಲ್ಲಿ ಬಳಕೆಯಾಗುತ್ತಿರುವ ಪ್ರಾಣಿಗಳ ಮೇಲ್ವಿಚಾರಣೆ, ಶ್ರೇಯೋಭಿವೃದ್ಧಿ, ತರಬೇತಿಗೆ ಸಂಬಂಧಿಸಿದಂತೆ ರೂಪಿಸಿರುವ ಸಮಗ್ರ ನೀತಿಗಳ ಅನುಷ್ಠಾನ ಹಾಗೂ ಕೈಗೊಂಡಿರುವ ಕ್ರಮಗಳ ಕುರಿತು ಕೇಳಿದ ಪ್ರಶ್ನೆಗೆ ರಕ್ಷಣಾ ಖಾತೆ ರಾಜ್ಯ ಸಚಿವ ಸಂಜಯ್ ಸೇಠ್ ಈ ಉತ್ತರ ನೀಡಿದ್ದಾರೆ.
ಲಿಖಿತ ರೂಪದಲ್ಲಿ ಉತ್ತರಿಸಿರುವ ಅವರು, ‘ಪ್ರಾಣಿಗಳ ಆರೋಗ್ಯದ ಮೇಲ್ವಿಚಾರಣೆಯನ್ನು ನಿವೃತ್ತ ಸೇನಾಧಿಕಾರಿಗಳು ನೋಡಿಕೊಳ್ಳುತ್ತಿದ್ದಾರೆ. ಸೇನಾ ತರಬೇತುದಾರರದಿಂದಲೇ ಅವುಗಳಿಗೆ ತರಬೇತಿಯನ್ನೂ ನೀಡಲಾಗುತ್ತಿದೆ’ ಎಂದಿದ್ದಾರೆ.
ಅಲ್ಲದೇ, ಪ್ರಾಣಿಗಳು ಸೇವೆಯಲ್ಲಿರುವಾಗ ಹಾಗೂ ಅವುಗಳ ನಿವೃತ್ತಿ ನಂತರದ ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ನೀತಿ–ನಿಯಮಗಳ ಅನುಷ್ಠಾನವನ್ನು ಕೂಡ ಖಾತರಿಪಡಿಸಿಕೊಳ್ಳಲಾಗಿದೆ ಎಂದೂ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.