ADVERTISEMENT

ತೀಸ್ತಾ, ಜುಬೈರ್‌ ಬಂಧನ: ಭಾರತದ ಘನತೆಗೆ ಹಾನಿ- ಕಪಿಲ್‌ ಸಿಬಲ್‌

ಪಿಟಿಐ
Published 3 ಜುಲೈ 2022, 12:40 IST
Last Updated 3 ಜುಲೈ 2022, 12:40 IST
ರಾಜ್ಯಸಭಾ ಸದಸ್ಯ ಕಪಿಲ್‌ ಸಿಬಲ್‌
ರಾಜ್ಯಸಭಾ ಸದಸ್ಯ ಕಪಿಲ್‌ ಸಿಬಲ್‌   

ನವದೆಹಲಿ: ಆಲ್ಟ್‌ನ್ಯೂಸ್‌ ಸಹ ಸಂಸ್ಥಾಪಕ ಮಹಮ್ಮದ್‌ ಜುಬೈರ್‌ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್‌ ಬಂಧನದ ಬಗ್ಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆ ಕಳವಳ ವ್ಯಕ್ತಪಡಿಸಿದ ಬಗ್ಗೆ ರಾಜ್ಯಸಭಾ ಸದಸ್ಯ ಕಪಿಲ್‌ ಸಿಬಲ್‌ ಮಾತನಾಡಿದ್ದಾರೆ. ಅದರಲ್ಲಿ ಅನುಮಾನವೇ ಇಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಗೆ ಹಾನಿಯಾಗುತ್ತಿದೆ ಎಂದರು.

ಇಂಗ್ಲೆಂಡ್‌ನಲ್ಲಿರುವ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ದೂರವಾಣಿ ಮೂಲಕ ಪಿಟಿಐ ಸಂದರ್ಶನದಲ್ಲಿ ಮಾತನಾಡಿದರು. ಗುಜರಾತ್‌ನಲ್ಲಿ 2002ರಲ್ಲಿ ನಡೆದಿದ್ದ ಕೋಮುಗಲಭೆ ಮತ್ತು ಸಾಬರಮತಿ ಎಕ್ಸ್‌ಪ್ರೆಸ್‌ ರೈಲಿಗೆ ಬೆಂಕಿ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಎಸ್‌ಐಟಿ ಅಂದಿನ ಗುಜರಾತ್‌ ಸಿಎಂ ನರೇಂದ್ರ ಮೋದಿ ಮತ್ತು 63 ಜನರನ್ನು ಆರೋಪ ಮುಕ್ತಗೊಳಿಸಿದ್ದನ್ನು ಸುಪ್ರೀಂ ಕೋರ್ಟ್‌ ಎತ್ತಿಹಿಡಿದ ವಿಚಾರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಲು ಸಿಬಲ್‌ ನಿರಾಕರಿಸಿದರು. ಝಕಿಯಾ ಜಾಫ್ರಿ ಅವರ ಪರ ವಕೀಲನಾದುದ್ದರಿಂದ ಇದಕ್ಕೆ ಉತ್ತರಿಸಲು ಸರಿಯಾದ ಸಮಯವಲ್ಲ ಎಂದರು.

ಆದರೆ ಇತ್ತೀಚಿನ ವರ್ಷಗಳಲ್ಲಿ ನಾನು ಗಮನಿಸಿದಂತೆ ಕೆಲವು ನ್ಯಾಯಮೂರ್ತಿಗಳು ತಮ್ಮ ಮುಂದೆ ಚರ್ಚೆಗೆ ಒಳಪಡದ ಸಂಗತಿಗಳನ್ನು ವ್ಯಾಖ್ಯಾನಿಸುತ್ತಿದ್ದಾರೆ. ಸ್ಪಷ್ಟವಾಗಿ ಕಾಣುವ ಅನ್ಯಾಯವನ್ನು ಉಪೇಕ್ಷಿಸುತ್ತಿದ್ದಾರೆ, ಸರಿಯೆನ್ನಲಾಗದ ಕ್ರಮಗಳನ್ನು ಎತ್ತಿಹಿಡಿಯುತ್ತಿದ್ದಾರೆ ಎಂದು ಸಿಬಲ್‌ ಆರೋಪಿಸಿದರು.

ADVERTISEMENT

ಯಾವುದೇ ಒಂದು ನಿರ್ದಿಷ್ಟ ಪ್ರಕರಣದ ಬಗ್ಗೆ ನಾನು ಪ್ರತಿಕ್ರಿಯಿಸಲು ಇಚ್ಛಿಸುವುದಿಲ್ಲ. ಆದರೆ ನ್ಯಾಯಾಂಗದ ಭಾಗವಾಗಿ ಇತ್ತೀಚಿನ ವರ್ಷಗಳಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಮಾತನಾಡಿದ್ದೇನೆ. ನನ್ನ ತಲೆಯನ್ನು ನಾಚಿಕೆಯಿಂದ ತಗ್ಗಿಸುತ್ತೇನೆ ಎಂದು ಸಿಬಲ್‌ ಒತ್ತಿ ಹೇಳಿದರು.

ಆದರೆ ಮಾನವ ಹಕ್ಕುಗಳ ರಕ್ಷಣೆಗೆ ಭಾರತದ ನ್ಯಾಯಾಲಯಗಳ ಮೇಲೆ ಜನರು ಭರವಸೆಯನ್ನು ಇಡಬೇಕು ಎಂದು ಕಪಿಲ್‌ ಸಿಬಲ್‌ ಒತ್ತಿ ಹೇಳಿದರು.

ನ್ಯಾಯಮೂರ್ತಿಗಳು ಸೇರಿದಂತೆ ನ್ಯಾಯಾಂಗದಲ್ಲಿರುವವರು,ಅದರ ಭಾಗವಾಗಿರುವವರು ಕಾನೂನನ್ನು ಬೆಂಬಲಿಸಬೇಕು. ಎಲ್ಲರೂ ನೇರವಾಗಿ, ಮುಕ್ತವಾಗಿ ಮತ್ತು ಭಯವಿಲ್ಲದೆ ಮಾತನಾಡುವ ಸಂದರ್ಭ ಇದಾಗಿದೆ ಎಂದರು.

ಪ್ರವಾದಿ ಮಹಮ್ಮದರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ನೂಪುರ್‌ ಶರ್ಮಾ ಅವರ ವಿವಾದಕ್ಕೆ ಸಂಬಂಧಿಸಿ ಮಾತನಾಡಿದ ಸಿಬಲ್‌, ಅಸಹಿಷ್ಣುತೆಯ ಫಲಿತಾಂಶವಿದು. ದ್ವೇಷಪೂರಿತ ಹೇಳಿಕೆಯಿದು. ದ್ವೇಷವನ್ನು ಬಿತ್ತುವುದು ರಾಜಕೀಯ ಲಾಭದ ಅಸ್ತ್ರವಾಗಿರುವುದರಿಂದ ಇಂತಹದ್ದೆಲ್ಲವೂ ಸಂಭವಿಸುತ್ತಿದೆ.

ಧ್ವೇಷ ಬಿತ್ತನೆಯು ಸಮಾಜವನ್ನು ಒಡೆದು ಚುನಾವಣೆಯನ್ನು ಗೆಲ್ಲುವ ತಂತ್ರವಾದಾಗ ಉದಯಪುರದಲ್ಲಿ ನಡೆದಂತಹ ಪೈಶಾಚಿಕ ಕೃತ್ಯಗಳು ಮರುಕಳಿಸುತ್ತವೆ. ಇಂತಹ ಘಟನೆಗಳು ಸ್ವೀಕಾರಾರ್ಹವಲ್ಲ. ಇಂತಹ ಭೀಕರ ಕೃತ್ಯಗಳು ಸಮುದಾಯಗಳನ್ನು ಗುರಿಯಾಗಿಸುವ ಮತ್ತು ಏಕತೆಯನ್ನು ವಿಭಜಿಸುವ ಸಂಚಿನ ಪರಿಣಾಮಗಳು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.