ಜಿತನ್ ರಾಮ್ ಮಾಂಝಿ
–ಪಿಟಿಐ ಚಿತ್ರ
ಪಟ್ನಾ: ವಿಧಾನಸಭೆ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಹಿನ್ನಡೆಯಲ್ಲಿದ್ದ ಅಭ್ಯರ್ಥಿಗೆ ‘ಸಹಾಯ’ ಮಾಡಿದ್ದಾಗಿ ಹೇಳುವ ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಅವರ ವಿಡಿಯೊವೊಂದು ಹರಿದಾಡಿದ್ದು ವಿವಾದಕ್ಕೆ ಕಾರಣವಾಗಿದೆ.
ಮಾಂಝಿ ಅವರ ಲೋಕಸಭಾ ಕ್ಷೇತ್ರವಾದ ಗಯಾದಲ್ಲಿ ಚಿತ್ರೀಕರಣಗೊಂಡಂತೆ ಕಾಣಿಸುವ ವಿಡಿಯೊವನ್ನು ಆರ್‌ಜೆಡಿ ಹಾಗೂ ಕಾಂಗ್ರೆಸ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಮತಗಳ್ಳತನ ನಡೆದಿದೆ ಎನ್ನುವುದಕ್ಕೆ ಪುರಾವೆ ಇದು ಎಂದಿವೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೊ ಕೃತ್ರಿಮ ಎಂದು ಮಾಂಝಿ ಪ್ರತಿಕ್ರಿಯಿಸಿದ್ದಾರೆ.
ಬಿಹಾರದ ಮಾಜಿ ಮುಖ್ಯಮಂತ್ರಿ, ಹಿಂದೂಸ್ತಾನಿ ಅವಾಮಿ ಮೋರ್ಚಾ ಪಕ್ಷದ ಮುಖ್ಯಸ್ಥರೂ ಆಗಿರುವ ಮಾಂಝಿ ಅವರು ಟಿಕಾರಿ ವಿಧಾನಸಭಾ ಕ್ಷೇತ್ರದ ಬಗ್ಗೆ ಮಾತನಾಡುವುದು ವಿಡಿಯೊದಲ್ಲಿ ದಾಖಲಾಗಿದೆ. 2020ರಲ್ಲಿ ಈ ಕ್ಷೇತ್ರದಿಂದ ಅವರ ಪಕ್ಷದ ಅಭ್ಯರ್ಥಿ ಅನಿಲ್ ಕುಮಾರ್ ಗೆದ್ದಿದ್ದರು. ಕಳೆದ ತಿಂಗಳು ನಡೆದ ಚುನಾವಣೆಯಲ್ಲಿ ಆರ್‌ಜೆಡಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು.
‘2020ರಲ್ಲಿ ಅಭ್ಯರ್ಥಿ 2,700 ಮತಗಳಿಂದ ಹಿಂದೆ ಇದ್ದರು. ಅವರು ನನಗೆ ಕರೆ ಮಾಡಿದರು. ನಾನು ಸಂಬಂಧಿಸಿದ ಅಧಿಕಾರಿಗೆ ಕರೆ ಮಾಡಿದೆ. ಕೊನೆಗೆ ಅವರೇ ಗೆದ್ದರು’ ಎಂದು ಸ್ಥಳೀಯ ಮಗಾಹಿ ಭಾಷೆಯಲ್ಲಿ ಮಾತನಾಡುವುದು ವಿಡಿಯೊದಲ್ಲಿದೆ.
ವಿಡಿಯೊದ ಸತ್ಯಾಸತ್ಯತೆಯನ್ನು ಸ್ವತಂತ್ರ್ಯವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ.
‘ಈ ಬಾರಿ ಅಭ್ಯರ್ಥಿ 1,600 ಮತಗಳಿಂದ ಸೋತಿದ್ದಾರೆ. ಆದರೆ ಅವರು ನನಗೆ ಕರೆ ಮಾಡುವುದಕ್ಕೆ ಬದಲು ಸೋಲೊಪ್ಪಿಕೊಂಡಿದ್ದಾರೆ. ಈಗ ತ್ರಿಪುರಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಗಿನ ಗಯಾದ ಜಿಲ್ಲಾಧಿಕಾರಿ, ನನಗೆ ಕರೆ ಮಾಡಿ ಏನು ತಪ್ಪಾಗಿದೆ ಎಂದು ವಿಚಾರಿಸಿದರು. ನನ್ನನ್ನು ಸಂಪರ್ಕಿಸಿದರೆ ಅಭ್ಯರ್ಥಿ ಮನೆಗೆ ಬಂದಿದ್ದರಿಂದ ನನಗೆ ಏನೂ ಮಾಡಲು ಆಗಲಿಲ್ಲ’ ಎಂದು ಮಾಂಝಿ ಹೇಳುವುದು ವಿಡಿಯೊದಲ್ಲಿದೆ.
‘ಇದು ಪ್ರಧಾನಿ ನರೇಂದ್ರ ಮೋದಿಯವರ ಕೃತಕ ಜನಪ್ರಿಯತೆಯ ಅಸಲಿಯತ್ತು. ಇತ್ತೀಚಿನ ಚುನಾವಣಾ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಚುನಾವಣಾ ಆಯೋಗ ಸಹಾಯ ಮಾಡಿದೆ’ಎಂದು ಆರ್‌ಜೆಡಿ ತನ್ನ ಎಕ್ಸ್‌ನಲ್ಲಿ ಬರೆದುಕೊಂಡಿದೆ.
‘ಸಂಸತ್ತಿನಲ್ಲಿ ಮತಗಳ್ಳತನ ಬಗ್ಗೆ ಮಾತನಾಡುವಾಗ ಕೇಂದ್ರ ಗೃಹ ಸಚಿವ ಕೋಪಿಷ್ಠರಾಗಿ ಪ್ರತಿಕ್ರಿಯಿಸುತ್ತಿದ್ದರು. ಈಗ ಅವರ ಸಂಪುಟ ಸಹೋದ್ಯೋಗಿಯೇ ಒಪ್ಪಿಕೊಂಡಿದ್ದು, ಇದು ಮತಗಳ್ಳತನ ಅಲ್ಲ, ಮತ ದರೋಡೆ’ ಎಂದು ಬಿಹಾರ ಕಾಂಗ್ರೆಸ್ ವಕ್ತಾರ ಅಸಿತ್ ನಾಥ್ ಹೇಳಿದ್ದಾರೆ.
‘ಮುಸಾಹರ್ ಸಮುದಾಯದ ಪುತ್ರನನ್ನು ಅವಮಾನಿಬಹುದು. ಕೃತ್ರಿಮ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಅಂತವರಿಗೆ ನಾನು ಹೇಳಬಯಸುವುದಿಷ್ಟೇ, ಈಗ ಮಾಂಝಿ ಎನ್ನುವುದು ಬ್ರ್ಯಾಂಡ್ ಆಗಿದೆ. ನಾನು ಯಾವುದಕ್ಕೂ ಹೆದರುವುದಿಲ್ಲ’ ಎಂದು ಜಿತನ್ ರಾಮ್ ಮಾಂಝಿ ಎಕ್ಸ್‌ನಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.