ADVERTISEMENT

ಮಹಾರಾಷ್ಟ್ರ| ಫಡಣವೀಸ್‌‌–ರಾವುತ್‌ ಭೇಟಿಯಿಂದ ಹುಟ್ಟಿಕೊಂಡ ರಾಜಕೀಯ ಚರ್ಚೆ ತೀವ್ರ

ಇಬ್ಬರು ನಾಯಕರು ರಾಜಕೀಯ ಚರ್ಚೆ ಮಾಡುವುದು ಪಾಪವೇ ಎಂದ ಸಂಜಯ್‌ ರಾವುತ್‌

ಏಜೆನ್ಸೀಸ್
Published 29 ಸೆಪ್ಟೆಂಬರ್ 2020, 15:02 IST
Last Updated 29 ಸೆಪ್ಟೆಂಬರ್ 2020, 15:02 IST
ದೇವೇಂದ್ರ ಫಡಣವೀಸ್‌ ಮತ್ತು ಸಂಜಯ್‌ ರಾವುತ್‌
ದೇವೇಂದ್ರ ಫಡಣವೀಸ್‌ ಮತ್ತು ಸಂಜಯ್‌ ರಾವುತ್‌    

ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ದೇವೇಂದ್ರ ಫಡಣವೀಸ್‌ ಅವರನ್ನು ಶಿವಸೇನೆಯ ವಕ್ತಾರ ಸಂಜಯ್‌ ರಾವುತ್‌ ಭೇಟಿಯಾದ ವೇಳೆ ರಾಜಕೀಯದ ಚರ್ಚೆ ನಡೆದಿದೆ ಎಂಬ ವಾದಗಳಿಗೆ ಸಂಬಂಧಿಸಿದಂತೆ ಸ್ವತಃ ಸಂಜಯ್ ರಾವುತ್‌ ಮಂಗಳವಾರ ಪ್ರತಿಕ್ರಿಯೆ ನೀಡಿದ್ದಾರೆ. ‘ಇಬ್ಬರು ನಾಯಕರು ಭೇಟಿಯಾದ ವೇಳೆ ರಾಜಕೀಯದ ಬಗ್ಗೆ ಚರ್ಚಿಸುವುದು ಪಾಪವೇ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಮುಂಬೈನಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ‘ಭೇಟಿ ವೇಳೆ ರಾಜಕೀಯದ ಕುರಿತು ಚರ್ಚಿಸುವುದು ಪಾಪವೇ? ಇಬ್ಬರು ರಾಜಕೀಯ ನಾಯಕರು ಭೇಟಿಯಾದಾಗ ದೇಶ, ಕೃಷಿ ಮಸೂದೆಗಳು, ಜಮ್ಮು ಮತ್ತು ಕಾಶ್ಮೀರ, ಚೀನಾ, ಪಾಕಿಸ್ತಾನ, ಕೋವಿಡ್‌-19 ಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸುವುದು ಸಾಮಾನ್ಯ,’ ಎಂದು ರಾವುತ್‌ ಹೇಳಿದರು.

ADVERTISEMENT

ಇದಕ್ಕೂ ಮೊದಲು ಮಾತನಾಡಿದ್ದ ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ ಪಾಟೀಲ್‌, ‘ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಮತ್ತು ಶಿವಸೇನೆ ಮುಖಂಡ ಸಂಜಯ್ ರಾವುತ್‌ ಅವರ ನಡುವಿನ ಸಭೆ ಅನಿರ್ದಿಷ್ಟವಾದದ್ದಾಗಿದ್ದು, ರಾಜ್ಯದ ರಾಜಕೀಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ,’ ಎಂದು ಹೇಳಿದ್ದರು.

ಅಲ್ಲದೆ, ‘ರಾಜಕೀಯ ಪಕ್ಷಗಳ ನಾಯಕರು 2–2.30 ಗಂಟೆ ಸಭೆ ನಡೆಸಿದ್ದಾರೆ ಎಂದರೆ ಅಲ್ಲಿ ಸಹಜವಾಗಿಯೇ ರಾಜಕೀಯದ ಚರ್ಚೆ ನಡೆದಿರುತ್ತದೆ. ಕೇವಲ, ಟೀ, ಬಿಸ್ಕತ್ತುಗಳ ಬಗ್ಗೆ ಅವರು ಮಾತನಾಡಿರಲಾರರು. ಆದರೆ, ಇದರಿಂದ ಯಾವುದೇ ಪರಿಣಾಮವಾಗುವುದಿಲ್ಲ,’ ಎಂದು ಹೇಳಿದ್ದರು.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌‌ ಅವರನ್ನು ಸೆ. 26ರಂದು ಶಿವಸೇನೆಯ ವಕ್ತಾರ ಸಂಜಯ್‌ ರಾವುತ್‌ ಅವರು ಪಂಚತಾರಾ ಹೋಟೆಲ್‌ವೊಂದರಲ್ಲಿ ಭೇಟಿಯಾಗಿದ್ದರು. ಇಬ್ಬರೂ ನಾಯಕರು ಸರಿ ಸುಮಾರು 2 ರಿಂದ 2.30 ಗಂಟೆಗಳ ಕಾಲ ರಹಸ್ಯ ಚರ್ಚೆ ನಡೆಸಿದ್ದರು. ಶಿವಸೇನೆಯ ಮುಖವಾಣಿ ‘ಸಾಮ್ನಾ’ ಪತ್ರಿಕೆಯೊಂದಿಗೆ ನಿಗದಿಯಾಗಿರುವ ದೇವೇಂದ್ರ ಫಡಣವೀಸ್‌‌ ಅವರ ಸಂದರ್ಶನದ ಹಿನ್ನೆಲೆಯಲ್ಲಿಈ ಭೇಟಿ ನಡೆದಿದೆ ಎಂದು ಎರಡೂ ಪಕ್ಷಗಳು ಹೇಳಿಕೊಂಡಿದ್ದು. ಆದರೆ, ಎರಡೂ ಪಕ್ಷಗಳ ಸ್ಪಷ್ಟನೆ ಹೊರತಾಗಿಯೂಈ ಭೇಟಿ ಮಹಾರಾಷ್ಟ್ರ ರಾಜಕೀಯ ವಲಯದಲ್ಲಿ ಚರ್ಚೆಯ ಕಿಚ್ಚು ಹೊತ್ತಿಸಿದೆ.

ಹೀಗಿರುವಾಗಲೇ ಸೋಮವಾರ ಮಾತನಾಡಿದ್ದ ಕೇಂದ್ರ ಸಚಿವ ರಾಮದಾಸ್‌ ಅಠವಾಳೆ, ಮಹಾರಾಷ್ಟ್ರದ ಅಭಿವೃದ್ಧಿಗಾಗಿ ಶಿವಸೇನೆ ಮತ್ತೆ ಬಿಜೆಪಿಯೊಂದಿಗೆ ಕೈಜೋಡಿಸಬೇಕು. ಇಲ್ಲವೇ ಎನ್‌ಸಿಪಿಯ ಶರದ್‌ ಪವಾರ್‌ ಅವರು ಎನ್‌ಡಿಎ ಸೇರಬೇಕು ಎಂದು ಹೇಳಿಕೆ ನೀಡಿದ್ದರು.

ಬಿಜೆಪಿಯೊಂದಿಗಿನ ಹಳೇ ಸಂಬಂಧ ಕಳೆದುಕೊಂಡಿರುವ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಜೊತೆಗೆ ಸರ್ಕಾರ ರಚಿಸಿದೆ. ಅಂದಿನಿಂದ, ಠಾಕ್ರೆ ಮತ್ತು ಫಡಣವೀಸ್‌ ನಡುವಿನ ಸಂಬಂಧ ಹಳಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.