ADVERTISEMENT

ಚೀನಾ ಗಡಿಯಲ್ಲಿ ಕಣ್ಗಾವಲು ಹೆಚ್ಚಿಸಲು ಇಸ್ರೇಲ್, ಅಮೆರಿಕದಿಂದ ಡ್ರೋನ್‌‌ಗಳ ಖರೀದಿ

ಏಜೆನ್ಸೀಸ್
Published 26 ನವೆಂಬರ್ 2020, 10:22 IST
Last Updated 26 ನವೆಂಬರ್ 2020, 10:22 IST
ಡ್ರೋಣ್‌ಗಳ ಪ್ರಾತಿನಿಧಿಕ ಚಿತ್ರ (ಎಎಫ್‌ಪಿ)
ಡ್ರೋಣ್‌ಗಳ ಪ್ರಾತಿನಿಧಿಕ ಚಿತ್ರ (ಎಎಫ್‌ಪಿ)   

ನವದೆಹಲಿ: ಪೂರ್ವ ಲಡಾಖ್‌, ಚೀನಾ ಗಡಿಯಲ್ಲಿನ ಕಣ್ಗಾವಲು ವ್ಯವಸ್ಥೆ ಬಲಪಡಿಸುವ ಮತ್ತು ರಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸುವತ್ತ ಮಹತ್ತರವಾದ ಹೆಜ್ಜೆ ಇಟ್ಟಿರುವ ಭಾರತವು ಇಸ್ರೇಲ್‌ನಿಂದ ಹೆರೊನ್‌ ಮತ್ತು ಅಮೆರಿಕದಿಂದ ಮಿನಿ ಡ್ರೋನ್‌ಗಳನ್ನು ಖರೀದಿಸುತ್ತಿದೆ.

ಇಸ್ರೇಲ್‌ನ ಹೆರೊನ್‌ ಕಣ್ಗಾವಲು ಡ್ರೋನ್‌ಗಳ ಖರೀದಿ ಪ್ರಕ್ರಿಯೆಯು ಅಂತಿಮ ಘಟ್ಟದಲ್ಲಿದ್ದು, ಡಿಸೆಂಬರ್‌ನಲ್ಲಿ ಸೇನೆ ತೆಕ್ಕೆಗೆ ಸೇರುವ ಸಾಧ್ಯತೆಗಳಿವೆ. ಲಾಡಾಖ್‌ ವಲಯದಲ್ಲಿ ಹೆರೊನ್‌ ಡ್ರೋನ್‌ಗಳನ್ನು ನಿಯೋಜಿಸಲಾಗುತ್ತದೆ. ಕಣ್ಗಾವಲು ವ್ಯವಸ್ಥೆಗೆ ಭಾರತದ ಬತ್ತಳಿಕೆಯಲ್ಲಿರುವ ಉಪಕರಣಗಳಿಗಿಂತಲೂ ಹೆರೊನ್‌ ಡ್ರೋನ್‌ಗಳು ಅತ್ಯಾಧುನಿಕವಾಗಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಅಮೆರಿಕದಿಂದ ಖರೀದಿಸಲಾಗುತ್ತಿರುವ ಸಣ್ಣ ಅಥವಾ ಮಿನಿ ಡ್ರೋನ್‌ಗಳನ್ನು ಬೆಟಾಲಿಯನ್ ಮಟ್ಟದಲ್ಲಿ ಭೂ ದಳದ ಸೈನಿಕರಿಗೆ ನೀಡಲಾಗುತ್ತದೆ. ರಿಮೋಟ್‌ ಚಾಲಿತ ಡ್ರೋನ್‌ಗಳನ್ನು ಸೈನಿಕರಿರುವ ಪ್ರದೇಶದ ಬಗ್ಗೆ ಮಾಹಿತಿಗಾಗಿ ಬಳಸಲಾಗುತ್ತದೆ ಎನ್ನಲಾಗಿದೆ.

ADVERTISEMENT

ರಕ್ಷಣಾ ಪಡೆಗಳಿಗೆ ಕೇಂದ್ರ ಸರ್ಕಾರದಿಂದ ನೀಡಲಾಗುವ ತುರ್ತು ಆರ್ಥಿಕ ನೆರವಿನ ಅಡಿಯಲ್ಲಿ ಈ ಡ್ರೋನ್‌ಗಳನ್ನು ಖರೀದಿಸಲಾಗುತ್ತಿದೆ. ಚೀನಾದೊಂದಿಗೆ ನಡೆಯುತ್ತಿರುವ ಗಡಿ ಸಂಘರ್ಷದ ಮಧ್ಯೆ ಯುದ್ಧ ಸಾಮರ್ಥ್ಯಗಳನ್ನು ಹೆಚ್ಚಿಸಲು ₹500 ಕೋಟಿ ಮೌಲ್ಯದ ಉಪಕರಣಗಳು ಮತ್ತು ವ್ಯವಸ್ಥೆಗಳನ್ನು ಪಡೆಯಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.