ಸೈಫ್ ಅಲಿ ಖಾನ್, ಕರೀನಾ ಕಪೂರ್
ಪಿಟಿಐ ಚಿತ್ರಗಳು
ಮುಂಬೈ: ಬಾಲಿವುಡ್ ನಟ ಹಾಗೂ ತಮ್ಮ ಪತಿ ಸೈಫ್ ಅಲಿ ಖಾನ್ ಅವರ ಮೇಲೆ ನಡೆದಿರುವ ದಾಳಿ ಕುರಿತು ನಟಿ ಕರೀನಾ ಕಪೂರ್ ಪ್ರತಿಕ್ರಿಯಿಸಿದ್ದಾರೆ. ತಮ್ಮ ಖಾಸಗೀತನವನ್ನು ಗೌರವಿಸುವಂತೆ ಮನವಿ ಮಾಡಿದ್ದಾರೆ.
ಮುಂಬೈನ ಬಾಂದ್ರಾದಲ್ಲಿರುವ ದಂಪತಿಯ ಮನೆಯಲ್ಲಿ, ಸೈಫ್ ಅವರ ಗುರುವಾರ ಮುಂಜಾನೆ ಚಾಕುವಿನಿಂದ ದಾಳಿ ಮಾಡಲಾಗಿದೆ.
ಇದು ತಮ್ಮ ಪಾಲಿಗೆ ಅತ್ಯಂತ ಸವಾಲಿನ ಸಮಯವಾಗಿದೆ ಎಂದಿರುವ ನಟಿ, ಪ್ರತಿಯೊಬ್ಬರೂ ವದಂತಿಗಳು ಹಾಗೂ ವರದಿಗಳಿಂದ ಅಂತರ ಕಾಯ್ದುಕೊಳ್ಳಿ ಎಂದು ಕೋರಿದ್ದಾರೆ.
ದುಷ್ಕೃತ್ಯಕ್ಕೆ ಸಂಬಂಧಿಸಿದಂತೆ ಹರಿದಾಡುತ್ತಿರುವ ತರಹೇವಾರಿ ವದಂತಿಗಳು, ವರದಿಗಳ ಬಗ್ಗೆ ಮೌನ ಮುರಿದಿರುವ ಕರೀನಾ, ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
'ಇದು, ನಮ್ಮ ಕುಟುಂಬವು ಊಹಿಸಿಕೊಳ್ಳುವುದಕ್ಕೂ ಅಸಾಧ್ಯವೆನಿಸುವಂತಹ ಸವಾಲಿನ ದಿನ. ಪ್ರಕರಣಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳಲ್ಲಿ ತೊಡಗಿದ್ದೇವೆ. ಈ ಕಷ್ಟದ ಸಮಯವನ್ನು ದಾಟಿ ಮುಂದಕ್ಕೆ ಹೋಗಲು ಪ್ರತ್ನಿಸುತ್ತಿದ್ದು, ಮಾಧ್ಯಮಗಳು, ಛಾಯಾಗ್ರಾಹಕರು ವದಂತಿಗಳಿಂದ ದೂರ ಇರುವಂತೆ ಹಾಗೂ ಅವುಗಳನ್ನು ಪ್ರಸಾರ ಮಾಡದಂತೆ ಗೌರವಪೂರ್ವಕವಾಗಿ ವಿನಂತಿಸುತ್ತೇವೆ' ಎಂದಿದ್ದಾರೆ.
ಮುಂದುವರಿದು, 'ನಿಮ್ಮ ಕಾಳಜಿ ಹಾಗೂ ಬೆಂಬಲವನ್ನು ಗೌರವಿಸುತ್ತೇವೆ. ನಿರಂತರವಾಗಿ ನಮ್ಮತ್ತಲೇ ಗಮನ ಕೇಂದ್ರೀಕರಿಸುತ್ತಿರುವುದು ನಮ್ಮ ಸುರಕ್ಷತೆಗೂ ಅಪಾಯವನ್ನುಂಟುಮಾಡಲಿದೆ. ದಯವಿಟ್ಟು ನಮ್ಮ ಎಲ್ಲೆಯನ್ನು ಗೌರವಿಸಿ. ಚೇತರಿಸಿಕೊಳ್ಳಲು ಅವಕಾಶ ನೀಡಿ. ಕುಟುಂಬವಾಗಿ ಸಹಕರಿಸಿ ಎಂದು ಮನವಿ ಮಾಡುತ್ತೇನೆ' ಎಂಬುದಾಗಿ ಬರೆದುಕೊಂಡಿದ್ದಾರೆ.
ಹಾಗೆಯೇ, ಇಂತಹ ಸಂದಿಗ್ಧ ಸನ್ನಿವೇಶದಲ್ಲಿ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.
ದಾಳಿ ವೇಳೆ ಗಂಭೀರವಾಗಿ ಗಾಯಗೊಂಡಿರುವ ಸೈಫ್ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ನಟನ ಮೇಲೆ ದಾಳಿ ಮಾಡಿದ ದುಷ್ಕರ್ಮಿಯು ಕಳ್ಳತನಕ್ಕೆ ಯತ್ನಿಸಿದ್ದ ಎನ್ನಲಾಗಿದೆ. ಆತನ ಪತ್ತೆಗಾಗಿ ಮುಂಬೈ ಪೊಲೀಸರು 20ಕ್ಕೂ ಅಧಿಕ ತಂಡಗಳನ್ನು ರಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.