ADVERTISEMENT

ವಿಜಯ್ ರ‍್ಯಾಲಿ ವೇಳೆ ಕಾಲ್ತುಳಿತ: ಕಾರಣವೇನು? ಪ್ರತ್ಯಕ್ಷದರ್ಶಿಗಳು ಹೇಳುವುದೇನು?

ಇ.ಟಿ.ಬಿ ಶಿವಪ್ರಿಯನ್‌
Published 28 ಸೆಪ್ಟೆಂಬರ್ 2025, 11:42 IST
Last Updated 28 ಸೆಪ್ಟೆಂಬರ್ 2025, 11:42 IST
<div class="paragraphs"><p>ವಿಜಯ್‌ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ)&nbsp;ಪಕ್ಷ ಕರೂರಿನಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಜನಸಮೂಹ. ಒಳಚಿತ್ರದಲ್ಲಿ ವಿಜಯ್‌&nbsp;</p></div>

ವಿಜಯ್‌ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಕರೂರಿನಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಜನಸಮೂಹ. ಒಳಚಿತ್ರದಲ್ಲಿ ವಿಜಯ್‌ 

   

ಕೃಪೆ: ಪಿಟಿಐ

ಕರೂರು (ತಮಿಳುನಾಡು): ನಟ, ರಾಜಕಾರಣಿ ವಿಜಯ್‌ ಅವರು ಕಾರ್ಯಕ್ರಮ ಆಯೋಜನೆಗೊಂಡಿದ್ದ ಸ್ಥಳಕ್ಕೆ ನಿಗದಿಗಿಂತ ಸಾಕಷ್ಟು ತಡವಾಗಿ ಆಗಮಿಸಿದ್ದು, ಅವರ ಪಕ್ಷ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸೂಕ್ತ ತಯಾರಿ ನಡೆಸಿಕೊಳ್ಳದೇ ಹೋದದ್ದು, ಕರೂರು ಮುಖ್ಯರಸ್ತೆಯಲ್ಲಿ ಭಾರಿ ಸಂಖ್ಯೆಯಲ್ಲಿ ಜಮಾಯಿಸಿದ್ದ ಜನರನ್ನು ನಿಯಂತ್ರಿಸಲು ಅಗತ್ಯ ಸಂಖ್ಯೆಯಲ್ಲಿ ಪೊಲೀಸರು ಲಭ್ಯವಿಲ್ಲದ್ದು 39 ಮಂದಿ ಮೃತಪಟ್ಟ ಕಾಲ್ತುಳಿತ ದುರಂತಕ್ಕೆ ಪ್ರಮುಖ ಕಾರಣಗಳಾದವು.

ADVERTISEMENT

ರಾಜಕೀಯ ಸಮಾವೇಶಗಳಿಗೆ ಸೂಕ್ತವಾಗಿದ್ದ ಕರೂರಿನ ವೇಲುಸ್ವಾಮಿ ನಗರದಲ್ಲಿ, ವಿಜಯ್‌ ಅವರನ್ನು ಕಣ್ತುಂಬಿಕೊಳ್ಳಲು 25,000 ಜನರು ಸೇರಿದ್ದರು. ವಿಜಯ್‌ ಅವರು ಬೈಪಾಸ್‌ ರಸ್ತೆಯಲ್ಲಿ ಬರುತ್ತಿದ್ದಾರೆ ಎಂದು ರಾತ್ರಿ 7.10ಕ್ಕೆ ಘೋಷಣೆಯಾಗುತ್ತಿದ್ದಂತೆ ನೂಕುನುಗ್ಗಲು ಶುರುವಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಕಾರ್ಯಕ್ರಮ ಆರಂಭವಾಗುವುದಕ್ಕೆ ತಾಳ್ಮೆಯಿಂದ ಕಾಯ್ದಿದ್ದವರೆಲ್ಲ, ವಿಜಯ್‌ ಅವರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ್ದ ಬಸ್‌ನತ್ತ ಹೋಗಲು ಮುಂದಾದ್ದರಿಂದ ನೂಕುನುಗ್ಗಲು ಏರ್ಪಟ್ಟಿತು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು, ವಿದ್ಯುತ್‌ ಕಂಬಗಳನ್ನೂ ಏರುವ ಸಾಧ್ಯತೆ ಇದ್ದುದ್ದರಿಂದ ವಿದ್ಯುತ್‌ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು. ಇದೂ, ಗೊಂದಲಗಳಿಗೆ ಎಡೆ ಮಾಡಿಕೊಟ್ಟಿತು.

ಸಂಜೆ 4ಕ್ಕೆ ಬರಬೇಕಿದ್ದ ವಿಜಯ್‌, ರಾತ್ರಿ 7ಕ್ಕೆ ಬಂದರು. ಇದರಿಂದಾಗಿ, ಅಭಿಮಾನಿಗಳು, ಕಾರ್ಯಕರ್ತರ ಜಮಾವಣೆ ಮತ್ತಷ್ಟು ಹೆಚ್ಚಿತು. ವಿಜಯ್‌ ಅವರು ನಿಗದಿಯಂತೆ ಸರಿಯಾದ ಸಮಯಕ್ಕೆ ಬಂದಿದ್ದರೆ ದುರಂತವನ್ನು ತಪ್ಪಿಸಬಹುದಿತ್ತು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

ಮನೆಯ ಬಾಲ್ಕನಿಯಿಂದಲೇ ಘಟನೆಯನ್ನು ವೀಕ್ಷಿಸಿದ ಸುದರ್ಶನ್‌ ಎಂಬವರು, ಜನರ ಮಧ್ಯದಿಂದಲೇ ಹಾದುಹೋಗುತ್ತಿದ್ದ ಆ್ಯಂಬುಲೆನ್ಸ್‌ವೊಂದಕ್ಕೆ ದಾರಿ ಮಾಡಿಕೊಡುವ ಸಲುವಾಗಿ ಜನರು ಒಬ್ಬರನ್ನೊಬ್ಬರು ನೂಕಲಾರಂಭಿಸಿದರು. ಇದೂ, ದುರಂತಕ್ಕೆ ಕಾರಣವಾಯಿತು ಎಂದಿದ್ದಾರೆ.

'ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಡುವುದಕ್ಕಾಗಿ ಕೆಲವರು ವಾಹನದ ಮುಂದೆಯೇ ಓಡುತ್ತಿದ್ದರು. ಈ ವೇಳೆ, ಸುಮಾರು 15 ಯುವಕರು ಕುಳಿತಿದ್ದ ಮರದ ಕೊಂಬೆ ಮುರಿದು ಬಿತ್ತು. ಅದರ ಪರಿಣಾಮವಾಗಿ ಪಕ್ಕದಲ್ಲೇ ಕಟ್ಟಿದ್ದ ಹೋರ್ಡಿಂಗ್‌ ಉರುಳಿ ಜನರ ಮೇಲೆ ಬಿತ್ತು' ಘಟನೆಯನ್ನು ವಿವರಿಸಿದ್ದಾರೆ.

ಪೊಲೀಸರ ನಿಯೋಜನೆ ಅಸಮರ್ಪಕವಾಗಿತ್ತು ಎಂದಿರುವ ಸುದರ್ಶನ್‌, ಸುಮಾರು 25,000 ಜನರನ್ನು ನಿಯಂತ್ರಿಸಲು ಕೇವಲ 300 ಪೊಲೀಸರನ್ನು ಹಾಕಲಾಗಿತ್ತು ಎಂದು ದೂರಿದ್ದಾರೆ.

'ಮೊದಲನೇಯದಾಗಿ, ವಿಜಯ್‌ಗೆ ಇಲ್ಲಿ ಸಮಾವೇಶ ನಡೆಸಲು ಅವಕಾಶವನ್ನೇ ನೀಡಬಾರದಿತ್ತು. ರಾಜಕೀಯ ಕಾರಣಕ್ಕೆ ಬಂದವರಷ್ಟೇ ಅಲ್ಲಿರಲಿಲ್ಲ. ವಿಜಯ್‌ ಅವರನ್ನು ಕಣ್ತುಂಬಿಕೊಳ್ಳುವುದಕ್ಕಾಗಿ ಬಂದವರೂ ಇದ್ದರು. ಅಲ್ಲಿ ಸೇರಿದ್ದ ಮಹಿಳೆಯರು, ಮಕ್ಕಳು ಅಪಾರ ತೊಂದರೆ ಅನುಭವಿಸಿದರು' ಎಂದು ಹೇಳಿದ್ದಾರೆ.

ತಮಿಳುನಾಡು ವಿಧಾನಸಭೆ ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಇದೇ ಸ್ಥಳದಲ್ಲಿ ಕಳೆದವಾರ ಯಾವುದೇ ತೊಂದರೆಯಿಲ್ಲದೆ ರೋಡ್‌ಶೋ ನಡೆಸಿದ್ದರು.

ಘಟನಾಸ್ಥಳದ ಸಮೀಪ ಇರುವ ಕಟ್ಟಡದ ಮೊದಲ ಮಹಡಿಯಲ್ಲಿ ವಾಸಿಸುತ್ತಿರುವ ಪೂರ್ಣಿಯಾ ಎಂಬವರು, ತಮಗೆ ಮನೆಯಲ್ಲಿಯೇ ಉಸಿರುಗಟ್ಟಿದ ಅನುಭವವಾಯಿತು ಎಂದಿದ್ದಾರೆ.

'ಜನರು ವಿಜಯ್‌ ಅವರನ್ನು ನೋಡಲು ಹಲವು ಮನೆಗಳ ಬಾಲ್ಕನಿ ಪ್ರವೇಶಿಸಿದರು. ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು. ನಮಗೆ, ಉಸಿರಾಡುವುದೇ ಕಷ್ಟವಾಯಿತು. ಎಲ್ಲೆಡೆ, ಉಸಿರುಗಟ್ಟಿಸುವಂತಹ ವಾತಾವರಣ ಸೃಷ್ಟಿಯಾಗಿತ್ತು' ಎಂದು ಹೇಳಿದ್ದಾರೆ.

ಸುದರ್ಶನ್‌ ಮತ್ತು ಪೂರ್ಣಿಮಾ ಅವರಂತಹ ಹಲವರು, ಸಾಕಷ್ಟು ಮಂದಿಯನ್ನು ಕಾಲ್ತುಳಿತದಿಂದ ಪಾರು ಮಾಡಿದ್ದಾರೆ. ಕುಡಿಯಲು ನೀರುಕೊಟ್ಟು ಉಪಚರಿಸಿದ್ದಾರೆ.

ಕಾರ್ಯಕ್ರಮದ ಆಯೋಜಕರನ್ನು ದೂರಿರುವ ಅಧಿಕಾರಿಗಳು, 10,000 ಜನರ ಸಮಾವೇಶಕ್ಕಷ್ಟೇ ಅನುಮತಿ ನೀಡಲಾಗಿತ್ತು. ಆದರೆ, ಸುಮಾರು 25,000 ಮಂದಿ ಅಲ್ಲಿ ಸೇರಿದ್ದರು ಎಂದು ಹೇಳಿದ್ದಾರೆ.

'ರಾಜಕೀಯ (ಟಿವಿಕೆ) ಪಕ್ಷವು, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಯಾವುದೇ ರೀತಿಯ ಸಿದ್ಧತೆ ಮಾಡಿಕೊಂಡಿರಲಿಲ್ಲ. ಅಲ್ಲದೆ, ಪೊಲೀಸರ ಸೂಚನೆಗಳನ್ನೂ ಪಾಲಿಸಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸುವ ಅಂದಾಜು ಅವರಿಗೆ ಇದ್ದಿದ್ದರೆ, ನಮ್ಮೊಂದಿಗೆ ಹಂಚಿಕೊಳ್ಳಬೇಕಿತ್ತು. ಹೆಚ್ಚಿನ ಭದ್ರತೆಗೆ ಕ್ರಮಗಳನ್ನು ಕೈಗೊಳ್ಳಲು ಅನುಕೂಲವಾಗುತ್ತಿತ್ತು' ಎಂದು ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ

ಕರೂರಿನಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಸೇರುತ್ತಾರೆ ಎಂಬುದು ಸಂಘಟಕರಿಗೆ ಗೊತ್ತಿತ್ತು. ಆದರೂ, ಮುನ್ನೆಚ್ಚರಿಕೆ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದಿರುವ ಅವರು, 'ವಿಜಯ್‌ ಅವರ ಹಿಂದಿನ ಸಮಾವೇಶಗಳಲ್ಲಿಯೂ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಆದಾಗ್ಯೂ, ಸಂಘಟಕರು ಆರಂಭದಲ್ಲಿ ಕಿರಿದಾದ ಸ್ಥಳದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿ ಕೋರಿದ್ದರು. ಆದರೆ, ಪೊಲೀಸರೇ ಉತ್ತಮ ಸ್ಥಳದಲ್ಲಿ ಕಾರ್ಯಕ್ರಮ ಆಯೋಜನೆಗೆ ಅವಕಾಶ ಕಲ್ಪಿಸಿದ್ದರು' ಎಂದೂ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.