
ನವದೆಹಲಿ: ‘ಇಂಡಿಗೊ ಸಂಸ್ಥೆಯು ತನ್ನ ವಿಮಾನಗಳ ಹಾರಾಟವನ್ನು ದೊಡ್ಡ ಸಂಖ್ಯೆಯಲ್ಲಿ ರದ್ದು ಮಾಡಿದ್ದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ತನಿಖೆ ಆರಂಭಿಸಿದೆ. ಇಂಡಿಗೊ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸರ್ಕಾರವು ತೆಗೆದುಕೊಳ್ಳುವ ಕ್ರಮವು ಇತರೆ ವಿಮಾನಯಾನ ಸಂಸ್ಥೆಗಳಿಗೂ ಎಚ್ಚರಿಕೆಯಾಗಲಿದೆ’ ಎಂದು ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ತಿಳಿಸಿದರು.
ಇಂಡಿಗೊ ಪ್ರಕರಣದ ಕುರಿತು ಉತ್ತರ ನೀಡುವಂತೆ ವಿರೋಧ ಪಕ್ಷಗಳು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಒತ್ತಾಯಿಸಿದವು. ಸಚಿವ ರಾಮಮೋಹನ್ ನಾಯ್ಡು ಅವರು ರಾಜ್ಯಸಭೆಯಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದರು.
‘ಸಿಬ್ಬಂದಿ ಮತ್ತು ಪೈಲಟ್‌ಗಳ ನಿತ್ಯದ ಕೆಲಸದ ಪಾಳಿಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸದೇ ಇರುವುದೇ ಇಷ್ಟೆಲ್ಲ ಸಮಸ್ಯೆಗಳಿಗೆ ಕಾರಣ’ ಎಂದು ನಾಯ್ಡು ಅವರು ಇಂಡಿಗೊ ಸಂಸ್ಥೆಯನ್ನು ದೂರಿದರು.
‘ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ನಾವು ತೆಗೆದುಕೊಳ್ಳುವ ಕ್ರಮವು ಮಾದರಿಯಾಗಲಿದೆ. ಸ್ವಯಂ ಚಾಲಿತ ಸಂದೇಶ ರವಾನೆ ವ್ಯವಸ್ಥೆಯಿಂದಾಗಿ (ಎಎಂಎಸ್‌ಎಸ್) ಈ ಸಮಸ್ಯೆ ಉದ್ಭವಿಸಿಲ್ಲ. ಪಾಳಿ ವ್ಯವಸ್ಥೆಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸದೇ ಇರುವ ಇಂಡಿಗೊ ಸಂಸ್ಥೆಯೇ ಇದಕ್ಕೆಲ್ಲ ಕಾರಣ’ ಎಂದರು.
‘ವಿಮಾನಯಾನ ಕೆಲಸದ ಅವಧಿ ಮಿತಿ (ಎಫ್‌ಡಿಟಿಎಲ್) ಜಾರಿಯ ಬಗ್ಗೆ ಕೇಂದ್ರ ಸರ್ಕಾರವು ಇಂಡಿಗೂ ಒಳಗೊಂಡಂತೆ ಭಾರತದ ಎಲ್ಲ ವಿಮಾನಯಾನ ಸಂಸ್ಥೆಗಳೊಂದಿಗೂ ಮಾತುಕತೆ ನಡೆಸಿತ್ತು. ಎಫ್‌ಡಿಟಿಎಲ್ ನಿಯಮಗಳ ಜಾರಿಯ ವಿಚಾರದಲ್ಲಿ ಯಾವುದೇ ವಿನಾಯಿತಿ ಇಲ್ಲ ಎಂದೂ ಸರ್ಕಾರವು ಸ್ಪಷ್ಟಪಡಿಸಿತ್ತು’ ಎಂದರು.
‘ನ.1ರಂದು ಎಫ್‌ಡಿಟಿಎಲ್ ನಿಯಮಗಳು ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿತ್ತು. ಈ ಬಳಿಕ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಎಲ್ಲ ಸಂಸ್ಥೆಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇತ್ತು. ನಿಯಮಗಳ ಜಾರಿಯಿಂದ ತಮ್ಮ ಕಾರ್ಯಾಚರಣೆಯಲ್ಲಿ ಕೆಲವು ಅಡಚರಣೆಯಾಗಲಿದೆ. ಆದ್ದರಿಂದ ಕೆಲವು ವಿನಾಯಿತಿ ನೀಡುವಂತೆ ಕೆಲವು ಸಂಸ್ಥೆಗಳು ಡಿಜಿಸಿಎಗೆ ಮನವಿ ಮಾಡಿದ್ದವು’ ಎಂದು ಮಾಹಿತಿ ನೀಡಿದರು.
‘ಹೊಸ ನಿಯಮಗಳು ಜಾರಿಯಾದ ಒಂದು ತಿಂಗಳು ವಿಮಾನಗಳ ಹಾರಾಟ ಸೂಕ್ತ ರೀತಿಯಲ್ಲಿಯೇ ಮುಂದುವರಿದಿತ್ತು. ಆದರೆ, ಇಂಡಿಗೊ ಕಾರಣದಿಂದ ಸಮಸ್ಯೆ ಉಂಟಾಯಿತು. ಕೆಲವು ಸ್ಪಷ್ಟತೆಗಳು ಬೇಕು ಎಂದು ಸಂಸ್ಥೆ ಕೇಳಿಕೊಂಡಿದ್ದರಿಂದ, ಡಿ.1ರಂದು (ಸಮಸ್ಯೆ ಆರಂಭವಾದ ಒಂದು ದಿನದ ಮೊದಲು) ನಮ್ಮ ಸಚಿವಾಲಯವು ಸಂಸ್ಥೆಯೊಂದಿಗೆ ಸಭೆ ನಡೆಸಿತ್ತು. ಈ ಸಭೆಯಲ್ಲಿಯೂ ಸಂಸ್ಥೆಯು ತನ್ನ ಪಾಳಿ ಸಮಸ್ಯೆಯ ಬಗ್ಗೆ ತುಟಿ ಬಿಚ್ಚಲಿಲ್ಲ’ ಎಂದು ದೂರಿದರು.
ವಿಮಾನಗಳ ಹಾರಾಟ ರದ್ದಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ಸಂಸ್ಥೆಯು ತನಿಖಾ ಸಮಿತಿಯೊಂದನ್ನು ರಚಿಸಿದೆ. ತನಿಖೆಯ ಭಾಗವಾಗಿ ಇಂಡಿಗೊ ಸಂಸ್ಥೆಯ ಸಿಇಒ ಪೀಟರ್ ಎಲ್ಬರ್ಸ್ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿ ಇಸಿಡ್ರ ಪೊಕೆರಸ್ ಅವರಿಗೆ ಸಮನ್ಸ್ ಜಾರಿ ಮಾಡಿದೆ.
ವಿಮಾನ ನಿಲ್ದಾಣಗಳು ಅವ್ಯವಸ್ಥೆಯ ಗೂಡಾಗಿವೆ. ಹವಾಯಿ ಚಪ್ಪಲಿ ಹಾಕಿಕೊಳ್ಳುವವರೂ ವಿಮಾನದಲ್ಲಿ ಪ್ರಯಾಣಿಸುತ್ತಾನೆ ಎನ್ನಲಾಗಿತ್ತು. ಆದರೆ ವಿಮಾನ ನಿಲ್ದಾಣಗಳಲ್ಲಿ ₹250 ಇದ್ದ ಒಂದು ಲೋಟ ಕಾಫಿಗೆ ₹20 ಸಾವಿರವಾಗಿದೆ.-ಗೌರವ್ ಗೊಗೊಯಿ, ಲೋಕಸಭೆ ವಿರೋಧ ಪಕ್ಷದ ಉಪನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.