ಜಗನ್ ಮೋಹನ್ ರೆಡ್ಡಿ ಮತ್ತು ಚಂದ್ರಬಾಬು ನಾಯ್ಡು
ಹೈದರಾಬಾದ್: ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ರಾಜ್ಯ ರಾಜಕಾರಣವನ್ನು ಕೀಳುಮಟ್ಟಕ್ಕಿಳಿಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ವೈ.ಎಸ್. ಜಗನ್‌ಮೋಹನ್ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.
ಈಚೆಗೆ ಸತ್ತೇನಪಲ್ಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತ ಸಿಂಗಯ್ಯ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಂಧ್ರ ಪೊಲೀಸರು ತಮ್ಮ ವಿರುದ್ಧ ಪ್ರಕರಣ ದಾಖಲಿಸಿದ ಮರು ದಿನ ಚಂದ್ರಬಾಬು ನಾಯ್ಡು ಅವರನ್ನು ಜಗನ್ ತೀವ್ರವಾಗಿ ಟೀಕಿಸಿದ್ದಾರೆ.
‘ಎಕ್ಸ್’ನಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ಅವರು, ‘ಪಲ್ನಾಡು ಜಿಲ್ಲೆಯ ಸತ್ತೇನಪಲ್ಲಿ ಕ್ಷೇತ್ರದ ರೆಂಟಪಳ್ಳಕ್ಕೆ ತಾವು ಈಚೆಗಷ್ಟೇ ಕೈಗೊಂಡಿದ್ದ ಪ್ರವಾಸಕ್ಕೆ ಉದ್ದೇಶಪೂರ್ವಕವಾಗಿ ನಿರ್ಬಂಧ ಹೇರಲಾಗಿತ್ತು. ವಿರೋಧ ಪಕ್ಷದ ನಾಯಕರು ತಮ್ಮ ಕಾರ್ಯಕರ್ತರು ಅಥವಾ ರೈತರು, ಜನರನ್ನು ಭೇಟಿಯಾಗುವುದನ್ನು ಏಕೆ ತಡೆಯಲಾಗುತ್ತಿದೆ’ ಎಂದು ಪ್ರಶ್ನಿಸಿದ್ದಾರೆ.
‘ನಾನು ಅಧಿಕಾರದಲ್ಲಿದ್ದಾಗ, ಜನರನ್ನು ಭೇಟಿಯಾಗಲು ನಿಮ್ಮನ್ನು (ನಾಯ್ಡು) ಹಾಗೂ ಪವನ್ ಕಲ್ಯಾಣ್ ಅವರಿಗೆ ಎಂದೂ ಅಡ್ಡಿಪಡಿಸಿರಲಿಲ್ಲ. ಈ ರೀತಿಯ ರಾಜಕೀಯ ಪ್ರತೀಕಾರವು ಪ್ರಜಾಪ್ರಭುತ್ವಕ್ಕೆ ಮಾರಕ. ಭದ್ರತಾ ಶಿಷ್ಟಾಚಾರವನ್ನು ಪಾಲಿಸುವಲ್ಲಿ ರಾಜ್ಯ ಸರ್ಕಾರವು ವಿಫಲವಾಗಿದ್ದರಿಂದಲೇ ಸಿಂಗಯ್ಯ ಅವರ ಸಾವು ಸಂಭವಿಸಿದೆ’ ಎಂದು ಜಗನ್ ದೂರಿದ್ದಾರೆ.
ಮಾಜಿ ಮುಖ್ಯಮಂತ್ರಿಗೆ ಝಡ್– ಪ್ಲಸ್ ಶ್ರೇಣಿಯ ಭದ್ರತಾ ವ್ಯವಸ್ಥೆ ಕಲ್ಪಿಸುವುದು ಶಿಷ್ಟಾಚಾರ. ಈ ನಿಯಮ ಚಂದ್ರಬಾಬು ನಾಯ್ಡು ಸೇರಿದಂತೆ ಇತರರಿಗೂ ಅನ್ವಯವಾಗುತ್ತದೆ. ನಾನು ಪಲ್ನಾಡು ಜಿಲ್ಲೆಗೆ ಭೇಟಿ ನೀಡುವ ಬಗ್ಗೆ ಮುಂಚಿತವಾಗಿ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು. ಆದರೆ, ಸರ್ಕಾರ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಲು ವಿಫಲವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಗುಂಟೂರು ನಗರ ಹೊರವಲಯದಲ್ಲಿ ಜಗನ್‌ಮೋಹನ್ ರೆಡ್ಡಿ ಅವರಿದ್ದ ವಾಹನಕ್ಕೆ ಸಿಲುಕಿ ಪಕ್ಷದ ಕಾರ್ಯಕರ್ತ ಚೀಲಿ ಸಿಂಗಯ್ಯ ಎನ್ನುವವರು ಭಾನುವಾರ ಮೃತಪಟ್ಟಿದ್ದರು.
ಈ ಪ್ರಕರಣದಲ್ಲಿ ಜಗನ್ ಮೋಹನ್ ರೆಡ್ಡಿ ಅವರನ್ನು ಆರೋಪಿ ಎಂದು ಗುರುತಿಸಿ ಬಿಎನ್‌ಎಸ್ ಸೆಕ್ಷನ್ 105 ಮತ್ತು 49ರ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.
ಜೂನ್ 18ರಂದು ಈ ಘಟನೆ ನಡೆದಿದ್ದು, ಹಲವು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೆ ಆಗಿವೆ. ವಿವಿಧ ಸಾಕ್ಷ್ಯಗಳನ್ನು ಗಮನಿಸಿದ ಬಳಿಕ ರೆಡ್ಡಿ ಅವರಿದ್ದ ವಾಹನಕ್ಕೆ ನತದೃಷ್ಟ ಸಿಲುಕಿರುವುದು ದೃಢಪಟ್ಟಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸತೀಶ್ ಕುಮಾರ್ ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.