ನ್ಯಾ. ಯಶವಂತ ವರ್ಮಾ, ಓಂ ಬಿರ್ಲಾ
ನವದಹೆಲಿ: ನಿವಾಸದಲ್ಲಿ ನಗದು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಯಶವಂತ ವರ್ಮಾ ಅವರನ್ನು ಪದಚ್ಯುತಗೊಳಿಸಬೇಕು ಎಂದು ಸಂಸದರು ಸಲ್ಲಿಸಿದ ನೋಟಿಸ್ ಆಧರಿಸಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಮಂಗಳವಾರ ತ್ರಿಸದಸ್ಯ ವಿಚಾರಣಾ ಸಮಿತಿಯನ್ನು ರಚಿಸಿದರು. ಆ ಮೂಲಕ ನ್ಯಾಯಮೂರ್ತಿಯ ಪದಚ್ಯುತಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದರು.
ಈ ವಿಚಾರಣಾ ಸಮಿತಿಯಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಅರವಿಂದ ಕುಮಾರ್, ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಮಹೀಂದ್ರ ಮೋಹನ ಶ್ರೀವಾಸ್ತವ ಮತ್ತು ಕರ್ನಾಟಕ ಹೈಕೋರ್ಟ್‌ನ ಹಿರಿಯ ವಕೀಲ ಬಿ.ವಿ. ಆಚಾರ್ಯ ಅವರನ್ನು ನೇಮಿಸಲಾಗಿದೆ.
‘ಅತಿ ಶೀಘ್ರದಲ್ಲಿ ಸಮಿತಿಯು ವರದಿ ಸಲ್ಲಿಸಲಿದೆ. ವರದಿ ಬರುವವರೆಗೂ ಅವರನ್ನು ಪದಚ್ಯುತಗೊಳಿಸುವ ಪ್ರಕ್ರಿಯೆಯನ್ನು ಬಾಕಿ ಉಳಿಸಲಾಗುವುದು’ ಎಂದು ಬಿರ್ಲಾ ಹೇಳಿದ್ದಾರೆ.
ನ್ಯಾ. ವರ್ಮಾ ಅವರನ್ನು ಪದಚ್ಯುತಗೊಳಿಸುವಂತೆ ರವಿಶಂಕರ ಪ್ರಸಾದ್ ಮತ್ತು ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನೂ ಒಳಗೊಂಡು 146 ಸಂಸದರಿಂದ ಜುಲೈ 21ರಂದು ಪ್ರಸ್ತಾವ ಸಲ್ಲಿಕೆಯಾಗಿದೆ.
ಮಾರ್ಚ್ 14ರಂದು ತಮ್ಮ ನಿವಾಸದಲ್ಲಿ ಸಂಭವಿಸಿದ ಅಗ್ನಿ ಆಕಸ್ಮಿಕ ನಂದಿಸಲು ಬಂದಿದ್ದ ಅಗ್ನಿಶಾಮಕ ಸಿಬ್ಬಂದಿಗೆ ಅಪಾರ ಪ್ರಮಾಣದ ಸುಟ್ಟ ನೋಟುಗಳು ಪತ್ತೆಯಾಗಿದ್ದವು. ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಆಂತರಿಕ ವಿಚಾರಣೆ ನಡೆಸಿದವು.
‘ನಿಷ್ಕಳಂಕ ವ್ಯಕ್ತಿತ್ವ ಮತ್ತು ಆರ್ಥಿಕ ಹಾಗೂ ಬೌದ್ಧಿಕ ಸಮಗ್ರತೆ ಎಂಬುದು ನ್ಯಾಯಾಂಗದ ತಳಪಾಯವಾಗಿದೆ. ಈ ಪ್ರಕರಣದಲ್ಲಿನ ಆರೋಪವು ಭ್ರಷ್ಟಾಚಾರದತ್ತ ಬೊಟ್ಟು ಮಾಡುತ್ತಿದ್ದು, ಸಂವಿಧಾನದ 124, 217 ಮತ್ತು 218ನೇ ವಿಧಿಗಳ ಅಡಿಯಲ್ಲಿ ನ್ಯಾಯಮೂರ್ತಿ ವರ್ಮಾ ಪದಚ್ಯುತಿಯಂತ ಕ್ರಮಕ್ಕೆ ಅರ್ಹರು. ಈ ಪ್ರಕರಣದಲ್ಲಿ ಸಂಸತ್ತು ಒಂದು ಧ್ವನಿಯಾಗಿ ಮಾತನಾಡಬೇಕಿದೆ. ಜತೆಗೆ ಭ್ರಷ್ಟಾಚಾರಕ್ಕೆ ಶೂನ್ಯ ಸಹಿಷ್ಣುತೆಯ ಬದ್ಧತೆಯ ಸಂದೇಶವನ್ನು ಇಡೀ ದೇಶದ ಜನರೇ ರವಾನಿಸಬೇಕಾಗಿದೆ’ ಎಂದು ಬಿರ್ಲಾ ಹೇಳಿದ್ದಾರೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸುಪ್ರೀಂ ಕೋರ್ಟ್‌ನ ಹಿಂದಿನ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಅವರು ಆಂತರಿಕ ವಿಚಾರಣೆಯನ್ನು ನಡೆಸಿದ್ದರು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನ್ಯಾ. ಶೀಲ್ ನಾಗು ಅವರ ನೇತೃತ್ವದಲ್ಲಿ ಹತ್ತು ದಿನಗಳ ಕಾಲ ತನಿಖೆ ನಡೆಯಿತು. 55 ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳಲಾಯಿತು. ಘಟನಾ ಸ್ಥಳಕ್ಕೂ ಈ ಸಮಿತಿ ಭೇಟಿ ನೀಡಿತ್ತು. ಮೇ 4ರಂದು ಸಮಿತಿ ವರದಿ ಸಲ್ಲಿಸಿತ್ತು. ಇದನ್ನು ಆಧರಿಸಿ ರಾಜೀನಾಮೆ ಸಲ್ಲಿಸುವಂತೆ ಅಥವಾ ಮಹಾಭಿಯೋಗ ಎದುರಿಸುವಂತೆ ಸಂಜೀವ್ ಖನ್ನಾ ಅವರು ನ್ಯಾ. ವರ್ಮಾ ಅವರಿಗೆ ಸೂಚಿಸಿದ್ದರು.
ರಾಜೀನಾಮೆ ಪ್ರಸ್ತಾವವನ್ನು ನ್ಯಾ. ವರ್ಮಾ ನಿರಾಕರಿಸಿದ್ದರು. ಇದರ ಬೆನ್ನಲ್ಲೇ ವರದಿಯನ್ನು ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗೆ ನ್ಯಾ. ಸಂಜೀವ್ ಖನ್ನಾ ರವಾನಿಸಿದ್ದರು. ನ್ಯಾ. ಖನ್ನಾ ಅವರ ಕ್ರಮವನ್ನು ಪ್ರಶ್ನಿಸಿ ನ್ಯಾ. ವರ್ಮಾ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಕಳೆದವಾರ ವಜಾಗೊಳಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.