
ನವದೆಹಲಿ: ಭಾರತೀಯ ಸೇನೆಯು 2026ನೇ ವರ್ಷವನ್ನು ‘ನೆಟ್‌ವರ್ಕಿಂಗ್ ಮತ್ತು ದತ್ತಾಂಶ ಕೇಂದ್ರಿತ ವರ್ಷ’ ಎಂದು ಘೋಷಿಸಿದೆ.
ಇದು ಸಂಪರ್ಕ ವ್ಯವಸ್ಥೆ, ನೈಜ ಸಮಯದಲ್ಲಿ ನಿರ್ಧಾರ ಕೈಗೊಳ್ಳುವುದು ಮತ್ತು ಯುದ್ಧದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಆ ಮೂಲಕ ಭವಿಷ್ಯದ ಸವಾಲುಗಳನ್ನು ಎದುರಿಸಲು ಸನ್ನದ್ಧವಾಗಿರುವ ಸೇನೆಗೆ ಬಲ ಮತ್ತು ಚುರುಕುತನ ನೀಡುತ್ತದೆ ಎಂದು ಸೇನೆ ತಿಳಿಸಿದೆ.
ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಹೊಸ ವರ್ಷದ ಸಂದೇಶವನ್ನು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದು, ‘ಭಾರತೀಯ ಸೇನೆಯು ಪರಿವರ್ತನೆಯ ದಶಕಕ್ಕೆ ಸಾಕ್ಷಿಯಾಗುತ್ತಿದೆ. ಅಲ್ಲದೆ, ಜಂಟಿ ಕಾರ್ಯಾಚರಣೆ, ಸ್ವಾವಲಂಬನೆ ಮತ್ತು ನಾವೀನ್ಯತೆಯು ಸೇನಾ ಶಕ್ತಿಯ ಪ್ರಮುಖ ಆಧಾರಸ್ತಂಭಗಳಾಗಿವೆ’ ಎಂದು ಹೇಳಿದ್ದಾರೆ.
‘ಸ್ವದೇಶಿ ತಂತ್ರಜ್ಞಾನಗಳ ಪರಿಣಾಮಕಾರಿ ಬಳಕೆ, ಹೊಸ ಆಲೋಚನೆಗಳು ಮತ್ತು ನಿರಂತರ ಸುಧಾರಣೆಗಳ ಮೂಲಕ ನಾವು ಸೇನೆಯನ್ನು ಹೆಚ್ಚು ಸಮರ್ಥವಾಗಿ ಮತ್ತು ಭವಿಷ್ಯದ ಸವಾಲುಗಳಿಗೆ ಸನ್ನದ್ಧವಾಗಿಸುತ್ತಿದ್ದೇವೆ. ನೆಟ್‌ವರ್ಕಿಂಗ್ ಮತ್ತು ದತ್ತಾಂಶ ಕೇಂದ್ರಿತ ವ್ಯವಸ್ಥೆಗಳು ಈ ಪರಿವರ್ತನೆಗೆ ಹೊಸ ವೇಗವನ್ನು ನೀಡುತ್ತವೆ’ ಎಂದು ತಿಳಿಸಿದ್ದಾರೆ.
‘ಭಾರತೀಯ ಸೇನೆಯು ಸದಾ ಜಾಗರೂಕವಾಗಿದ್ದು, ದೇಶದ ಭದ್ರತೆಯನ್ನು ಖಾತರಿಪಡಿಸುತ್ತಿದೆ. ಕಳೆದ ವರ್ಷ, ಶತ್ರುಗಳ ಸಂಚುಗಳಿಗೆ ‘ಆಪರೇಷನ್ ಸಿಂಧೂರ’ದ ಮೂಲಕ ತಕ್ಕ ಉತ್ತರ ನೀಡಲಾಗಿತ್ತು. ಈ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.