
ಒಳಚಿತ್ರದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್
ಇಂದೋರ್: ಕಲುಷಿತ ನೀರು ಸೇವನೆಯಿಂದ ಹಲವರು ಮೃತಪಟ್ಟ ದುರಂತದ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಇಂದೋರ್ ನಗರ ಪಾಲಿಕೆ ಆಯುಕ್ತರನ್ನು ವಜಾ ಹಾಗೂ ಇಬ್ಬರು ಹಿರಿಯ ಅಧಿಕಾರಿಗಳನ್ನು ಅಮಾನತು ಮಾಡಿ ಶುಕ್ರವಾರ ಆದೇಶಿಸಿದ್ದಾರೆ.
ಪರಿಸ್ಥಿತಿ ಪರಿಶೀಲನಾ ಸಭೆ ಬಳಿಕ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೋಹನ್ ಯಾದವ್, ದುರಂತಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ನಿರ್ಲಕ್ಷ್ಯಗಳನ್ನು ಸಹಿಸುವುದಿಲ್ಲ. ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಪಾಲಿಕೆ ಆಯುಕ್ತ ದಿಲೀಪ್ ಕುಮಾರ್ ಯಾದವ್ ಅವರನ್ನು ವಜಾ ಮಾಡಲಾಗಿದ್ದು, ಹೆಚ್ಚುವರಿ ಆಯಕ್ತ ರೋಹಿತ್ ಸಿಸೋನಿಯಾ ಮತ್ತು ಸಾರ್ವಜನಿಕ ಆರೋಗ್ಯ ವಿಭಾಗದ ಉಸ್ತುವಾರಿ ಅಧೀಕ್ಷಕ ಸಂಜೀವ್ ಶ್ರೀವಾಸ್ತವ ಅವರನ್ನು ಅಮಾನತುಗೊಳಿಸಿರುವುದಾಗಿ ತಿಳಿಸಿದ್ದಾರೆ.
ಭಗೀರಥಪುರ ಪ್ರದೇಶದಲ್ಲಿ ಪೈಪ್‌ಲೈನ್‌ನಲ್ಲಿ ಸೋರಿಕೆಯಿಂದಾಗಿ ಕುಡಿಯುವ ನೀರು ಕಲುಷಿತಗೊಂಡಿತ್ತು. ಆ ನೀರನ್ನು ಸೇವಿಸಿದ ಪರಿಣಾಮವಾಗಿ ಹಲವರಲ್ಲಿ ಅನಾರೋಗ್ಯ ಕಾಣಿಸಿಕೊಂಡಿತ್ತು. ದುರಂತಕ್ಕೆ ಕಲುಷಿತ ನೀರಿನ ಸೇವನೆಯೇ ಕಾರಣ ಎಂಬುದು ಪ್ರಯೋಗಾಲಯ ಪರೀಕ್ಷೆಯಿಂದ ಖಚಿತವಾಗಿದೆ.
ದುರಂತಕ್ಕೆ ಸಂಬಂಧಿಸಿದಂತೆ ರಿತೇಶ್ ಇರಾನಿ ಎಂಬವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯೆಯಾಗಿ ರಾಜ್ಯ ಸರ್ಕಾರವು 40 ಪುಟಗಳ ಸ್ಥಿತಿಗತಿ ವರದಿಯನ್ನು ಹೈಕೋರ್ಟ್ ಮುಂದಿಟ್ಟಿದೆ.
ಸೋಂಕು ಹರಡುವಿಕೆಯನ್ನು ನಿಯಂತ್ರಿಸಲಾಗಿದೆ. ಮತ್ತೆ ಈ ರೀತಿ ಆಗದಂತೆ ನಿಗಾ ಇಡಲಾಗುತ್ತಿದೆ. ಕಲುಷಿತ ನೀರಿನಿಂದಾಗಿ ಅನಾರೋಗ್ಯ ಪ್ರಕರಣಗಳು ವರದಿಯಾದಾಗಿನಿಂದ 294 ಮಂದಿ ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಅದರಲ್ಲಿ 93 ಮಂದಿ ಚೇತರಿಸಿಕೊಂಡು ಮನೆಗೆ ಮರಳಿದ್ದಾರೆ. 32 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ನಾಲ್ಕು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆದರೆ, ಇಂದೋರ್ ಮೇಯರ್ ಪುಷ್ಯಮಿತ್ರ ಭಾರ್ಗವ ಅವರು 10 ಮಂದಿ ಮೃತಪಟ್ಟಿದ್ದಾರೆ ಎಂಬುದಾಗಿ ಗುರುವಾರ ಹೇಳಿದ್ದರು. ಇದರಿಂದಾಗಿ, ಸಾವಿನ ಸಂಖ್ಯೆ ಬಗ್ಗೆ ಗೊಂದಲಗಳು ಮೂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.