ADVERTISEMENT

ಇಂದೋರ್ ಕಲುಷಿತ ನೀರು ಸೇವನೆ ಪ್ರಕರಣ: ಮತ್ತೆ 20 ಮಂದಿಗೆ ಅತಿಸಾರ

ಪಿಟಿಐ
Published 5 ಜನವರಿ 2026, 6:26 IST
Last Updated 5 ಜನವರಿ 2026, 6:26 IST
<div class="paragraphs"><p>ಕಲುಷಿತ ನೀರು ಪ್ರದರ್ಶಿಸುತ್ತಿರುವ ವ್ಯಕ್ತಿ</p></div>

ಕಲುಷಿತ ನೀರು ಪ್ರದರ್ಶಿಸುತ್ತಿರುವ ವ್ಯಕ್ತಿ

   

– ‍ಪಿಟಿಐ ಚಿತ್ರ

ಇಂದೋರ್‌: ಇಲ್ಲಿನ ಭಾಗೀರಥಿಪುರದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿದ್ದ 142 ಮಂದಿ ಈಗಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇದರಲ್ಲಿ 11 ಮಂದಿ ತೀವ್ರ ನಿಗಾ ಘಟಕದಲ್ಲಿದ್ದಾರೆ. ಇಡೀ ಪ್ರದೇಶದಲ್ಲಿ ಆರೋಗ್ಯ ತಂಡವು ಬೀಡುಬಿಟ್ಟಿದ್ದು, 20 ಮಂದಿಗೆ ಅತಿಸಾರ ಹರಡಿರುವುದನ್ನು ಪತ್ತೆಹಚ್ಚಿದೆ.

ADVERTISEMENT

‘ಭಾಗೀರಥಿಪುರದ 2,354 ಮನೆಗಳ ಸಮೀಕ್ಷೆ ನಡೆಸಿರುವ ಆರೋಗ್ಯ ಇಲಾಖೆಯ ತಂಡವು 9,416 ಮಂದಿಯನ್ನು ಪರೀಕ್ಷೆ ನಡೆಸಿದೆ. ಈ ವೇಳೆ 20 ಮಂದಿ ಭೇದಿಯಿಂದ ಬಳಲುತ್ತಿರುವುದು ಕಂಡುಬಂದಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದುರಂತ ನಡೆದ ಬಳಿಕ ಇದುವರೆಗೂ 398 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ 256 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ 142 ಮಂದಿಯ ಚಿಕಿತ್ಸೆ ಮುಂದುವರಿದಿದ್ದು, 11 ಮಂದಿ ಈಗಲೂ ತೀವ್ರ ನಿಗಾ ಘಟಕದಲ್ಲಿದ್ದಾರೆ. 

‘ಸಾಂಕ್ರಾಮಿಕ ರೋಗವು ಈಗ ನಿಯಂತ್ರಣದಲ್ಲಿದೆ. ಕೋಲ್ಕತ್ತದಲ್ಲಿರುವ ಬ್ಯಾಕ್ಟೀರಿಯಾ ಸೋಂಕುಗಳ ರಾಷ್ಟ್ರೀಯ ಸಂಶೋಧನಾ ಸಂಸ್ಥೆಯ (ಎನ್‌ಐಆರ್‌ಬಿಐ) ತಜ್ಞರ ತಂಡವು ಈಗಾಗಲೇ ಭಾಗೀರಥಿಪುರಕ್ಕೆ ಬಂದಿದ್ದು, ಪರಿಶೀಲನೆ ನಡೆಸುತ್ತಿದೆ’ ಎಂದು ಮಧ್ಯಪ್ರದೇಶದ ಮುಖ್ಯ ವೈದ್ಯಕೀಯ ಆರೋಗ್ಯಾಧಿಕಾರಿ ಡಾ.ಮಾಧವ ಪ್ರಸಾದ್‌ ಹಸನಿ ತಿಳಿಸಿದ್ದಾರೆ.

‘ಕಲುಷಿತ ಕುಡಿಯುವ ನೀರು ಕುಡಿದು ಇದುವರೆಗೆ 10 ಮಂದಿ ಮೃತಪಟ್ಟಿದ್ದಾರೆ’ ಎಂದು ಇಂದೋರ್‌ನ ಮೇಯರ್‌ ಪುಷ್ಯಮಿತ್ರ ಭಾರ್ಗವ ತಿಳಿಸಿದ್ದಾರೆ. ಆದರೆ, 16 ಮಂದಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಂಟೆ ಪ್ರತಿಭಟನೆ: ಪ್ರಕರಣದ ಹೊಣೆಹೊತ್ತು ಸ್ಥಳೀಯ ಶಾಸಕ ಹಾಗೂ ಸಚಿವ ಕೈಲಾಸ್‌ ವಿಜಯ್‌ವರ್ಗೀಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಮಧ್ಯಪ್ರದೇಶ ಕಾಂಗ್ರೆಸ್‌ ಘಟಕವು ಸೋಮವಾರ ‘ಘಂಟಾನಾದ’ ಹೆಸರಿನಲ್ಲಿ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿತು.

ಪ್ರಕರಣವನ್ನು ಕೂಡಲೇ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ವಿಜಯ್‌ವರ್ಗೀಯ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಕಾಂಗ್ರೆಸ್‌ ಒತ್ತಾಯಿಸಿದೆ.

‘ಈಗ ಸೃಷ್ಟಿಯಾಗಿರುವ ಸಮಸ್ಯೆಯನ್ನು ಬಗೆಹರಿಸದಿದ್ದರೆ, ರಾಜ್ಯವ್ಯಾಪಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು’ ಎಂದು ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷ ಜಿತು ಪಟ್ವಾರಿ ಎಚ್ಚರಿಕೆ ನೀಡಿದ್ದಾರೆ.

ಅಧಿಕಾರಿಯ ಅಮಾನತು: ಪ್ರಕರಣದಲ್ಲಿ ಗಂಭೀರ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ದೇವಾಸ್‌ನ ಉಪ ವಿಭಾಗಾಧಿಕಾರಿಯನ್ನು ಅಮಾನತುಗೊಳಿಸಿ ಉಜೈನಿ ವಿಭಾಗೀಯ ಕಂದಾಯ ಅಧಿಕಾರಿ ಆಶೀಶ್‌ ಸಿಂಗ್‌ ಆದೇಶ ಹೊರಡಿಸಿದ್ದಾರೆ.

ಸಚಿವ ಕೈಲಾಸ್‌ ಅವರು ಪ‍ತ್ರಕರ್ತರ ವಿರುದ್ಧ ಇತ್ತೀಚಿಗೆ ಆಕ್ಷೇಪಾರ್ಹ ಪದ ಬಳಸಿದ್ದರು. ಸಚಿವರ ವರ್ತನೆಯನ್ನು ‘ಸರ್ವಾಧಿಕಾರಿ ನಡೆ’ ಎಂದು ದೇವಾಸ್‌ನ ಉಪ ವಿಭಾಗಾಧಿಕಾರಿ ಟೀಕಿಸಿದ್ದರು.

ಇಂದೋರ್‌ನ ಭಾಗೀರಥಿಪುರದ ನಿವಾಸಿಗಳಿಗೆ ಸೋಮವಾರ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಪೂರೈಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.