ADVERTISEMENT

ಬಾಲಕಿಯನ್ನು ಅಪಹರಿಸಿ ಅತ್ಯಾಚಾರ: ಯೂಟ್ಯೂಬರ್ ಬಂಧನ, ಆರೋಪಿ ಪೊಲೀಸ್‌ಗೆ ಹುಡುಕಾಟ

ಪಿಟಿಐ
Published 8 ಜನವರಿ 2026, 7:11 IST
Last Updated 8 ಜನವರಿ 2026, 7:11 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>
   

ಸಾಂದರ್ಭಿಕ ಚಿತ್ರ

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದ ಸಚೆಂಡಿ ಪ್ರದೇಶದಲ್ಲಿ 14 ವರ್ಷದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದಲ್ಲಿ ಸ್ಥಳೀಯ ಯೂಟ್ಯೂಬರ್‌ನನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್‌ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರಕರಣ ಭಾರಿ ತೀವ್ರತೆ ಪಡೆದುಕೊಂಡಿದ್ದು, ಪೊಲೀಸ್ ಉಪ ಆಯುಕ್ತ (ಪಶ್ಚಿಮ) ದಿನೇಶ್ ಚಂದ್ರ ತ್ರಿಪಾಠಿಯನ್ನು ಪದಚ್ಯುತಗೊಳಿಸಿ ಡಿಸಿಪಿ ಪ್ರಧಾನ ಕಚೇರಿಗೆ ನಿಯೋಜಿಸಲಾಗಿದೆ. ಕರ್ತವ್ಯ ಲೋಪ ಹಾಗೂ ವಾಸ್ತವಾಂಶ ತಿರುಚಿದ ಆರೋಪದಲ್ಲಿ ಸಚೆಂಡಿ ಠಾಣಾಧಿಕಾರಿ ವಿಕ್ರಂ ಸಿಂಗ್ ಅವರನ್ನು ಅಮಾನತು ಮಾಡಲಾಗಿದೆ.

ADVERTISEMENT

7 ತರಗತಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿರುವ ಸಂತ್ರಸ್ತೆಯನ್ನು ಮಹೀಂದ್ರಾ ಸ್ಕಾರ್ಪಿಯೊದಲ್ಲಿ ಸೋಮವಾರ ರಾತ್ರಿ 10 ಗಂಟೆ ವೇಳೆ ಅಪಹರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಂತ್ರಸ್ತೆಯನ್ನು ರೈಲು ಹಳಿ ಸಮೀಪದ ಮರುಭೂಮಿ ಪ್ರದೇಶಕ್ಕೆ ಕರೆದೊಯ್ದು, ಸುಮಾರು ಎರಡು ಗಂಟೆ ಲೈಂಗಿಕವಾಗಿ ದೌರ್ಜನ್ಯ ಎಸಗಿದ್ದಾರೆ. ಪ್ರಜ್ಞಾಹೀನ ಅವಸ್ಥೆಯಲ್ಲಿದ್ದ ಆಕೆಯನ್ನು ಮನೆ ಮುಂದೆ ಎಸೆದು ಹೋಗಿದ್ದಾರೆ.

‘ಸಂತ್ರಸ್ತೆಯ ಹೇಳಿಕೆ ಆಧರಿಸಿ, ಸಬ್‌ ಇನ್‌ಸ್ಪೆಕ್ಟರ್ ಅಮಿತ್ ಕುಮಾರ್ ಮೌರ್ಯ ಹಾಗೂ ಯೂಟ್ಯೂಬರ್ ಶಿವಭರಣ್ ಯಾದವ್‌ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಯಾದವ್‌ನನ್ನು ಬಂಧಿಲಾಗಿದ್ದು, ತಲೆ ಮರೆಸಿಕೊಂಡಿರುವ ಎಸ್‌ಐ ಪತ್ತೆಗೆ ನಾಲ್ಕು ತಂಡ ರಚಿಸಲಾಗಿದೆ’ ಎಂದು ಪೊಲೀಸ್ ಆಯುಕ್ತ ರಘುಬೀರ್ ಲಾಲ್ ತಿಳಿಸಿದ್ದಾರೆ.

ಅಪರಾಧಕ್ಕೆ ಬಳಸಲಾದ, ಅಮಿತ್ ಕುಮಾರ್‌ಗೆ ಸೇರಿದ ಎಸ್‌ಯುವಿಯನ್ನು ದಸ್ತಗಿರಿ ಮಾಡಲಾಗಿದೆ.

ಬೈತೂರ್ ಪೊಲೀಸ್ ಠಾಣೆಗೆ ವರ್ಗಾವಣೆಯಾದರೂ, ಕೃತ್ಯ ನಡೆಯುವ ವೇಳೆ ಅಮಿತ್ ಕಮಾರ್, ಸಚೆಂಡಿಯಲ್ಲಿದ್ದರು.

ಸ್ಥಳೀಯ ಪೊಲೀಸರು ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎಂದು ಸಂತ್ರಸ್ತರ ಕುಟುಂಬದವರು ಆರೋಪಿಸಿದ್ದರಲ್ಲದೆ, ಪೊಲೀಸ್ ಅಧಿಕಾರಿಯೊಬ್ಬರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಹೇಳಿದಾಗ ಅದನ್ನೂ ಆರಂಭದಲ್ಲಿ ನಿರಾಕರಿಸಿದರು ಎಂದು ದೂರಿದ್ದಾರೆ.

ಬಾಲಕಿಯ ಮೊಬೈಲ್ ಫೋನ್ ವಶಪಡಿಸಿಕೊಂಡು, ನ್ಯಾಯಾಲಯದ ಹೇಳಿಕೆ ದಾಖಲಿಸುವವರೆಗೆ ಆಕೆಯನ್ನು ಮನೆಗೆ ಹಿಂತಿರುಗದಂತೆ ತಡೆದರು ಎಂದು ಬಾಲಕಿಯ ಸಹೋದರ ಹೇಳಿದ್ದಾರೆ.

ಘಟನೆ ಸಂಬಂಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸದ್ದಕ್ಕೆ ಹಾಗೂ ದಾಖಲೆಗಳಲ್ಲಿ ಸತ್ಯಗಳನ್ನು ತಪ್ಪಾಗಿ ನಿರೂಪಿಸಿದ ಆರೋಪದ ಮೇಲೆ ಎಸ್‌ಎಚ್‌ಒ ವಿಕ್ರಮ್ ಸಿಂಗ್ ಅವರನ್ನು ಅಮಾನತುಗೊಳಿಸಲಾಗಿದೆ. ದೀನನಾಥ್ ಮಿಶ್ರಾ ಅವರಿಗೆ ಸಚೆಂಡಿ ಪೊಲೀಸ್ ಠಾಣೆಯ ಉಸ್ತುವಾರಿ ವಹಿಸಲಾಗಿದೆ.

ಪ್ರಕರಣದ ತನಿಖೆಯನ್ನು ಹೆಚ್ಚುವರಿ ಡಿಸಿಪಿ (ಪಶ್ಚಿಮ) ಕಪಿಲ್ ದೇವ್ ಸಿಂಗ್ ಅವರಿಗೆ ಹಸ್ತಾಂತರಿಸಲಾಗಿದೆ.

ಈ ಘಟನೆಯು ರಾಜಕೀಯ ಆಕ್ರೋಶಕ್ಕೆ ಕಾರಣವಾಗಿದೆ. ‘ತನಿಖೆಯನ್ನು ಸಂಪೂರ್ಣ ಪಾರದರ್ಶಕತೆಯಿಂದ ನಡೆಸಲಾಗುತ್ತಿದೆ ಮತ್ತು ಎಲ್ಲಾ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ರಘುಬೀರ್ ಲಾಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.