ಜವಾಹರಲಾಲ್ ನೆಹರೂ
ನವದೆಹಲಿ: ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಪುಣ್ಯ ತಿಥಿಯ ಅಂಗವಾಗಿ ಮಂಗಳವಾರ ಕಾಂಗ್ರೆಸ್ ಶ್ರದ್ಧಾಂಜಲಿ ಸಲ್ಲಿಸಿದೆ.
ನೆಹರೂ ತಮ್ಮ ದೂರದೃಷ್ಟಿಯ ನಾಯಕತ್ವದಿಂದ ಸ್ವತಂತ್ರ ಭಾರತದ ಅಡಿಪಾಯವನ್ನು ಹಾಕಿದ್ದಾರೆ. ಸಾಮಾಜಿಕ ನ್ಯಾಯ, ಶಿಕ್ಷಣ, ಆಧುನಿಕತೆ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಸ್ಥಾಪನೆಯಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ದೆಹಲಿಯಲ್ಲಿನ ಶಾಂತಿ ವನದಲ್ಲಿರುವ ನೆಹರೂ ಅವರ ಸ್ಮಾರಕಕ್ಕೆ ಸೋನಿಯಾ ಗಾಂಧಿ ಪುಷ್ಪ ನಮನ ಸಲ್ಲಿಸಿದರು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡು, ‘ಭಾರತವನ್ನು ಶೂನ್ಯದಿಂದ ಉತ್ತುಂಗಕ್ಕೆ ಕೊಂಡೊಯ್ದ ಆಧುನಿಕ ಭಾರತದ ಸೃಷ್ಟಿಕರ್ತ, ಪ್ರಜಾಪ್ರಭುತ್ವದ ನಿರ್ಭೀತ ರಕ್ಷಕ, ಭಾರತವನ್ನು ವೈಜ್ಞಾನಿಕ, ಆರ್ಥಿಕ, ಕೈಗಾರಿಕಾ ಮತ್ತು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮಾಡಿದವರು ನೆಹರೂ ಅವರು. ದೇಶಕ್ಕೆ ‘ವೈವಿಧ್ಯತೆಯಲ್ಲಿ ಏಕತೆ’ ಎಂಬ ಸಂದೇಶವನ್ನು ನೀಡಿದ, ನಮ್ಮ ಸ್ಫೂರ್ತಿಯ ಮೂಲವಾದ ಪಂಡಿತ್ ಜವಾಹರಲಾಲ್ ನೆಹರೂ ಅವರ ಪುಣ್ಯತಿಥಿಯಂದು ಅವರಿಗೆ ನಮನಗಳು. ನೆಹರೂ ಅವರ ಕೊಡುಗೆ ಇಲ್ಲದಿದ್ದರೆ 21ನೇ ಶತಮಾನವನ್ನು ಈ ರೀತಿಯಾಗಿ ಊಹಿಸಿಕೊಳ್ಳಲೂ ಸಾಧ್ಯವಿಲ್ಲ’ ಎಂದು ಬರೆದುಕೊಂಡಿದ್ದಾರೆ.
‘ಜವಾಹರಲಾಲ್ ನೆಹರೂ ಅವರು ವಿಜ್ಞಾನ ಮತ್ತು ತಂತ್ರಜ್ಞಾನದ ಸಹಾಯದಿಂದ ಮುಂದುವರಿದ ಮತ್ತು ಆಧುನಿಕ ಜಗತ್ತಿನೊಂದಿಗೆ ಸ್ಪರ್ಧಿಸುವ ಭಾರತದ ಕನಸು ಕಂಡಿದ್ದರು. ಇದಕ್ಕಾಗಿ ಅವರು ಶೈಕ್ಷಣಿಕ, ವೈಜ್ಞಾನಿಕ, ಕೈಗಾರಿಕಾ, ತಾಂತ್ರಿಕ, ಸಾಮಾಜಿಕ ಮತ್ತು ಆರ್ಥಿಕ ಸಂಸ್ಥೆಗಳಿಗೆ ಅಡಿಪಾಯ ಹಾಕಿದರು, ಅವು ಇಂದು ಭಾರತದ ಬೆನ್ನೆಲುಬಾಗಿವೆ. ಭಾರತವನ್ನು ಪ್ರಗತಿಯ ಆಧಾರಸ್ತಂಭವಾಗಿ ಬಲಪಡಿಸುತ್ತಿವೆ’ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.