
ಮುಂಬೈ: ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆ ಕಾವು ದಿನದಿಂದ ದಿನಕ್ಕೆ ಏರತೊಡಗಿದೆ. ಕೊನೆ ಕ್ಷಣದ ಚುನಾವಣ ಪ್ರಚಾರದ ವೇಳೆ ವಾಗ್ವಾದಗಳು ಜೋರಾಗಿಯೇ ನಡೆಯುತ್ತಿವೆ. ಮಹಾರಾಷ್ಟ್ರ ನವನಿರ್ಮಾಣ ಸಮಿತಿಯ (ಎಂಎನ್‌ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರು ಬಿಜೆಪಿ ನಾಯಕ ಕೆ.ಅಣ್ಣಾಮಲೈ ಅವರನ್ನು ‘ರಸಮಲೈ’ ಎಂದು ಅಣಕಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಚುನಾವಣಾ ಸಮಾವೇಶದಲ್ಲಿ ಮಾತನಾಡಿದ ರಾಜ್ ಠಾಕ್ರೆ, 'ಇತ್ತೀಚೆಗೆ ತಮಿಳುನಾಡಿನಿಂದ ಯಾರೋ ‘ರಸಮಲೈ’ ಮುಂಬೈಗೆ ಬಂದಿದ್ದರು. ಬಾಂಬೆ (ಮುಂಬೈ) ಮಹಾರಾಷ್ಟ್ರ ನಗರವಲ್ಲ. ಮುಂಬೈಗೂ ಮಹಾರಾಷ್ಟ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದರು. ಅವರು ಯಾರು? ಅವರಿಗೂ ಮುಂಬೈಗೂ ಏನು ಸಂಬಂಧ ಮತ್ತು ಅವರು ಇಲ್ಲಿಗೇಕೆ ಬಂದಿದ್ದರು? ಅದಕ್ಕಾಗಿಯೇ ಬಾಳಾಸಾಹೇಬರು ‘ಹಟಾವೋ ಲುಂಗಿ ಬಜಾವೋ ಪುಂಗಿ’ ಎಂದು ಹೇಳಿದ್ದರು ಎಂದು 1960 ಮತ್ತು 1970ರ ದಶಕದ ಶಿವಸೇನೆಯ ಘೋಷಣೆಯನ್ನು ಉಲ್ಲೇಖಿಸಿ ಕುಟುಕಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅಣ್ಣಾಮಲೈ ನಾನು ಮುಂಬೈಗೆ ಬಂದರೆ ನನ್ನ ಕಾಲುಗಳನ್ನು ಕತ್ತರಿಸುತ್ತೇವೆ ಎಂದು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ. ನಾನು ಮುಂಬೈಗೆ ಬರುತ್ತೇನೆ. ನನ್ನ ಕಾಲುಗಳನ್ನು ಕತ್ತರಿಸಲು ಪ್ರಯತ್ನಿಸಿ ನೋಡೋಣ. ಇಂತಹ ಬೆದರಿಕೆಗಳಿಗೆಲ್ಲ ಹೆದರುತ್ತಿದ್ದರೆ, ನಾನು ನನ್ನ ಹಳ್ಳಿಯಲ್ಲಿಯೇ ಇರುತ್ತಿದ್ದೆ ಎಂದು ತಿರುಗೇಟು ನೀಡಿದ್ದಾರೆ.
ನನಗೆ ಬೆದರಿಕೆ ಹಾಕಲು ಆದಿತ್ಯ ಠಾಕ್ರೆ ಮತ್ತು ರಾಜ್ ಠಾಕ್ರೆ ಯಾರು?. ನಾನು ರೈತನ ಮಗನಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ಅವರ ಬೆದರಿಕೆಗೆ ಹೆದರಲ್ಲ ಎಂದು ಕುಟುಕಿದ್ದಾರೆ.
ನನ್ನನ್ನು ಅವಮಾನಿಸುವುದು ಹೊಸದೇನಲ್ಲ. ಆದರೆ, ಈಗ ಧೋತಿ, ಲುಂಗಿ ಉಲ್ಲೇಖಗಳ ಮೂಲಕ ತಮಿಳರನ್ನೇ ಅವಮಾನಿಸಲಾಗುತ್ತಿದೆ ಎಂದೂ ಅಣ್ಣಾಮಲೈ ಆರೋಪಿಸಿದ್ದಾರೆ.
ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಚುನಾವಣೆ ಅಂಗವಾಗಿ ಅಣ್ಣಾಮಲೈ ಅವರು ಇತ್ತೀಚೆಗೆ ಮುಂಬೈನಲ್ಲಿ ತಮಿಳಿಗರ ಪ್ರಭಾವ ಇರುವ ಧಾರಾವಿ ಮತ್ತು ಸಿಯಾನ್-ಕೋಳಿವಾಡ ಪ್ರದೇಶಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು.
ಇದೇ ವೇಳೆ ಮಾತನಾಡಿದ್ದ ಅವರು, ‘ಬಾಂಬೆ (ಮುಂಬೈ) ಮಹಾರಾಷ್ಟ್ರ ನಗರವಲ್ಲ. ಬದಲಾಗಿ, ಅಂತರರಾಷ್ಟ್ರೀಯ ನಗರವಾಗಿದೆ. ಇದು ₹75,000 ಕೋಟಿ ಬಜೆಟ್ ಹೊಂದಿದೆ. ಚೆನ್ನೈ ₹8,000 ಕೋಟಿ ಬಜೆಟ್ ಹೊಂದಿದ್ದರೆ, ಬೆಂಗಳೂರು ₹19,000 ಕೋಟಿ ಬಜೆಟ್ ಹೊಂದಿದೆ’ ಎಂದು ಹೇಳಿದ್ದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ ಅವರು, ‘ಮುಂಬೈಯನ್ನು ಮುನ್ನಡೆಸಲು ಬಿಜೆಪಿ ತ್ರಿಬಲ್ ಎಂಜಿನ್ ಸರ್ಕಾರ ಸ್ಥಾಪಿಸಲು ಉತ್ಸುಕವಾಗಿದೆ. ನೀವು ತಮಿಳುನಾಡನ್ನು ನೋಡಿದರೆ ಅಲ್ಲಿ (ರಾಜ್ಯದಲ್ಲಿ) ಡಿಎಂಕೆ ಮತ್ತು ಕೇಂದ್ರದಲ್ಲಿ ಬಿಜೆಪಿ, ತೆಲಂಗಾಣದಲ್ಲಿ ಕಾಂಗ್ರೆಸ್ ಮತ್ತು ಕೇಂದ್ರದಲ್ಲಿ ಬಿಜೆಪಿ, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಆದರೆ, ಇಲ್ಲಿ ನಾವು ಸಂಭಾವ್ಯ ‘ತ್ರಿಬಲ್ ಎಂಜಿನ್ ಸರ್ಕಾರ’ವನ್ನು ಎದುರು ನೋಡುತ್ತಿದ್ದೇವೆ’ ಎಂದಿದ್ದರು.
ಅಣ್ಣಾಮಲೈ ಹೇಳಿಕೆ ಕುರಿತು ಶಿವಸೇನಾ (ಯುಬಿಟಿ) ರಾಜ್ಯಸಭಾ ಸದಸ್ಯ ಸಂಜಯ್ ರಾವುತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಅಣ್ಣಾಮಲೈ ಅವರು ತಮಿಳುನಾಡಿನಿಂದ ಮುಂಬೈಗೆ ಬಂದು ಮುಂಬೈ ಮಹಾರಾಷ್ಟ್ರಕ್ಕೆ ಸೇರಿಲ್ಲ ಎಂದು ಹೇಳಿರುವುದನ್ನು ನೋಡಿ ನನಗೆ ಆಘಾತವಾಗಿದೆ. ಈ ವಿಚಾರವಾಗಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಮತ್ತು ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಮೌನವಹಿಸಿರುವುದು ಎಷ್ಟು ಸರಿ’ ಎಂದು ರಾವುತ್ ಪ್ರಶ್ನಿಸಿದ್ದರು.
ಪುಣೆ, ಬೃಹನ್‌ಮುಂಬೈ ಮತ್ತು ಪಿಂಪ್ರಿ-ಚಿಂಚ್‌ವಾಡ್ ಸೇರಿದಂತೆ ರಾಜ್ಯದ 29 ಮುನ್ಸಿಪಲ್ ಕಾರ್ಪೊರೇಷನ್‌ಗಳಿಗೆ ಜನವರಿ 15ರಂದು ಚುನಾವಣೆ ನಡೆಯಲಿದ್ದು, ಜನವರಿ 16 ರಂದು ಮತ ಎಣಿಕೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.