
ಕೋಲ್ಕತ್ತ: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಪಾಕಿಸ್ತಾನದ ಕ್ರಿಕೆಟಿಗರಿಗೆ ಅವಕಾಶ ನಿರಾಕರಿಸಿರುವಂತೆಯೇ, ಬಾಂಗ್ಲಾದೇಶದ ಕ್ರಿಕೆಟಿಗರಿಗೂ ಅವಕಾಶ ನೀಡಬಾರದು ಎಂದು ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯ ಘಟಕದ ಮಾಜಿ ಅಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.
ಬಾಂಗ್ಲಾದ ವೇಗದ ಬೌಲರ್ ಮುಸ್ತಫಿಝರ್ ರೆಹಮಾನ್ ಅವರನ್ನು 2026ರ ಐಪಿಎಲ್ ತಂಡದಿಂದ ಬಿಡುಗಡೆ ಮಾಡುವಂತೆ ಕೋಲ್ಕತ್ತ ನೈಟ್ ರೈಡರ್ಸ್‌ಗೆ (ಕೆಕೆಆರ್) ಬಿಸಿಸಿಐ ನೀಡಿದ ಆದೇಶವನ್ನು ಘೋಷ್ ಸ್ವಾಗತಿಸಿದ್ದಾರೆ.
‘ಬಾಂಗ್ಲಾದಲ್ಲಿ ನಡೆಯುತ್ತಿರುವುದು ಯಾರಿಗೂ ಒಳ್ಳೆಯದಲ್ಲ. ಹಿಂದೂಗಳ ವಿರುದ್ಧ ನಡೆಯುತ್ತಿರುವ ದೌರ್ಜನ್ಯದಿಂದ ಪಶ್ಚಿಮ ಬಂಗಾಳದ ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದು ಅಮಾನವೀಯ’ ಎಂದು ಪಶ್ಚಿಮ ಮೇದಿನಿಪುರ ಜಿಲ್ಲೆಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ಬಾಂಗ್ಲಾದಲ್ಲಿ ಚುನಾವಣೆ ನಡೆದು ಸ್ಥಿರ ಸರ್ಕಾರ ರಚನೆಯಾಗಲಿ. ಕಾನೂನು ಮತ್ತು ಸುವ್ಯವಸ್ಥೆ ಪುನರ್ ಸ್ಥಾಪನೆಯಾಗಲಿ ಎಂದು ನಾವು ಬಯಸುತ್ತೇವೆ. ಇದರಿಂದ ಜೀವಗಳು ಮತ್ತು ಆಸ್ತಿಯ ರಕ್ಷಣೆಯಾಗುತ್ತದೆ. ಗಡಿಯಲ್ಲಿನ ಉದ್ವಿಗ್ನತೆಯೂ ಕಡಿಮೆಯಾಗಲಿದೆ’ ಎಂದು ಹೇಳಿದ್ದಾರೆ.
‘ಪಶ್ಚಿಮ ಬಂಗಾಳದ ಬೇಡಿಕೆಯನ್ನು ಪರಿಗಣಿಸಿ, ಐಪಿಎಲ್‌ನಿಂದ ಬಾಂಗ್ಲಾದ ಕ್ರಿಕೆಟಿಗನನ್ನು ಹೊರಗಿಟ್ಟ ಬಿಸಿಸಿಐಗೆ ಧನ್ಯವಾದ ಹೇಳುತ್ತೇನೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.