ADVERTISEMENT

ಗೂಢಚಾರಿಕೆ ಆರೋಪ: 7 ವರ್ಷದ ನಂತರ ಜೈಲಿನಿಂದ ಹೊರಬಂದ ವಿಜ್ಞಾನಿ

ಪಿಟಿಐ
Published 3 ಡಿಸೆಂಬರ್ 2025, 15:54 IST
Last Updated 3 ಡಿಸೆಂಬರ್ 2025, 15:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಾಗ್ಪುರ: ಬ್ರಹ್ಮೋಸ್ ಕ್ಷಿಪಣಿ ಕೇಂದ್ರದಲ್ಲಿ ಸೇವೆ ಸಲ್ಲಿಸಿದ್ದ, ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ನಿಶಾಂತ್‌ ಅಗರ್ವಾಲ್ ಅವರು ಮಂಗಳವಾರ ರಾತ್ರಿ ಮಹಾರಾಷ್ಟ್ರದ ನಾಗ್ಪುರ ಕೇಂದ್ರ ಕಾರಾಗೃಹದಿಂದ ಬಿಡುಗಡೆ ಆಗಿದ್ದಾರೆ.

ಪಾಕಿಸ್ತಾನಕ್ಕೆ ಗೂಢಚಾರಿಕೆ ಮಾಡಿದ ಆರೋಪದ ಮೇಲೆ ಏಳು ವರ್ಷಗಳಿಂದ ಜೈಲಿನಲ್ಲಿದ್ದ ಅವರನ್ನು ಬಾಂಬೆ ಹೈಕೋರ್ಟ್‌ ದೋಷಮುಕ್ತಗೊಳಿಸಿದೆ.

ವಿದೇಶದಲ್ಲಿ ಕಾರ್ಯನಿರ್ವಹಿಸುವ ವೇಳೆ ಕರ್ತವ್ಯಲೋಪ ಎಸಗಿದ ಕಾರಣಕ್ಕೆ ಅವರು ಸಂಕಷ್ಟಕ್ಕೆ ಸಿಲುಕಿದ್ದರು.

ADVERTISEMENT

2018ರಲ್ಲಿ ಅಧಿಕಾರಿಗಳ ಗೋಪ್ಯತೆ ಕಾಯ್ದೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಅವರನ್ನು ಬಂಧಿಸಲಾಗಿತ್ತು. ವಿಚಾರಣಾ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅದನ್ನು ಅಗರ್ವಾಲ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಪಾಕಿಸ್ತಾನದಿಂದ ಕಾರ್ಯಾಚರಣೆ ಆಗುತ್ತಿದ್ದ ಸಾಮಾಜಿಕ ಜಾಲತಾಣದ ಖಾತೆ ಹೊಂದಿದ್ದ ವ್ಯಕ್ತಿಯೊಬ್ಬರೊಂದಿಗೆ, ಅದರ ಅರಿವಿಲ್ಲದೇ ಡಿಜಿಟಲ್‌ ವೇದಿಕೆ ಲಿಂಕ್ಡ್‌ಇನ್‌ನಲ್ಲಿ ಅಗರ್ವಾಲ್‌ ತಮ್ಮ ವ್ಯಕ್ತಿ ಪರಿಚಯ (ಬಯೋಡೆಟಾ) ಹಂಚಿಕೊಂಡಿದ್ದರು. ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ಪಡೆ ಪೊಲೀಸರ ತನಿಖೆ ವೇಳೆ ಈ ಮಾಹಿತಿ ಪತ್ತೆಯಾಗಿತ್ತು. 

ಇವರ ಮೇಲಿನ ಪಾಕ್‌ ಗೂಢಚಾರಿಕೆ ಆರೋಪವನ್ನು ತನಿಖಾ ಸಂಸ್ಥೆ ಸಾಬೀತು ಮಾಡುವಲ್ಲಿ ವಿಫಲವಾದ ಕಾರಣ ಹೈಕೋರ್ಟ್‌ ದೋಷಮುಕ್ತಗೊಳಿಸಿದೆ.

34 ವರ್ಷದ ಅಗರ್ವಾಲ್ ಅವರಿಗೆ 2017–18ರಲ್ಲಿ ‘ಯುವ ವಿಜ್ಞಾನಿ ಪ್ರಶಸ್ತಿ’ ಲಭಿಸಿತ್ತು. ಸುದೀರ್ಘ ಕಾನೂನು ಹೋರಾಟದ ನಂತರ ಅವರಿಗೆ ಬಿಡುಗಡೆ ಸಿಕ್ಕಿದೆ. ‘ನ್ಯಾಯಾಂಗ ವ್ಯವಸ್ಥೆಗೆ ಧನ್ಯವಾದ ಸಲ್ಲಿಸುತ್ತೇವೆ’ ಎಂದು ಸಂಬಂಧಿಕರು ಸಂತಸ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.