ADVERTISEMENT

ಹೊಸ ಪದ್ಧತಿ ಅಸ್ತಿತ್ವಕ್ಕೆ ಬರುವವರೆಗೂ ಖಾಲಿ ಹುದ್ದೆ ಮುಂದುವರಿಕೆ: ಕಿರಣ್ ರಿಜಿಜು

ರಾಜ್ಯಸಭೆಗೆ ಕಾನೂನು ಸಚಿವ ಉತ್ತರ

ಪಿಟಿಐ
Published 15 ಡಿಸೆಂಬರ್ 2022, 12:44 IST
Last Updated 15 ಡಿಸೆಂಬರ್ 2022, 12:44 IST
ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು
ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು   

ನವದೆಹಲಿ: ‘ಹೊಸ ಪದ್ಧತಿ ಅನುಷ್ಠಾನಗೊಳ್ಳುವವರೆಗೂ ಉನ್ನತ ನ್ಯಾಯಾಲಯಗಳಲ್ಲಿನ ಖಾಲಿ ಹುದ್ದೆ ಹಾಗೂ ನೇಮಕಾತಿ ಸಮಸ್ಯೆ ಹೀಗೆ ಮುಂದುವರಿಯಲಿದೆ’ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಅವರು ರಾಜ್ಯಸಭೆಗೆ ಗುರುವಾರ ತಿಳಿಸಿದ್ದಾರೆ.

ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಅವರು, ‘ನ್ಯಾಯಮೂರ್ತಿಗಳ ನೇಮಕಾತಿ ವಿಚಾರದಲ್ಲಿ ಕೇಂದ್ರ ಸರ್ಕಾರವು ಸೀಮಿತ ಅಧಿಕಾರ ಹೊಂದಿದೆ’ ಎಂದು ಹೇಳಿದ್ದಾರೆ.

‘ಹೈಕೋರ್ಟ್‌ಗಳಿಗೆ 1,108 ನ್ಯಾಯಮೂರ್ತಿಗಳ ಹುದ್ದೆ ಮಂಜೂರಾಗಿದೆ. ಡಿಸೆಂಬರ್‌ 9ರ ವರೆಗಿನ ಮಾಹಿತಿ ಪ್ರಕಾರ 777 ನ್ಯಾಯಮೂರ್ತಿಗಳಷ್ಟೇ ಕಾರ್ಯನಿರ್ವಹಿಸುತ್ತಿದ್ದಾರೆ. ಶೇ 30 ರಷ್ಟು (331) ಹುದ್ದೆಗಳು ಖಾಲಿ ಇವೆ. ಸುಪ್ರೀಂ ಕೋರ್ಟ್‌ನಲ್ಲಿನ ನ್ಯಾಯಮೂರ್ತಿಗಳ ಸಂಖ್ಯೆ 34. ಆದರೆ ಕಾರ್ಯನಿರ್ವಹಿಸುತ್ತಿರುವವರು 27 ಮಂದಿ ಮಾತ್ರ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

‘ವಿವಿಧ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೇ ಉಳಿದಿರುವ ಪ್ರಕರಣಗಳ ಸಂಖ್ಯೆ 5 ಕೋಟಿಯಷ್ಟಿದೆ. ಇದರಿಂದ ನಾಗರಿಕರ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುವುದು ಸಹಜ. ಬಾಕಿ ಪ್ರಕರಣಗಳ ಸಂಖ್ಯೆ ತಗ್ಗಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಂಡಿದೆ’ ಎಂದಿದ್ದಾರೆ.

‘ಖಾಲಿ ಇರುವ ಹುದ್ದೆಗಳ ಭರ್ತಿಗೆ ನ್ಯಾಯಮೂರ್ತಿಗಳ ಹೆಸರುಗಳನ್ನು ಆದಷ್ಟು ಬೇಗ ಶಿಫಾರಸು ಮಾಡುವಂತೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಾಗೂ ಹೈಕೋರ್ಟ್‌ಗಳಿಗೆ ಲಿಖಿತ ಹಾಗೂ ಮೌಖಿಕವಾಗಿ ಮನವಿ ಮಾಡಲಾಗಿದೆ. ಬಾಕಿ ಪ್ರಕರಣಗಳನ್ನು ತಗ್ಗಿಸಲು ಅಗತ್ಯವಿರುವ ಎಲ್ಲಾ ರೀತಿಯ ಬೆಂಬಲವನ್ನು ನಾವು ನೀಡುತ್ತಿದ್ದೇವೆ. ಹೊಸ ಪದ್ಧತಿಯೊಂದನ್ನು ಜಾರಿಗೊಳಿಸುವವರೆಗೂ ಖಾಲಿ ಹುದ್ದೆ ಹಾಗೂ ನೇಮಕಾತಿ ಸಮಸ್ಯೆ ಮುಂದುವರಿಯಲಿದೆ’ ಎಂದೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.