ADVERTISEMENT

ಕೃಷಿ ಸಾಲದ ಚಕ್ರಬಡ್ಡಿ ಮನ್ನಾ ಇಲ್ಲ: ಕೇಂದ್ರ ಸ್ಪಷ್ಟನೆ

ಪಿಟಿಐ
Published 30 ಅಕ್ಟೋಬರ್ 2020, 19:33 IST
Last Updated 30 ಅಕ್ಟೋಬರ್ 2020, 19:33 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗಾಗಿ ಪಡೆದ ಸಾಲಗಳ ಆರು ತಿಂಗಳ ಅವಧಿಯ ಚಕ್ರಬಡ್ಡಿ ಮನ್ನಾ ಆಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯವು ಸ್ಪಷ್ಟಪಡಿಸಿದೆ.

ಕ್ರೆಡಿಟ್ ಕಾರ್ಡ್ ಮೂಲಕ ಪಡೆದ ಸಾಲವು ಫೆಬ್ರುವರಿ 29ರಂದು ಎಷ್ಟು ಇತ್ತೋ, ಅಷ್ಟಕ್ಕೆ ಮಾತ್ರ ಚಕ್ರಬಡ್ಡಿ ಮನ್ನಾ ಪ್ರಯೋಜನ ಸಿಗಲಿದೆ ಎಂದು ತಿಳಿಸಿದೆ. ಕ್ರೆಡಿಟ್ ಕಾರ್ಡ್‌ ಮೂಲಕ ಪಡೆದುಕೊಳ್ಳುವ ಇಎಂಐ ಸೌಲಭ್ಯಕ್ಕೆ ವಿಧಿಸುವ ಬಡ್ಡಿ ದರವನ್ನು ಆಧರಿಸಿ ಚಕ್ರಬಡ್ಡಿಯ ಮೊತ್ತವನ್ನು ತೀರ್ಮಾನ ಮಾಡಲಾಗುತ್ತದೆ ಎಂದು ಹೇಳಿದೆ.

ಬೆಳೆ ಸಾಲ ಅಥವಾ ಟ್ರ್ಯಾಕ್ಟರ್ ಖರೀದಿಗೆ ಪಡೆದ ಸಾಲವು ಕೃಷಿ ಹಾಗೂ ಕೃಷಿ ಜೊತೆ ಬೆಸೆದುಕೊಂಡಿರುವ ಚಟುವಟಿಕೆಗಳಿಗೆ ಸಂಬಂಧಿಸಿದ ಸಾಲ ಎಂದು ಪರಿಗಣಿವಾಗುತ್ತದೆ. ಇಂತಹ ಸಾಲಗಳಿಗೆ ಚಕ್ರಬಡ್ಡಿ ಮನ್ನಾ ಸೌಲಭ್ಯ ಇಲ್ಲ ಎಂದು ಸಚಿವಾಲಯ ಬಿಡುಗಡೆ ಮಾಡಿರುವ ಹೆಚ್ಚುವರಿ ಮಾಹಿತಿಯಲ್ಲಿ ವಿವರಿಸಲಾಗಿದೆ.

ADVERTISEMENT

ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆಗಳು (ಎಂಎಸ್‌ಎಂಇ) ಪಡೆದ ಸಾಲ, ಶಿಕ್ಷಣ ಸಾಲ, ಗೃಹ ಸಾಲ, ಗ್ರಾಹಕ ಬಳಕೆಯ ವಸ್ತುಗಳ ಖರೀದಿಗೆ ಪಡೆದ ಸಾಲ, ಕ್ರೆಡಿಟ್ ಕಾರ್ಡ್ ಸಾಲ, ವಾಹನ ಸಾಲ, ವೈಯಕ್ತಿಕ ಸಾಲಗಳಿಗೆ ಚಕ್ರಬಡ್ಡಿ ಮನ್ನಾ ಸೌಲಭ್ಯ ಸಿಗಲಿದೆ. ₹ 2 ಕೋಟಿ ವರೆಗಿನ ಇಂತಹ ಸಾಲಗಳ ಆರು ತಿಂಗಳ ಅವಧಿಯ ಚಕ್ರಬಡ್ಡಿಯನ್ನು ಮನ್ನಾ ಮಾಡುವ ಪ್ರಕ್ರಿಯೆಯನ್ನು ನವೆಂಬರ್ 5ರೊಳಗೆ ಪೂರ್ಣಗೊಳಿಸಬೇಕು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್ (ಆರ್‌ಬಿಐ) ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ (ಎನ್‌ಬಿಎಫ್‌ಸಿ) ಈಗಾಗಲೇ ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.