ADVERTISEMENT

ಹುತಾತ್ಮ ಯೋಧರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ: ಸೇನಾ ಮುಖ್ಯಸ್ಥ ನರವಣೆ ಭರವಸೆ

ಏಜೆನ್ಸೀಸ್
Published 15 ಜನವರಿ 2021, 7:23 IST
Last Updated 15 ಜನವರಿ 2021, 7:23 IST
73ನೇ ಸೇನಾ ದಿನದ ಅಂಗವಾಗಿ ಶುಕ್ರವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ
73ನೇ ಸೇನಾ ದಿನದ ಅಂಗವಾಗಿ ಶುಕ್ರವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ    

ನವದೆಹಲಿ: ಗಾಲ್ವನ್‌ ಕಣಿವೆಯಲ್ಲಿ ಹುತಾತ್ಮರಾದ ಯೋಧರ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂದು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಣೆ ಭರವಸೆ ನೀಡಿದ್ದಾರೆ.

73ನೇ ಸೇನಾ ದಿನದ ಅಂಗವಾಗಿ ಶುಕ್ರವಾರ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೈನಿಕರನ್ನು ಉದ್ದೇಶಿಸಿ ನರವಣೆ ಮಾತನಾಡಿದ್ದಾರೆ.

'ಉತ್ತರದ ಗಡಿಗಳಲ್ಲಿ ಚೀನಾದೊಂದಿಗೆ ನಡೆಯುತ್ತಿರುವ ಸಂಘರ್ಷದ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಗಡಿಗಳಲ್ಲಿ ಏಕಪಕ್ಷೀಯವಾಗಿ ಯಥಾಸ್ಥಿತಿಯನ್ನು ಬದಲಾಯಿಸುವ ಪಿತೂರಿಗೆ ಸಂಬಂಧಿಸಿದಂತೆ, ಸೂಕ್ತವಾದ ಉತ್ತರವನ್ನು ನಾವು ನೀಡಿದ್ದೇವೆ. ಗಾಲ್ವನ್‌ ಕಣಿವೆಯಲ್ಲಿ ಹುತಾತ್ಮರಾದ ಯೋಧರ ತ್ಯಾಗ ವ್ಯರ್ಥವಾಗಲು ನಾವು ಬಿಡುವುದಿಲ್ಲ. ಈ ಬಗ್ಗೆ ನಾನು ದೇಶಕ್ಕೆ ಭರವಸೆ ನೀಡಲು ಬಯಸುತ್ತೇನೆ' ಎಂದು ಅವರು ಹೇಳಿದ್ದಾರೆ.

ADVERTISEMENT

'ಮಾತುಕತೆ ಮತ್ತು ರಾಜಕೀಯ ಪ್ರಯತ್ನಗಳ ಮೂಲಕ ವಿವಾದಗಳಿಗೆ ಪರಿಹಾರ ಕಂಡುಕೊಳ್ಳಲು ನಾವು ಬದ್ಧರಾಗಿದ್ದೇವೆ. ಆದರೆ, ನಮ್ಮ ತಾಳ್ಮೆಯನ್ನು ಪರೀಕ್ಷಿಸುವ ತಪ್ಪನ್ನು ಯಾರೂ ಮಾಡಬಾರದು' ಎಂದು ನರವಣೆ ಶತ್ರು ರಾಷ್ಟ್ರಗಳಿಗೆ ಸಂದೇಶ ರವಾನಿಸಿದ್ದಾರೆ.

'ಸುಮಾರು 300ರಿಂದ 400 ಭಯೋತ್ಪಾದಕರು ಗಡಿಯ ಸಮೀಪದ ತರಬೇತಿ ಶಿಬಿರಗಳಲ್ಲಿ ಕುಳಿತಿದ್ದಾರೆ. ಅವರು ಭಾರತದೊಳಗೆ ಪ್ರವೇಶಿಸುವ ಪ್ರಯತ್ನ ನಡೆಸಿದ್ದಾರೆ. ಕಳೆದ ವರ್ಷ ಕದನ ವಿರಾಮ ಉಲ್ಲಂಘನೆಗಳ ಸಂಖ್ಯೆ ಶೇ. 44 ರಷ್ಟು ಏರಿಕೆಯಾಗಿದ್ದು, ಇದು ಪಾಕಿಸ್ತಾನದ ದುಷ್ಕೃತ್ಯದ ಉದ್ದೇಶಗಳನ್ನು ತೋರಿಸುತ್ತದೆ' ಎಂದು ನರವಣೆ ಹೇಳಿದ್ದಾರೆ.

ದೇಶದಾದ್ಯಂತ ಇಂದು 73ನೇ ಸೇನಾ ದಿನವನ್ನು ಆಚರಿಸಲಾಗುತ್ತಿದೆ. ದೆಹಲಿಯಲ್ಲಿ ನಡೆದ ಸೈನಿಕರ ಆಕರ್ಷಕ ಪಥಸಂಚಲನದಲ್ಲಿಸೇನಾ ಪಡೆಗಳ ಮುಖ್ಯಸ್ಥರಾದ ಬಿಪಿನ್‌ ರಾವತ್‌,ಮನೋಜ್‌ ಮುಕುಂದ್‌ ನರವಣೆ ಪಾಲ್ಗೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಹುತಾತ್ಮ ಯೋಧರ ಕುಟುಂಬ ಸದಸ್ಯರಿಗೆ ಪದಕ ನೀಡಿ ಗೌರವಿಸಲಾಯಿತು.

ಜೂ.15 ರಂದು ಗಾಲ್ವನ್‌ ಕಣಿವೆಯಲ್ಲಿ ಚೀನಾ ಮತ್ತು ಭಾರತೀಯ ಸೇನೆ ನಡುವೆ ಹಲವು ಗಂಟೆಗಳ ಕಾಲ ಸಂಘರ್ಷ ನಡೆದಿತ್ತು. ಇದರಲ್ಲಿ ಕರ್ನಲ್‌ ಬಿ.ಸಂತೋಷ್‌ ಬಾಬು ಸೇರಿದಂತೆ 20 ಯೋಧರು ಹುತಾತ್ಮರಾದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.