ADVERTISEMENT

ಐಎನ್‌ಎಕ್ಸ್‌ ಮೀಡಿಯಾ ಹಗರಣ: ಚಿದಂಬರಂ ಶರಣಾಗತಿ ಅರ್ಜಿ ತಿರಸ್ಕರಿಸಿದ ಕೋರ್ಟ್‌ 

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2019, 14:18 IST
Last Updated 13 ಸೆಪ್ಟೆಂಬರ್ 2019, 14:18 IST
   

ನವದೆಹಲಿ: ಐಎನ್‌ಎಕ್ಸ್‌ ಮೀಡಿಯಾ ಹಗರಣಕ್ಕೆ ಸಂಬಂಧಿಸಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಶರಣಾಗುವುದಾಗಿ ಸಂಸದ ಪಿ.ಚಿದಂಬರಂ ಅವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಕೋರ್ಟ್‌ನ ವಿಶೇಷ ನ್ಯಾಯಾಧೀಶ ಅಜಯ್ ಕುಮಾರ್ ಕುಹರ್ ಶುಕ್ರವಾರ ವಜಾಗೊಳಿಸಿದರು.

ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ ಭ್ರಷ್ಟಾಚಾರ ನಡೆಸಿದ ಆರೋಪ ಎದುರಿಸುತ್ತಿರುವ ಚಿದಂಬರಂ ವಿರುದ್ಧ ಸಿಬಿಐ ತನಿಖೆ ನಡೆಸುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಅವರು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಚಿದಂಬರಂ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್‌ ಸಿಬಲ್‌, ‘ಚಿದಂಬರಂ ನ್ಯಾಯಾಂಗ ಬಂಧನದಲ್ಲಿಯೇ ಇದ್ದು, ಇನ್ನಷ್ಟು ಯಾತನೆ ಅನುಭವಿಸಬೇಕು ಎಂಬ ಉದ್ದೇಶದಿಂದ ಇ.ಡಿ ಅವರನ್ನು ಬಂಧಿಸುತ್ತಿಲ್ಲ’ ಎಂದು ಹೇಳಿದರು.

ಈ ವಾದವನ್ನು ಅಲ್ಲಗಳೆದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ‘ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ವಿದೇಶಗಳಲ್ಲಿಯೂ ನಡೆಸಬೇಕಿದೆ. ಚಿದಂಬರಂ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳುವ ಮುನ್ನ ಸಾಕಷ್ಟು ವಿವರಗಳನ್ನು ಸಂಗ್ರಹಿಸಬೇಕಿದೆ’ ಎಂದು ವಿವರಿಸಿದರು.

‘ಈ ಪ್ರಕರಣದಲ್ಲಿ ಚಿದಂಬರಂ ಅವರನ್ನು ಬಂಧಿಸುವುದು ಅಗತ್ಯವಿದೆ. ಆದರೆ, ಈ ಹಂತದಲ್ಲಿ ಬಂಧಿಸುವ ಅಗತ್ಯವಿಲ್ಲ. ಈ ಪ್ರಕ್ರಿಯೆ ಸೂಕ್ತ ಸಮಯದಲ್ಲಿ ನಡೆಯಲಿದೆ’ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಕೋರ್ಟ್‌ಗೆ ಗುರುವಾರ ತಿಳಿಸಿತ್ತು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.