ADVERTISEMENT

ಕರೂರು ಕಾಲ್ತುಳಿತ: ವಿಜಯ್‌ ನೋಡುವ ಆಸೆಯಿಂದ ಹೋದ ಒಂದೇ ಗ್ರಾಮದ ನಾಲ್ವರು ಸಾವು

ಪಿಟಿಐ
Published 30 ಸೆಪ್ಟೆಂಬರ್ 2025, 6:22 IST
Last Updated 30 ಸೆಪ್ಟೆಂಬರ್ 2025, 6:22 IST
   

ಚೆನ್ನೈ: ಕರೂರು ಕಾಲ್ತುಳಿತದಲ್ಲಿ ಮೃತಪಟ್ಟ 41 ಜನರಲ್ಲಿ ನಾಲ್ವರು ಎಮೂರು ಪುತೂರು ಗ್ರಾಮದ ನಿವಾಸಿಗಳಾಗಿದ್ದಾರೆ. ನಾಲ್ವರು ನಿವಾಸಿಗಳನ್ನು ಕಳೆದುಕೊಂಡು ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ.

ಸೆಪ್ಟೆಂಬರ್ 27ರಂದು ಕರೂರಿನ ವೇಲುಸಾಮಿಪುರಂನಲ್ಲಿ ನಡೆದ ತಮಿಳಿಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ರ್‍ಯಾಲಿ ವೇಳೆ ಕಾಲ್ತುಳಿತ ಸಂಭವಿಸಿದೆ.

‘ನಟ ವಿಜಯ್‌ ಅವರನ್ನು ನೋಡಲು ನಾನು ಮತ್ತು ನನ್ನ ಅಮ್ಮ ಅಲ್ಲಿಗೆ ಹೋಗಿದ್ದೆವು. ಆದರೆ ಆಕೆ ಮನೆಗೆ ಮರಳಿ ಬರಲಿಲ್ಲ’ ಎಂದು ಗ್ರಾಮದ ಒಂಬತ್ತನೇ ತರಗತಿ ವಿದ್ಯಾರ್ಥಿ ಸತ್ಯ ಕಣ್ಣೀರಿಟ್ಟಿದ್ದಾನೆ.

ADVERTISEMENT

‘ನಾವು ಬೆಳಿಗ್ಗೆ ಹೋದಾಗ ಅಲ್ಲಿ ಹೆಚ್ಚಿನ ಜನ ಸೇರಿರಲಿಲ್ಲ. ಯಾವುದೇ ಆಹಾರವೂ ಇರಲಿಲ್ಲ. ಸಂಜೆಯಾಗುತ್ತಲೇ ಅಪಾರ ಪ್ರಮಾಣದ ಜನರು ಸೇರಿದ್ದಾರೆ. ಜನರ ಗುಂಪಿನಲ್ಲಿ ನನ್ನ ತಾಯಿ ಸಿಲುಕಿಕೊಂಡರು. ನನ್ನನ್ನು ಹಿಂದಕ್ಕೆ ತಳ್ಳುತ್ತಿದ್ದರು’ ಎಂದು ಘಟನೆಯನ್ನು ವಿವರಿಸಿದ್ದಾನೆ.

‘ಹೇಗೋ ನಾನು ಜನರ ಗುಂಪಿನಿಂದ ಹೊರಗೆ ಬಂದೆ. ಮುಂದೆ ಹೋಗುವ ಪ್ರಯತ್ನವನ್ನು ಕೈಬಿಟ್ಟು ಮನೆಗೆ ಮರಳಲು ನಿರ್ಧರಿಸಿದೆ. ಆದರೆ, ನನ್ನ ತಾಯಿ ಚಂದ್ರಾ ಜನರ ನಡುವೆ ಕಳೆದುಹೋದಳು’ ಎಂದು ಹೇಳಿದ್ದಾನೆ.

‘ನನ್ನ ತಾಯಿಯನ್ನು ಹುಡುಕಿದೆ. ಆದರೆ ಆಕೆ ಎಲ್ಲೂ ಕಾಣಲಿಲ್ಲ. ನಂತರ ನನ್ನ ಅಣ್ಣ ಸರ್ಕಾರಿ ಆಸ್ಪತ್ರೆಗೆ ಹೋದಾಗ ಅವರು ಮೃತಪಟ್ಟಿರುವುದಾಗಿ ತಿಳಿದಿದೆ’ ಎಂದು ದುಃಖದಲ್ಲಿ ಹೇಳಿದ್ದಾನೆ.

ಇದೇ ಗ್ರಾಮದ ಮತ್ತೊಬ್ಬ ನಿವಾಸಿ ಅರುಕ್ಕಣಿ(60) ಅವರು ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ.

‘ಅ‌ಲ್ಲಿಗೆ ಹೋಗಬೇಡ ಎಂದು ನಾನು ಹೇಳಿದ್ದೆ. ಆದರೆ, ನನ್ನ ಮಾತನ್ನು ತಿರಸ್ಕರಿಸಿ ಆಕೆ ಹೋಗಿದ್ದಳು. ಜನಸಂದಣಿ ಹೆಚ್ಚುತ್ತಿರುವ ಸುದ್ದಿ ಕೇಳುತ್ತಲೇ ವೇಲುಸ್ವಾಮಿಪುಕ್ಕೆ ತೆರಳಿ ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದೆ. ಆದರೆ ವಿಜಯ್‌ ನೋಡುವ ಆಸೆಗೆ ಬಿದ್ದು ಆಕೆ ಮತ್ತೆ ಅಲ್ಲಿಗೆ ಹೋಗಿದ್ದಳು’ ಎಂದು ಅರುಕ್ಕಣಿ ಅವರ ಪತಿ ಕಾಳಿಯಪ್ಪನ್‌ ಹೇಳಿದ್ದಾರೆ.

‘ರಾತ್ರಿಯಾದರೂ ಆಕೆ ಮನೆಗೆ ಮರಳದಿದ್ದನ್ನು ಕಂಡು ಗಾಬರಿಗೊಂಡೆ. ನಂತರ ಸರ್ಕಾರಿ ಆಸ್ಪತ್ರೆಗೆ ಬರುವಂತೆ ನನಗೆ ವಾಟ್ಸ್‌ಆ್ಯಪ್ ಸಂದೇಶ ಬಂದಿದೆ. ಅಲ್ಲಿ ಹೋಗಿ ಅವಳ ಮೃತದೇಹವನ್ನು ಗುರುತಿಸಿದೆ’ ಎಂದು ಕಂಬನಿ ಸುರಿಸಿದ್ದಾರೆ.

ಇನ್ನು, ಗ್ರಾಮದ ಕೆ. ಶಕ್ತಿವೇಲ್ ಅವರ ಪತ್ನಿ ಮತ್ತು 14 ವರ್ಷದ ಮಗಳು ಕೂಡ ದುರಂತದಲ್ಲಿ ಮೃತಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.