
ನವದೆಹಲಿ: ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಮತ್ತು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಶ್ಯಾಮ್ ಪ್ರಸಾದ್ ಮುಖರ್ಜಿ ಅವರಿಗೆ 1948ರಲ್ಲಿ ಬರೆದ ಪತ್ರಗಳನ್ನು ಉಲ್ಲೇಖಿಸಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಹಿಂದೂ ಮಹಾಸಭಾ ಹಾಗೂ ಆರ್‌ಎಸ್‌ಎಸ್ ವಿರುದ್ಧ ಶುಕ್ರವಾರ ಕಿಡಿಕಾರಿದ್ದಾರೆ.
ಮಹಾತ್ಮ ಗಾಂಧಿ ಪುಣ್ಯತಿಥಿ ಹಿನ್ನೆಲೆಯಲ್ಲಿ ಜೈರಾಮ್ ಅವರು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಗಾಂಧಿ ಅವರು ಹತ್ಯೆಯಾಗುವ ಎರಡು ದಿನಗಳ ಹಿಂದಷ್ಟೇ ನೆಹರೂ ಅವರು ಹಿಂದೂ ಮಹಾಸಭಾ, ಆರ್‌ಎಸ್‌ಎಸ್ ಚಟುವಟಿಕೆಗಳನ್ನು ಟೀಕಿಸಿ ಮುಖರ್ಜಿ ಅವರಿಗೆ ಪತ್ರ ಬರೆದಿದ್ದರು. ಅದಾದ ಕೆಲವು ತಿಂಗಳ ಅಂತರದಲ್ಲಿ (1948ರ ಜುಲೈ 18ರಂದು) ಪಟೇಲ್ ಅವರೂ ಸಂಘಟನೆಗಳ ವಿರುದ್ಧ ಪತ್ರ ಬರೆದಿದ್ದರು ಎಂದು ಜೈರಾಮ್ ಉಲ್ಲೇಖಿಸಿದ್ದಾರೆ.
'ಇವೆರಡೂ ಪತ್ರಗಳು, ಸ್ವಘೋಷಿತ ರಾಷ್ಟ್ರರಕ್ಷಕ ಸಂಘಟನೆಗಳ ಮೇಲೆ ಹೊರಿಸಲಾದ ದೋಷಾರೋಪಗಳಾಗಿವೆ. ಆ ಸಂಘಟನೆಗಳ ಸಿದ್ಧಾಂತ ಪಾಲಿಸುವ, ಸ್ವತಃ ಪ್ರಧಾನಿಯವರ ಕೃಪಾಶೀರ್ವಾದ ಹೊಂದಿರುವ ಸಂಸದರೊಬ್ಬರು 'ಗಾಂಧಿ ಮತ್ತು ಗೋಡ್ಸೆ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡುವುದು ಅಸಾಧ್ಯ' ಎಂದಿರುವುದು ಯೋಚಿಸಬೇಕಾದ ಸಂಗತಿ. ಅವರ ಮನಸ್ಥಿತಿ ಏನು ಎಂಬುದು ಬಹಿರಂಗವಾಗಿದೆ' ಎಂದು ಹೇಳಿದ್ದಾರೆ. ಬಿಜೆಪಿ ಸಂಸದ ಅಭಿಜಿತ್ ಗಂಗೋಪಾಧ್ಯಾಯ ಅವರು 2024ರಲ್ಲಿ ನೀಡಿದ್ದ ಹೇಳಿಕೆಯನ್ನು ಜೈರಾಮ್ ಸ್ಮರಿಸಿದ್ದಾರೆ.
ಗಾಂಧಿ ಹತ್ಯೆಯ ಬಳಿಕ (1948ರ ಜನವರಿ 30ರಂದು) ನೆಹರೂ ಅವರು 'ಆಲ್ ಇಂಡಿಯಾ' ರೇಡಿಯೊದಲ್ಲಿ ಮಾತನಾಡಿದ್ದ ಭಾಷಣದ ಯುಟ್ಯೂಬ್ ಲಿಂಕ್ ಅನ್ನೂ ಹಂಚಿಕೊಂಡಿದ್ದಾರೆ.
ಸಂಘಟನೆ ಮೇಲಿನ ನಿಷೇಧ ಆದೇಶವನ್ನು ಉಲ್ಲಂಘಿಸಿರುವ ಹಿಂದೂ ಮಹಾಸಭಾ – ಪುಣೆ, ಅಹ್ಮದ್‌ನಗರ ಮತ್ತು ದೆಹಲಿಯಲ್ಲಿ ಸಭೆಗಳನ್ನು ನಡೆಸಿದೆ ಎಂಬುದಾಗಿ ನೆಹರೂ ಅವರು ಮುಖರ್ಜಿಗೆ ಬರೆದ ಪತ್ರದಲ್ಲಿ ಹೇಳಿದ್ದರು.
'ಮಹಾತ್ಮ ಗಾಂಧಿ ಅವರು ದೇಶಕ್ಕೆ ತೊಡಕಾಗಿದ್ದಾರೆ. ಅವರು ಆದಷ್ಟು ಬೇಗ ಸತ್ತರೆ ದೇಶಕ್ಕೆ ಒಳಿತಾಗಲಿದೆ ಎಂಬುದಾಗಿ ಸಭೆಗಳಲ್ಲಿ ಭಾಷಣ ಮಾಡಲಾಗಿದೆ. ಇದಕ್ಕಿಂತಲೂ ಕೆಟ್ಟದಾಗಿ ಆರ್‌ಎಸ್‌ಎಸ್ ವರ್ತಿಸಿದೆ. ಅದರ ಆಕ್ಷೇಪಾರ್ಹ ಚಟುವಟಿಕೆಗಳ ಬಗ್ಗೆ ನಾವು ಸಾಕಷ್ಟು ಮಾಹಿತಿ ಸಂಗ್ರಹಿಸಿದ್ದೇವೆ' ಎಂದು ಉಲ್ಲೇಖಿಸಿದ್ದರು.
ಆರ್‌ಎಸ್‌ಎಸ್ ಹಾಗೂ ಹಿಂದೂ ಮಹಾಸಭಾವನ್ನು ಟೀಕಿಸಿ ಪಟೇಲ್ ಅವರು ಬರೆದಿದ್ದ ಪತ್ರಗಳ ಸ್ಕ್ರೀನ್‌ಶಾಟ್‌ಗಳನ್ನೂ ಜೈರಾಮ್ ಹಂಚಿಕೊಂಡಿದ್ದಾರೆ.
ಸ್ವಾತಂತ್ರ್ಯ ಚಳವಳಿಯ ಮುಂದಾಳು, ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರನ್ನು 1948ರ ಇದೇ ದಿನ (ಜನವರಿ 30ರಂದು) ನಾಥುರಾಮ್ ಗೋಡ್ಸೆ ಹತ್ಯೆ ಮಾಡಿದ್ದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.