ADVERTISEMENT

ಮಧ್ಯಪ್ರದೇಶ ಬಿಕ್ಕಟ್ಟು | ಸಿಂಧಿಯಾ ಬಣದ 19 ಶಾಸಕರಿಂದ ಕಾಂಗ್ರೆಸ್‌ಗೆ ರಾಜೀನಾಮೆ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2020, 10:08 IST
Last Updated 10 ಮಾರ್ಚ್ 2020, 10:08 IST
ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಕಮಲನಾಥ್‌ (ರಾಜೀನಾಮೆ ಸಲ್ಲಿಸಿದ 19 ಶಾಸಕರು–ಒಳಚಿತ್ರದಲ್ಲಿ)
ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಕಮಲನಾಥ್‌ (ರಾಜೀನಾಮೆ ಸಲ್ಲಿಸಿದ 19 ಶಾಸಕರು–ಒಳಚಿತ್ರದಲ್ಲಿ)   

ಭೋಪಾಲ್‌:ಪ್ರಮುಖ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು ಕಾಂಗ್ರೆಸ್‌ ಪಕ್ಷದಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ,ಆರು ಸಚಿವರೂ ಸೇರಿದಂತೆ ಒಟ್ಟು 19 ಜನ ಶಾಸಕರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ.

ಹೀಗಾಗಿ ಮಧ್ಯಪ್ರದೇಶದಲ್ಲಿ ಕಮಲನಾಥ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಪತನದ ಹಾದಿ ಹಿಡಿದಿದೆ. ಸಿಂಧಿಯಾ ತಮ್ಮ ರಾಜೀನಾಮೆ ಸಂಬಂಧ, ಕಾಂಗ್ರೆಸ್‌ ನಾಯಕಿಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು. ಅದರಲ್ಲಿ ‘ಕಳೆದ 18 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯನಾಗಿ ಕೆಲಸ ಮಾಡಿದ್ದೇನೆ.ಮುಂದೆ ಸಾಗಲು ನನಗಿದು ಸಕಾಲ’ ಎಂದು ತಿಳಿಸಿದ್ದರು.

ಸಿಂಧಿಯಾ ರಾಜೀನಾಮೆ ನೀಡಿದ ಕೆಲಹೊತ್ತಿನಲ್ಲೇ, ಅವರಬೆಂಬಲಿಗಶಾಸಕರು ರಾಜೀನಾಮೆ ನೀಡಿದ್ದಾರೆ. ಎಲ್ಲ ಶಾಸಕರು ರಾಜೀನಾಮೆ ಪತ್ರವನ್ನು ಹಿಡಿದಿರುವ ಚಿತ್ರವೊಂದು ವೈರಲ್‌ ಆಗಿದೆ. ಮಾತ್ರವಲ್ಲದೆಇನ್ನೂ ಆರು ಶಾಸಕರು ಇಂದು ಸಂಜೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದೂ ವರದಿಯಾಗಿದೆ.

ಸದ್ಯ ರಾಜೀನಾಮೆ ಸಲ್ಲಿಸಿರುವ ಸಚಿವರಾದ ಇಮಾರ್ತಿ ದೇವಿ, ತುಳಸಿ ಸಿಲಾವತ್‌, ಗೋವಿಂದ್‌ ಸಿಂಗ್‌ ರಜಪೂತ್‌, ಮಹೇಂದ್ರ ಸಿಂಗ್‌ ಸಿಸೋಡಿಯಾ, ಪ್ರದ್ಯುಮಾನ್‌ ಸಿಂಗ್ ತೋಮರ್‌ ಹಾಗೂ ಡಾ. ಪ್ರಭುರಾಮ್‌ ಚೌಧರಿ ಅವರನ್ನು ಈಕೂಡಲೇ ಉಚ್ಚಾಟನೆ ಮಾಡುವಂತೆ ರಾಜ್ಯಪಾಲ ಲಾಲ್‌ಜಿ ತೊಂಡನ್‌ ಅವರಿಗೆ ಮುಖ್ಯಮಂತ್ರಿ ಕಮಲನಾಥ್‌ ಪತ್ರ ಬರೆದಿದ್ದಾರೆ.

ಕಮಲನಾಥ್‌ಸಂಪುಟ‌ದ ಎಲ್ಲ ಸಚಿವರಿಂದ ರಾಜೀನಾಮೆ
ರಾಜ್ಯಸಭೆಗೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಿಂಧಿಯಾ ಮತ್ತು ಅವರ ಬೆಂಬಲಿಗರು ‍ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದರು. ಇದು ಪಕ್ಷದ ಆತಂಕ ಹೆಚ್ಚಿಸಿತ್ತು.ಹೀಗಾಗಿ, ಕಮಲನಾಥ್‌ಸಂಪುಟ‌ ಪುನಾರಚನೆಗೆ ನಿರ್ಧರಿಸಿದ್ದರು.

ಸಿಂಧಿಯಾ ಬೆಂಬಲಿಗರಿಗೆ ಸಚಿವ ಸ್ಥಾನ ನೀಡುವ ಸಲುವಾಗಿ ಕಮಲನಾಥ್‌ ಸಂಪುಟ‌ದ ಎಲ್ಲ ಸಚಿವರೂ ಸೋಮವಾರ ರಾಜೀನಾಮೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.