ADVERTISEMENT

ಭಾರತ–ಬಾಂಗ್ಲಾ ನಡುವಣ ರೈಲು ಸೇವೆ ಇಂದಿನಿಂದ ಪುನರಾರಂಭ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಮೇ 2022, 12:30 IST
Last Updated 29 ಮೇ 2022, 12:30 IST
   

ಕೋಲ್ಕತ್ತ:ಕೊರೊನಾ ಸಾಂಕ್ರಾಮಿಕದಿಂದ ಸ್ಥಗಿತಗೊಂಡಿದ್ದ ಭಾರತ–ಬಾಂಗ್ಲಾದೇಶ ನಡುವಿನ ರೈಲು ಸಂಚಾರ ಭಾನುವಾರದಿಂದ ಪುನರಾರಂಭಗೊಂಡಿದೆ. ಕೋಲ್ಕತ್ತದಿಂದ ಬಾಂಗ್ಲಾದ ಖುಲ್ನಾಗೆ ಪ್ರಯಾಣಿಸಲಿರುವ ಬಂಧನ್‌ ಎಕ್ಸ್‌ಪ್ರೆಸ್‌ ಭಾನುವಾರ ಸಂಚಾರ ಆರಂಭಿಸಿದೆ ಎಂದು ಪೂರ್ವ ರೈಲ್ವೆ ವಲಯದ ವಕ್ತಾರ ಏಕಲವ್ಯ ಚಕ್ರವರ್ತಿ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಏಕಲವ್ಯ, ‘ಕೋವಿಡ್‌ನಿಂದಾಗಿ ಎರಡು ವರ್ಷಗಳಿಂದ ರೈಲು ಸಂಚಾರ ಸ್ಥಗಿತವಾಗಿತ್ತು. ಭಾನುವಾರ ಬೆಳಿಗ್ಗೆ 7:10ಕ್ಕೆ ಬಾಂಗ್ಲಾದ ಖುಲ್ನಾಕ್ಕೆ ಬಂಧನ್‌ ಎಕ್ಸ್‌ಪ್ರೆಸ್‌ ಪ್ರಯಾಣ ಆರಂಭಿಸಿದೆ’ ಎಂದು ತಿಳಿಸಿದರು.

‘ಕೋಲ್ಕತ್ತದಿಂದ ಬಾಂಗ್ಲಾ ರಾಜಧಾನಿ ಢಾಕಾಗೂ ಭಾನುವಾರ ರೈಲು ಸಂಚಾರ ಪುನರಾರಂಭವಾಗಿದ್ದು, ಮೈತ್ರಿ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ಆರಂಭಿಸಲಾಗಿದೆ’ ಎಂದು ಏಕಲವ್ಯ ಹೇಳಿದರು.

ಬಂಧನ್ ಎಕ್ಸ್‌ಪ್ರೆಸ್‌ ಕೋಲ್ಕತ್ತ–ಖುಲ್ನಾ ನಡುವೆ ವಾರದಲ್ಲಿ ಎರಡು ದಿನ ಸಂಚಾರ ನಡೆಸಿದರೆ, ಮೈತ್ರಿ ಎಕ್ಸ್‌ಪ್ರೆಸ್‌ ಕೋಲ್ಕತ್ತ–ಢಾಕಾ ನಡುವೆ ವಾರದಲ್ಲಿ ಐದು ಐದು ದಿನ ಸಂಚಾರ ನಡೆಸಲಿದೆ. ಈ ರೈಲುಗಳು ಸುಮಾರು 450 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿವೆ.

‘ರೈಲು ಸಂಚಾರ ಪುನರಾರಂಭವಾಗಿದ್ದಕ್ಕೆ ಎರಡೂ ದೇಶಗಳ ಜನರು ಉತ್ಸುಕರಾಗಿದ್ದಾರೆ. ಈಗಾಗಲೇ ಕೆಲವು ದಿನಗಳ ಟಿಕೆಟ್‌ಗಳನ್ನು ಪ್ರಯಾಣಿಕರು ಮುಂಗಡವಾಗಿ ಕಾಯ್ದಿರಿಸಿದ್ದಾರೆ. ಬಸ್‌, ವಿಮಾನ ಸಾರಿಗೆಗಳಿಗಿಂತ, ಅನಕೂಲಕರ ಸಮಯ ಹಾಗೂ ಕೈಗೆಟುಕುವ ದರದ ರೈಲು ಪ್ರಯಾಣಕ್ಕೆ ಜನರು ಆದ್ಯತೆ ನೀಡುತ್ತಾರೆ’ ಎಂದು ಏಕಲವ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.