ADVERTISEMENT

ಕೇಂದ್ರದ ಕೃಷಿ ಕಾಯ್ದೆಗಳಿಗೆ ಸುಪ್ರೀಂ ತಡೆ ನೀಡಲು ಸಾಧ್ಯವೇ? ತಜ್ಞರು ಏನಂತಾರೆ?

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 8:28 IST
Last Updated 12 ಜನವರಿ 2021, 8:28 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

'ನಾವು ಆರ್ಥಿಕ ತಜ್ಞರಲ್ಲ. ಆದರೆ, ಕೃಷಿ ಕಾಯ್ದೆಗಳಿಗೆ ಸರ್ಕಾರ ತಡೆ ನೀಡುತ್ತದೆಯೇ ಅಥವಾ ಆ ಕೆಲಸವನ್ನು ನಾವು ಮಾಡಬೇಕೇ ಎಂಬುದನ್ನು ತಿಳಿಸಿ,' ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಆದರೆ, ಮೇಲ್ನೋಟಕ್ಕೆ ಅಸಾಂವಿಧಾನಿಕ ಮತ್ತು ಕಾನೂನುಬಾಹಿರ ಎಂದು ಕಾಣಿಸದೇ ಇದ್ದರೆ ಸಂಸತ್ತು ಅಂಗೀಕರಿಸಿದ ಕಾಯ್ದೆಗಳಿಗೆ ಸುಪ್ರೀಂ ಕೋರ್ಟ್‌ ತಡೆ ನೀಡುವಂತಿಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕಾಯ್ದೆಗಳಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಆಕ್ಷೇಪಿಸಿದ್ದಾರೆ. ವೇಣುಗೋಪಾಲ್ ಅವರ ಆಕ್ಷೇಪಗಳಿಗೆ ಕಾನೂನು ತಜ್ಞರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಜನರ ಮೂಲಭೂತ ಹಕ್ಕುಗಳ ಉಲ್ಲಂಘನೆ ಅಥವಾ ಸಾಂವಿಧಾನಿಕ ನಿಯಮಗಳ ಉಲ್ಲಂಘನೆ ಆಗಿದೆ ಎಂಬುದು ಮೇಲ್ನೋಟಕ್ಕೆ ಕಾಣಿಸಿದರೆ ಮಾತ್ರ ಕಾಯ್ದೆಗಳಿಗೆ ಸುಪ್ರೀಂ ಕೋರ್ಟ್‌ ತಡೆ ನೀಡಬಹುದು ಎಂದು ವೇಣುಗೋಪಾಲ್‌ ಪ್ರತಿಪಾದಿಸಿದ್ದಾರೆ.

ಸಂಸತ್ತು ರೂಪಿಸಿದ ಕಾಯ್ದೆಯು ಮೇಲ್ನೋಟಕ್ಕೆ ಸಂವಿಧಾನದ ಉಲ್ಲಂಘನೆ ಎಂಬ ಬಲವಾದ ನೆಲೆ ಇದ್ದರೆ ಮಾತ್ರ ಅದನ್ನು ಸುಪ್ರೀಂ ಕೋರ್ಟ್‌ ರದ್ದು ಮಾಡಬಹುದು ಎಂದು ಕಾನೂನು ತಜ್ಞ ರಾಕೇಶ್‌ ದ್ವಿವೇದಿ ಹೇಳಿದ್ದಾರೆ.

‘ಇದು ಸರಿಯಾದ ಕ್ರಮ ಅಲ್ಲ. ಸರ್ಕಾರದ ವಾದ ಏನು ಎಂಬುದನ್ನು ಆಲಿಸದೆ ನೀವು ನಿರ್ಧಾರಕ್ಕೆ ಬಂದಿದ್ದೀರಿ. ದೊಡ್ಡ ಸಂಖ್ಯೆಯ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬುದು ಕಾಯ್ದೆಗೆ ತಡೆ ನೀಡುವುದಕ್ಕೆ ಸಮರ್ಥನೆ ಆಗುವುದಿಲ್ಲ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸಂಸತ್ತು ತನ್ನ ವ್ಯಾಪ್ತಿ ಮೀರಿ ಕಾಯ್ದೆ ರೂಪಿಸಿದೆ ಎಂಬುದು ಮೇಲ್ನೊಟಕ್ಕೆ ಕಂಡುಬಂದರೆ ಮಾತ್ರ, ಕಾಯ್ದೆಗೆ ತಡೆ ನೀಡಲು ಸುಪ್ರೀಂ ಕೋರ್ಟ್‌ಗೆ ಸಾಧ್ಯ ಎಂದು ಹಿರಿಯ ವಕೀಲ ಮೋಹನ ಕಾತರಕಿ ಅವರು ಹೇಳಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.