ಜೋದ್‌ಪುರ: ದೇಶದ ಬಡ ಜನರಿಗೆ ನ್ಯಾಯದಾನ ವ್ಯವಸ್ಥೆಯು ಕೈಗೆ ನಿಲುಕದಂತಾಗಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶನಿವಾರ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
‘ದೇಶದ ನ್ಯಾಯದಾನ ವ್ಯವಸ್ಥೆಯು ದುಬಾರಿಯಾಗಿದೆ. ಬಡಜನರಿಗೆ ಇದು ನಿಲುಕದಂತಾಗಿದೆ. ಕಾರಣಗಳು ಹಲವಾರು ಇರಬಹುದು. ಆದರೆ, ಸಾಮಾನ್ಯ ನಾಗರಿಕರು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ಹೋರಾಟ ನಡೆಸಲು ಸಾಧ್ಯವಿಲ್ಲದಂಥ ಪರಿಸ್ಥಿತಿ ಸೃಷ್ಟಿಯಾಗಿದೆ,’ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ರಾಜಸ್ಥಾನದ ಹೊಸ ಹೈಕೋರ್ಟ್ ಕಟ್ಟಡ ಉದ್ಘಾಟನೆ ವೇಳೆ ರಾಷ್ಟ್ರಪತಿಗಳು ಈ ಮಾತುಗಳನ್ನಾಡಿದ್ದಾರೆ.
‘ಇಂದು ಅರ್ಥಿಕ ದುರ್ಬಲನೊಬ್ಬ ಅಥವಾ ಶೋಷಿತನೊಬ್ಬ ತನ್ನ ಪ್ರಕರಣವನ್ನು ಇಲ್ಲಿಗೆ ತರಲು ಸಾಧ್ಯವಿದೆಯೇ? ನನ್ನ ಈ ಪ್ರಶ್ನೆ ಅತ್ಯಂತ ಪ್ರಮುಖವಾದದ್ದು. ಏಕೆಂದರೆ ದೇಶದ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸುವ ಹೊಣೆಗಾರಿಕೆ ನಾವೆಲ್ಲ ಒಪ್ಪಿರುವ ಸಂವಿಧಾನದ ಮುನ್ನುಡಿಯಲ್ಲೇ ಇದೆ,’ ಎಂದು ಕೋವಿಂದ್ ಹೇಳಿದ್ದಾರೆ.
‘ನ್ಯಾಯ ಪಡೆಯುವ ಪ್ರಕ್ರಿಯೆಲ್ಲಿ ವೆಚ್ಚವಾಗುವ ಕುರಿತು ಗಾಂಧೀಜಿ ಅವರೂ ಆತಂಕ ಹೊಂದಿದ್ದರು. ಬಡವರು ಮತ್ತು ಶೋಷಿತರ ಕಲ್ಯಾಣವನ್ನು ಅವರು ಪರಮ ಗುರಿ ಎಂದು ಭಾವಿಸಿದ್ದರು,’ ಎಂದು ಕೋವಿಂದ್ ಇದೇ ವೇಳೆ ನೆನೆಪಿಸಿಕೊಂಡರು.
ಹೈದರಾಬಾದ್ ಅತ್ಯಾಚಾರ ಪ್ರಕರಣ, ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ನ್ಯಾಯಾಂಗ ಹೋರಾಟ ಮತ್ತು ದುರಂತ ಅಂತ್ಯದ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಈ ಮಾತುಗಳು ಪ್ರಾಮುಖ್ಯತೆ ಪಡೆದುಕೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.