ADVERTISEMENT

ರೈಲು ಪ್ರಯಾಣ ದರ ಮತ್ತೆ ಏರಿಕೆ! ಇದೇ ಡಿಸೆಂಬರ್ 26ರಿಂದಲೇ ಜಾರಿ

ಪಿಟಿಐ
Published 21 ಡಿಸೆಂಬರ್ 2025, 11:22 IST
Last Updated 21 ಡಿಸೆಂಬರ್ 2025, 11:22 IST
   

ನವದೆಹಲಿ: ಇದೇ ಡಿಸೆಂಬರ್ 26ರಿಂದ ಜಾರಿಗೆ ಬರುವಂತೆ ಭಾರತೀಯ ರೈಲ್ವೆ ಸಚಿವಾಲಯವು ಪ್ರಯಾಣ ದರ ಏರಿಕೆ ಘೋಷಿಸಿದ್ದು, ಈ ನಿರ್ಧಾರದಿಂದ ದೂರದ ಊರುಗಳಿಗೆ ಪ್ರಯಾಣಿಸುವವರಿಗೆ ತುಸು ಹೊರೆಯಾಗಲಿದೆ.

ಮೇಲ್‌ ಹಾಗೂ ಎಕ್ಸ್‌ಪ್ರೆಸ್‌ ರೈಲುಗಳ ಎಸಿ ಹಾಗೂ ನಾನ್‌ ಎಸಿ ‍ಪ್ರಯಾಣ ದರವನ್ನು ಪ್ರತಿ ಕಿ.ಮೀಗೆ 2 ಪೈಸೆ ಏರಿಕೆ ಮಾಡಿ ರೈಲ್ವೆ ಸಚಿವಾಲಯ ಆದೇಶ ಹೊರಡಿಸಿದೆ.

‘ಉಪನಗರ ರೈಲುಗಳಲ್ಲಿನ ಮಾಸಿಕ ಸೀಸನ್‌ ಟಿಕೆಟ್‌ ಹಾಗೂ ಇತರೆ ರೈಲುಗಳಲ್ಲಿ 215 ಕಿ.ಮೀ ವರೆಗಿನ ಸಾಮಾನ್ಯ ದರ್ಜೆಯ ಪ್ರಯಾಣದರದಲ್ಲಿ ಯಾವುದೇ ಏರಿಕೆ ಇಲ್ಲ’ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

‘215 ಕಿ.ಮೀ ಮೇಲ್ಪಟ್ಟ ರೈಲಿನ ಸಾಮಾನ್ಯ ದರ್ಜೆಯ ಪ್ರಯಾಣ ದರದಲ್ಲಿ ಪ್ರತಿ ಕಿ.ಮೀಗೆ 1 ಪೈಸೆ ಏರಿಕೆ ಮಾಡಲಾಗಿದೆ. ಪ್ರಯಾಣ ದರ ಏರಿಕೆಯಿಂದ 2026ರ ಮಾರ್ಚ್‌ ವೇಳೆಗೆ ರೈಲ್ವೆ ಇಲಾಖೆಗೆ ಹೆಚ್ಚುವರಿಯಾಗಿ ₹600 ಕೋಟಿ ಆದಾಯ ಬರಲಿದೆ’ ಎಂದು ಅವರು ಹೇಳಿದ್ದಾರೆ.

2025ರ ಜುಲೈ ತಿಂಗಳಲ್ಲಿ ರೈಲು ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಇದರಿಂದಾಗಿ ಇಲಾಖೆಗೆ ₹700 ಕೋಟಿ ಆದಾಯ ಬಂದಿದೆ ಎಂದೂ ಅವರು ವಿವರಿಸಿದ್ದಾರೆ.

ನಾನ್-ಎಸಿ ಕೋಚ್‌ನಲ್ಲಿ 500 ಕಿ.ಮೀ ಪ್ರಯಾಣಿಸುವ ಪ್ರಯಾಣಿಕರು ₹10 ಹೆಚ್ಚುವರಿಯಾಗಿ ಪಾವತಿಸಬೇಕಾಗುತ್ತದೆ.

ಕಳೆದೊಂದು ದಶಕದಲ್ಲಿ ರೈಲ್ವೆ ಇಲಾಖೆ ತನ್ನ ಜಾಲ ಮತ್ತು ಕಾರ್ಯಾಚರಣೆಗಳನ್ನು ಗಮನಾರ್ಹವಾಗಿ ವಿಸ್ತರಿಸಿದೆ. ಇದರಿಂದಾಗಿ ವೆಚ್ಚಗಳು ತೀವ್ರಗೊಂಡಿವೆ ಎನ್ನಲಾಗಿದೆ. ಪ್ರತಿ ತಿಂಗಳು ನೌಕರರಿಗೆ ₹1.15 ಲಕ್ಷ ಕೋಟಿ ವ್ಯಯ ಮಾಡಬೇಕಿದೆ. ಜತೆಗೆ, ಪಿಂಚಣಿ ವೆಚ್ಚ ₹60,000 ಕೋಟಿಯಷ್ಟಿದ್ದು, 2024–25ರಲ್ಲಿ ಕಾರ್ಯಾಚರಣೆಯ ಒಟ್ಟು ವೆಚ್ಚವು ₹2.63 ಲಕ್ಷ ಕೋಟಿ ಆಗಿದೆ ಎಂದಿದ್ದಾರೆ.

ಈ ಬೃಹತ್ ವೆಚ್ಚಗಳನ್ನು ಪೂರೈಸಲು ಮತ್ತು ಭದ್ರತೆಯನ್ನು ಸುಧಾರಿಸಲು, ರೈಲ್ವೆಗಳು ಈಗ ಹೊಸ ಆದಾಯದ ಮೂಲಗಳನ್ನು ಹುಡುಕಬೇಕಾಗಿದೆ. ಅದಕ್ಕಾಗಿಯೇ ರೈಲ್ವೆಗಳು ಈಗ ಸರಕು ಲೋಡಿಂಗ್ ಅನ್ನು ಹೆಚ್ಚಿಸುವತ್ತ ಗಮನಹರಿಸುತ್ತಿವೆ ಮತ್ತು ದರಗಳಿಗೆ ಈ ಸಣ್ಣ ಹೊಂದಾಣಿಕೆಯನ್ನು ಮಾಡಿದೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.