ADVERTISEMENT

ಕಂಗನಾ ಮೇಲೆ ಹಲ್ಲೆ ನಡೆಸಿದ ಮಹಿಳಾ ಕಾನ್‌ಸ್ಟೆಬಲ್ ಬೆಂಬಲಿಸಿ ರೈತರ ಮೆರವಣಿಗೆ

ಪಿಟಿಐ
Published 9 ಜೂನ್ 2024, 10:33 IST
Last Updated 9 ಜೂನ್ 2024, 10:33 IST
   

ಚಂಡೀಗಢ: ಸಂಸದೆ ಮತ್ತು ನಟಿ ಕಂಗನಾ ಮೇಲೆ ಹಲ್ಲೆ ನಡೆಸಿದ ಸಿಐಎಸ್‌ಎಫ್ ಮಹಿಳಾ ಕಾನ್‌ಸ್ಟೆಬಲ್‌ಗೆ ಬೆಂಬಲ ಸೂಚಿಸಿ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ದಿ ಕಿಸಾನ್ ಮಜುಂದಾರ್ ಮೋರ್ಚಾ ಸೇರಿ ಹಲವು ರೈತ ಸಂಘಟನೆಗಳ ಸದಸ್ಯರು ಪಂಜಾಬ್‌ನ ಮೊಹಾಲಿಯಲ್ಲಿ ಮೆರವಣಿಗೆ ನಡೆಸಿದರು.

ಈ ಕುರಿತಂತೆ ನ್ಯಾಯಸಮ್ಮತ ತನಿಖೆ ನಡೆಸಬೇಕು. ಮಹಿಳಾ ಕಾನ್‌ಸ್ಟೆಬಲ್‌ಗೆ ಯಾವುದೇ ರೀತಿಯಲ್ಲೂ ಅನ್ಯಾಯ ಆಗಬಾರದು ಎಂದು ರೈತ ಮುಖಂಡರು ಆಗ್ರಹಿಸಿದ್ದಾರೆ.

ಮೊಹಾಲಿ ಆಂಬ್ ಸಾಹಿಬ್ ಗುರುದ್ವಾರದಿಂದ ಮೆರವಣಿಗೆ ಆರಂಭವಾಗಿದ್ದು, ಭಾರಿ ಭದ್ರತೆ ಕೈಗೊಳ್ಳಲಾಗಿದೆ.

ADVERTISEMENT

ಘಟನೆ ಕುರಿತಂತೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ಮಹಿಳಾ ಕಾನ್‌ಸ್ಟೆಬಲ್ ಕಪಾಳಮೋಕ್ಷ ಮಾಡಿದ್ದಕ್ಕೆ ಕಾರಣಗಳೇನು ಎಂಬುದನ್ನು ಪತ್ತೆ ಹಚ್ಚಬೇಕು. ಮಹಿಳಾ ಕಾನ್‌ಸ್ಟೆಬಲ್‌ಗೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ರೈತ ಮುಖಂಡ ಸರ್ವಣ್ ಸಿಂಗ್ ಪಂದೇರ್ ಹೇಳಿದ್ದಾರೆ.

ಪಂಜಾಬ್ ಜನರ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿದ ಕಂಗನಾ ವಿರುದ್ಧ ರೈತ ಮುಖಂಡರು ಕಿಡಿಕಾರಿದ್ಧಾರೆ.

ಚಂಡೀಗಢ ವಿಮಾನನಿಲ್ದಾಣದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಸಿಐಎಸ್‌ಎಫ್ ಮಹಿಳಾ ಕಾನ್‌ಸ್ಟೆಬಲ್ ಕೌರ್‌, ಕಂಗನಾ ಹೇಳಿಕೆಗಳಿಂದ ರೋಸಿಹೋಗಿ ಹಲ್ಲೆ ಮಾಡಿದ್ದರು.

ಕೌರ್ ವಿರುದ್ಧ ಮೊಹಾಲಿ ಪೊಲೀಸರು ಐಪಿಸಿ ಸೆಕ್ಷನ್ 323ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು.

ಚಂಡೀಗಢ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ವೇಳೆ ಕಾನ್‌ಸ್ಟೆಬಲ್‌ ನನ್ನ ಮೇಲೆ ಹಲ್ಲೆ ನಡೆಸಿ ನಿಂದಿಸಿದ್ದಾರೆ ಎಂದು ಗುರುವಾರ ವಿಡಿಯೊ ಸಂದೇಶದಲ್ಲಿ ರನೌತ್ ಹೇಳಿದ್ದರು, ಹಿಮಾಚಲ ಪ್ರದೇಶದ ಮಂಡಿಯಿಂದ ಲೋಕಸಭೆಗೆ ಆಯ್ಕೆಯಾದ ಎರಡು ದಿನಗಳ ನಂತರ ಕೊಳಕು ನಡವಳಿಕೆ ಆರಂಭವಾಗಿದೆ ಎಂದು ಹೇಳಿದ್ದರು.

ಗುರುವಾರದ ಘಟನೆಯ ನಂತರ ದೆಹಲಿಗೆ ಬಂದಿಳಿದ ಕಂಗನಾ, ‘ಪಂಜಾಬ್‌ನಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರ ಆಘಾತಕಾರಿ ರೀತಿ ಏರಿಕೆ’ ಎಂಬ ಶೀರ್ಷಿಕೆಯಡಿ ವಿಡಿಯೊ ಹೇಳಿಕೆಯನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದರು.

‘ಕಾನ್‌ಸ್ಟೆಬಲ್ ನನ್ನ ಮೇಲೆ ಹಲ್ಲೆ ನಡೆಸಿ ನಿಂದಿಸಿದರು. ಯಾಕೆ ಈ ಕೆಲಸ ಮಾಡಿದೆ ಎಂದು ನಾನು ಕೇಳಿದೆ. ರೈತರ ಪ್ರತಿಭಟನೆ ಬೆಂಬಲಿಸಿ ಕೃತ್ಯ ಎಸಗಿದೆ ಎಂದು ಕಾನ್‌ಸ್ಟೆಬಲ್ ಹೇಳಿದಳು. ನನ್ನ ಕಳವಳವೇನೆಂದರೆ, ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದ ಪಂಜಾಬ್‌ನಲ್ಲಿ ಹೆಚ್ಚುತ್ತಿದೆ. ಇದನ್ನು ನಾವು ಹೇಗೆ ನಿರ್ವಹಿಸುವುದ?’ ಎಂದು ಕಂಗನಾ ಪ್ರಶ್ನಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.