ADVERTISEMENT

ಶಿಬು ಸೊರೇನ್: ಜಾರ್ಖಂಡ್ ರಚನೆ, ವಿವಾದ, ರಾಜಕಾರಣ; ಬುಡಕಟ್ಟು ನಾಯಕನ ಹೋರಾಟದ ಹಾದಿ

ಪಿಟಿಐ
Published 4 ಆಗಸ್ಟ್ 2025, 6:42 IST
Last Updated 4 ಆಗಸ್ಟ್ 2025, 6:42 IST
<div class="paragraphs"><p>ಶಿಬು ಸೊರೇನ್</p></div>

ಶಿಬು ಸೊರೇನ್

   

ಪಿಟಿಐ ಚಿತ್ರ

ರಾಂಚಿ: ರಾಷ್ಟ್ರ ರಾಜಕಾರಣವನ್ನು ಮರುರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬುಡಕಟ್ಟು ನಾಯಕ ಶಿಬು ಸೊರೇನ್ ಅವರು ಜಾರ್ಖಂಡ್‌ ರಚನೆಗೆ ಕಾರಣರಾದವರು. ನಾಲ್ಕು ದಶಕಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಇವರು ವಿವಾದವನ್ನೇ ಬೆನ್ನಿಗೆ ಕಟ್ಟಿಕೊಂಡರೂ, ಜಾರ್ಖಂಡ್‌ನ ಪ್ರಮುಖ ನಾಯಕನೆಂದೇ ಗುರುತಿಸಿಕೊಂಡವರು.

ADVERTISEMENT

ರಾಷ್ಟ್ರ ರಾಜಕಾರಣದಲ್ಲಿ ಬುಡಕಟ್ಟು ಹೋರಾಟದ ಹುಟ್ಟಿಗೆ ಕಾರಣರಾದ 81 ವರ್ಷದ ಸೊರೇನ್‌ ಅವರು ಸೋಮವಾರ ನಿಧನರಾಗಿದ್ದಾರೆ. ಸದಾ ಹೋರಾಟ ಹಾಗೂ ವಿವಾದವನ್ನೇ ಬೆನ್ನಿಗೆ ಕಟ್ಟಿಕೊಂಡ ಸೊರೇನ್‌ ಅವರ ಬದುಕು ಹಾಗೂ ರಾಜಕೀಯ ಜೀವನದ ಯುಗಾಂತ್ಯವಾಗಿದೆ.

1944ರ ಜ. 11ರಂದು ಶಿಬು ಸೊರೇನ್ ಅವರು ರಾಮಗಢ ಜಿಲ್ಲೆಯ ನೆಮ್ರಾ ಗ್ರಾಮದಲ್ಲಿ (ಆಗ ಬಿಹಾರ ರಾಜ್ಯದಲ್ಲಿತ್ತು) ಜನಿಸಿದರು. ಇವರು ‘ದಿಶೋಮ್‌ ಗುರು’ (ನೆಲದ ಒಡೆಯ) ಎಂದೇ ಪ್ರಸಿದ್ಧರು. ಆ ಮೂಲಕವೇ ಸ್ಥಳೀಯ ಮಟ್ಟದಿಂದ ಹಿಡಿದು ರಾಷ್ಟ್ರ ರಾಜಕಾರಣದವರೆಗೂ ಶಿಬು ಪ್ರಸಿದ್ಧಿ ಪಡೆದರು. ತಮ್ಮ ರಾಜಕೀಯ ಜೀವನದುದ್ದಕ್ಕೂ ಅವರು ಆದಿವಾಸಿಗಳ ಹಕ್ಕುಗಳಗಾಗಿಯೇ ಧ್ವನಿಯನ್ನು ಎತ್ತಿದವರು.

ಸೊರೇನ್‌ ಅವರ ಬಾಲ್ಯ ಹೇಗಿತ್ತು..?

ಸೊರೇನ್ ಅವರು ಬಾಲ್ಯದಲ್ಲೇ ಸಾಕಷ್ಟು ನೋವುಂಡವರು ಎಂದು ಅವರ ಕುಟುಂಬವರು ನೆನಪಿಸಿಕೊಳ್ಳುತ್ತಾರೆ. ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳನ್ನು ಅವರು ಎದುರಿಸಿದವರು.

ಸೊರೇನ್‌ ಅವರು 15 ವರ್ಷದವರಾಗಿದ್ದಾಗ ಅವರ ತಂದೆ ಶೋಬರಣ್ ಸೊರೇನ್ (1957ರ ನ. 27) ಅವರನ್ನು ಲುಕಯಾತಂಡ್‌ ಕಾಡಿನಲ್ಲಿ ಸಾಲದಾತರು ಹತ್ಯೆ ಮಾಡಿದರು. ಈ ಘಟನೆ ಸೊರೇನ್‌ ಅವರ ಮೇಲೆ ಭಾರೀ ಪರಿಣಾಮ ಬೀರಿತು. ಜತೆಗೆ ತಮ್ಮ ರಾಜಕೀಯ ಹೋರಾಟದ ಬದುಕಿಗೆ ಕಾರಣವಾಯಿತು.

ರಾಜಕೀಯದ ಜತೆಗೆ ಕೃಷಿಯಲ್ಲೂ ಆಸಕ್ತಿ ಹೊಂದಿದ್ದ ಶಿಬು ಸೊರೇನ್

ಜೆಎಂಎಂ ಮತ್ತು ಜಾರ್ಖಂಡ್ ರಾಜ್ಯ ರಚನೆಗೆ ಶಿಬು ಹೇಗೆ ಕಾರಣರಾದರು?

ಬಂಗಾಳಿ ಮಾರ್ಕ್ಸ್‌ವಾದಿ ಕಾರ್ಮಿಕ ಸಂಘಟನೆಯ ಎ.ಕೆ.ರಾಯ್‌ ಮತ್ತು ಕುರ್ಮಿ–ಮಹ್ತೊ ಮುಖಂಡ ಬಿನೋದ್ ಬಿಹಾರಿ ಮಹ್ತೊ ಅವರ ಜತೆಗೂಡಿ 1973ರಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷವನ್ನು ಸ್ಥಾಪಿಸಿದರು. ಇದರ ಮೂಲಕವೇ ಪ್ರತ್ಯೇಕ ಆದಿವಾಸಿ ರಾಜ್ಯದ ಕೂಗು ಹೆಚ್ಚಿತು. ಚೋಟನಾಗ್ಪುರ ಮತ್ತು ಶಾಂತಲ ಪರಗಣ ಪ್ರಾಂತ್ಯಕ್ಕೂ ಹೋರಾಟ ವ್ಯಾಪಿಸಿತು.

ಇದರ ಜತೆಗೆ ಉಳಿಗಮಾನ್ಯ ಪದ್ಧತಿಯ ವಿರುದ್ಧ ಸೊರೇನ್ ಅವರ ಹೋರಾಟ ಮುಂದುವರಿಸಿದರು. ಇದು ಅವರನ್ನು ಬುಡಕಟ್ಟು ನಾಯಕನನ್ನಾಗಿ ರೂಪಿಸಿತು. ದಶಕಗಳ ಧರಣಿಯ ಫಲವಾಗಿ 2000ನೇ ಇಸವಿಯ ನ. 15ರಂದು ಜಾರ್ಖಂಡ್‌ ರಾಜ್ಯ ರಚನೆಗೊಂಡಿತು. 

ರಾಷ್ಟ್ರ ರಾಜಕಾರಣದಲ್ಲೂ ಮಿಂಚಿದ ಶಿಬು ಸೊರೇನ್

ರಾಷ್ಟ್ರ ರಾಜಕಾರಣಕ್ಕೆ ಶಿಬು ಪ್ರವೇಶ ಎಂದಾಯಿತು?

ಆದರೆ ಸೊರೇನ್ ಅವರ ಪ್ರಭಾವವು ಕೇವಲ ರಾಜ್ಯ ರಾಜಕಾರಣಕ್ಕಷ್ಟೇ ಸೀಮಿತವಾಗಿರಲಿಲ್ಲ. ದುಮ್ಕಾ ಕ್ಷೇತ್ರದಿಂದ ಹಲವು ಬಾರಿ ಅವರು ಲೋಕಸಭೆಗೆ ಆಯ್ಕೆಯಾಗಿದ್ದಾರೆ. 2020ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು.

ಯುಪಿಎ ಸರ್ಕಾರದ ಪ್ರಮುಖ ನಾಯಕರಾಗಿದ್ದ ಶಿಬು ಸೊರೇನ್ ಅವರು 2004ರಿಂದ 2006ರವರೆಗೆ ಕೇಂದ್ರ ಕಲ್ಲಿದ್ದಲ್ಲು ಮಂತ್ರಿಯಾಗಿಯಾಗಿದ್ದರು. ಆದರೆ ಸಚಿವರಾಗಿದ್ದ ಅವಧಿಯಲ್ಲಿ ಸಾಕಷ್ಟು ಕಾನೂನು ತೊಡಕುಗಳು ಎದುರಾದವು. 

ಶಿಬು ಸೊರೇನ್‌ ವಿರುದ್ಧ ಇದ್ದ ಪ್ರಕರಣಗಳು ಯಾವುವು?

1975ರಲ್ಲಿ ನಡೆದ ಚಿರುಧಿ ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 2004ರಲ್ಲಿ ಅವರ ವಿರುದ್ಧ ಬಂಧನ ವಾರೆಂಟ್ ಹೊರಡಿಸಲಾಗಿತ್ತು. 11 ಜನರನ್ನು ಹತ್ಯೆಗೈದಿದ್ದ ಈ ಪ್ರಕರಣದಲ್ಲಿ ಶಿಬು ಸೊರೇನ್ ಪ್ರಮುಖ ಆರೋಪಿಯಾಗಿದ್ದರು. ಬಂಧನಕ್ಕೂ ಮುನ್ನ ಕೆಲ ದಿನಗಳ ಕಾಲ ಶಿಬು ಅವರು ನಾಪತ್ತೆಯಾಗಿದ್ದರು.

ಕೆಲ ದಿನಗಳ ಸೆರೆವಾಸದ ನಂತರ 2004ರ ಸೆಪ್ಟೆಂಬರ್‌ನಲ್ಲಿ ಅವರಿಗೆ ಜಾಮೀನು ಮಂಜೂರಾಯಿತು. ಅದೇ ವರ್ಷ ನವೆಂಬರ್‌ನಲ್ಲಿ ಅವರು ಸಂಪುಟಕ್ಕೆ ಮತ್ತೆ ಸೇರ್ಪಡೆಗೊಂಡರು. 2008ರಲ್ಲಿ ನ್ಯಾಯಾಲಯವು ಶಿಬು ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿತು.

ಆದರೆ ಅವರ ಕಾನೂನು ಸಂಘರ್ಷ ಇಲ್ಲಿಗೆ ಕೊನೆಗೊಳ್ಳಲಿಲ್ಲ. ತಮ್ಮ ಮಾಜಿ ಆಪ್ತ ಸಹಾಯಕ ಶಶಿನಾಥ ಜಾ ಅಪಹರಣ ಹಾಗೂ ಕೊಲೆ ಪ್ರಕರಣದಲ್ಲಿ ಶಿಬು ಸೊರೇನ್ ಅಪರಾಧಿ ಎಂದು 2006ರ ನ. 28ರಂದು ನ್ಯಾಯಾಲಯ ಘೋಷಿಸಿತು. 1994ರಲ್ಲಿ ನಡೆದಿದ್ದ ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಿತ್ತು. 

1993ರಲ್ಲಿ ನರಸಿಂಹ ರಾವ್‌ ಸರ್ಕಾರದ ವಿರುದ್ಧ ಮಂಡಿಸಲಾದ ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಜೆಎಂಎಂ ನಡುವಿನ ರಾಜಕೀಯ ಲಾಭದ ವಿಷಯವಾಗಿ ರಾಂಚಿಯಲ್ಲಿ ಜಾ ಅವರ ಕೊಲೆ ನಡೆದಿತ್ತು ಎಂದು ಸಿಬಿಐ ಆರೋಪಿಸಿತ್ತು. ಇದು ರಾಷ್ಟ್ರವ್ಯಾಪಿ ಭಾರೀ ಸಂಚಲನ ಉಂಟು ಮಾಡಿತ್ತು. ತಮ್ಮ ವಿರುದ್ಧದ ಶಿಕ್ಷೆಯ ಆದೇಶವನ್ನು ಸೊರೇನ್ ಪ್ರಶ್ನಿಸಿದ್ದರು. 2018ರಲ್ಲಿ ಶಿಬು ಸೊರೇನ್‌ ಅವರನ್ನು ಸುಪ್ರೀಂ ಕೋರ್ಟ್ ಖುಲಾಸೆಗೊಳಿಸಿತ್ತು. ಈ ಎಲ್ಲಾ ವಿವಾದಗಳಿದ್ದರೂ ಶಿಬು ಸೊರೇನ್ ಅವರು ಜಾರ್ಖಂಡ್‌ನ ರಾಜಕೀಯದಲ್ಲಿ ಸದಾ ಮುಂಚೂಣಿಯಲ್ಲಿದ್ದರು. 

ಶಿಬು ಸೊರೇನ್ ಜಾರ್ಖಂಡ್ ಮುಖ್ಯಮಂತ್ರಿ ಆಗಿದ್ದು ಎಂದು?

ಜಾರ್ಖಂಡ್‌ನ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಹತ್ತು ದಿನಗಳಷ್ಟೇ ಅಧಿಕಾರ ನಡೆಸಿದರು. (2005ರ ಮಾರ್ಚ್‌ನ 2ರಿಂದ 11ರವರೆಗೆ)

2008ರ ಆ. 27ರಿಂದ 2009ರ ಜ. 12ರವರೆಗೆ ಹಾಗೂ 2009ರ ಡಿ. 30ರಿಂದ 2010ರ ಮೇ 31ರವರೆಗೆ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು.

ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರದ ದುರ್ಬಲ ಸ್ವಭಾವದ ಪರಿಣಾಮ ಅವರು ಅಲ್ಪಾವಧಿಗಷ್ಟೇ ಮುಖ್ಯಮಂತ್ರಿಯಾಗಿದ್ದರು.

2007ರಲ್ಲಿ ಅವರ ಹತ್ಯೆಗೆ ಯತ್ನ ನಡೆದಿತ್ತು. ದೇವಘಡ ಜಿಲ್ಲೆಯ ದುಮರಿಯಾ ಗ್ರಾಮದಲ್ಲಿ ಅವರ ಬೆಂಗಾವಲು ಪಡೆಯ ಬಳಿಯೇ ಬಾಂಬ್ ಸ್ಫೋಟಿಸಲಾಗಿತ್ತು. ಈ ಸಂದರ್ಭದಲ್ಲಿ ಅವರು ನ್ಯಾಯಾಲಯಕ್ಕೆ ಹೋಗುವ ಮಾರ್ಗದಲ್ಲಿದ್ದರು.

ಇಷ್ಟೆಲ್ಲದರ ನಡುವೆ ಜಾರ್ಖಂಡ್‌ನಲ್ಲಿ ಶಿಬು ಸೊರೇನ್ ಪ್ರಮುಖ ನಾಯಕರಾಗಿಯೇ ಉಳಿದರು. ವೈಯಕ್ತಿಕ ಹಾಗೂ ಪಕ್ಷದ ಮೂಲಕವೂ ಅವರು ರಾಜ್ಯ ರಾಜಕಾರಣದಲ್ಲಿ ಮುಂಚೂಣಿಯಲ್ಲಿದ್ದರು. ಜೆಎಂಎಂನ ಮುಖ್ಯಸ್ಥರಾಗಿ 38 ವರ್ಷಗಳ ಕಾಲ  (2025ರ ಏಪ್ರಿಲ್‌ವರೆಗೆ) ಅವರು ಪಕ್ಷವನ್ನು ಮುನ್ನಡೆಸಿದ್ದರು. ವಿರೋಧ ಪಕ್ಷಗಳ ಇಂಡಿಯಾ ಒಕ್ಕೂಟದ ಸದಸ್ಯರಾಗಿ ರಾಷ್ಟ್ರ ರಾಜಕಾರಣದಲ್ಲೂ ಅವರು ಸಕ್ರಿಯರಾಗಿದ್ದರು.

ಶಿಬು ಸೊರೇನ್ ಹಾಗೂ ಅವರ ಪತ್ನಿ ರಿಂಪಿ ಸೊರೇನ್‌ ಅವರ ಎದುರು ಮಗ ಹೇಮಂತ್ ಸೊರೇನ್ ಹಾಗೂ ಮೊಮ್ಮಗನ ಸೈಕಲ್ ಸವಾರಿ

ಶಿಬು ಅವರ ವೈಯಕ್ತಿಕ ಬದುಕು ಹೇಗಿತ್ತು?

ಶಿಬು ಸೊರೇನ್ ಅವರ ವೈಯಕ್ತಿಕ ಜೀವನವೂ ರಾಜಕೀಯ ಜೀವನದಿಂದ ಹೊರತಾಗಿರಲಿಲ್ಲ. ಪತ್ನಿ ರೂಪಿ ಸೊರೇನ್‌, ಮೂವರು ಪುತ್ರರು ಹಾಗೂ ಪುತ್ರಿ ಅಂಜನಿ (ಪಕ್ಷದ ಒಡಿಶಾ ಘಟಕದ ಮುಖ್ಯಸ್ಥೆ)

ಹಿರಿಯ ಪುತ್ರ ದುರ್ಗಾ ಸೊರೇನ್‌ 2009ರ ಮೇನಲ್ಲಿ ನಿಧನರಾದರು. ಮತ್ತೊಬ್ಬ ಪುತ್ರ ಹೇಮಂತ್ ಸೊರೇನ್ ಹಾಲಿ ಜಾರ್ಖಂಡ್ ಮುಖ್ಯಮಂತ್ರಿ ಹಾಗೂ ಪಕ್ಷದ ನಾಯಕ. ಕಿರಿಯ ಪುತ್ರ ಬಸಂತ್ ಸೊರೇನ್ ಅವರು ಶಾಸಕರಾಗಿದ್ದಾರೆ.

ತಮ್ಮ ಹಕ್ಕು ಹಾಗೂ ತಮ್ಮದೇ ಸರ್ಕಾರಕ್ಕಾಗಿ ನಡೆದ ಸುದೀರ್ಘ ಹೋರಾಟದ ಪ್ರತೀಕವಾಗಿ ಇಂದಿಗೂ ಶಿಬು ಉಳಿದಿದ್ದಾರೆ. ಮುಂದಿನ ತಲೆಮಾರಿಗೂ ಅವರ ಹೋರಾಟ ಹಾದಿ ಪ್ರೇರಣೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.