
ಅರಬ್ಬಿ ಸಮುದ್ರದಲ್ಲಿ ಜಂಟಿಯಾಗಿ ಸಂಚರಿಸುತ್ತಿರುವ ಭಾರತೀಯ ನೌಕಾಪಡೆಯ ಯುದ್ಧ ವಿಮಾನ ವಾಹಕ ನೌಕೆಗಳಾದ ಐಎನ್ಎಸ್ ವಿಕ್ರಮಾದಿತ್ಯ ಮತ್ತು ಐಎನ್ಎಸ್ ವಿಕ್ರಾಂತ್
ಎಕ್ಸ್ ಚಿತ್ರ
ಕಾರವಾರ: ದೇಶದಲ್ಲೇ ಅತಿದೊಡ್ಡ ನೌಕಾನೆಲೆ ಎನಿಸಿರುವ ಇಲ್ಲಿನ ‘ಕದಂಬ ನೌಕಾನೆಲೆ’ ಕೆಲವೇ ತಿಂಗಳಿನಲ್ಲಿ ಏಷ್ಯಾದ ಅತಿ ದೊಡ್ಡ ನೌಕಾನೆಲೆಯಾಗಲಿದೆ. ನೌಕಾನೆಲೆ ಸ್ಥಾಪನೆಗೆ ಕಾರವಾರವನ್ನೇ ಆಯ್ದುಕೊಂಡಿದ್ದೇಕೆ ಎಂಬ ಕುತೂಹಲದ ಹಿಂದೆ ರೋಚಕ ಕಾರಣವೂ ಇದೆ.
ಕಾರವಾರದಲ್ಲಿ ಕದಂಬ ನೌಕಾನೆಲೆ ಸ್ಥಾಪನೆಗೆ ಮುನ್ನ ಮುಂಬೈ, ಕೇರಳದ ಕೊಚ್ಚಿನ್‌ನಲ್ಲಿ ನೌಕಾನೆಲೆ ಸ್ಥಾಪನೆಯಾಗಿದ್ದವು. 1971ರ ಭಾರತ–ಪಾಕ್ ಯುದ್ಧದ ವೇಳೆ ನೌಕಾದಳವು ಮಹತ್ವದ ಪಾತ್ರ ನಿಭಾಯಿಸಿತ್ತು. ಈ ವೇಳೆ ಸುರಕ್ಷಿತ ನೆಲೆಯೊಂದರಲ್ಲಿ ದೊಡ್ಡ ನೌಕಾನೆಲೆ ಸ್ಥಾಪನೆಯ ಅನಿವಾರ್ಯತೆಯನ್ನು ರಕ್ಷಣಾ ಇಲಾಖೆ ಮನಗಂಡಿತು. ಶತ್ರುಗಳ ದಾಳಿ ಎದುರಾಗದಂತೆ ಸುರಕ್ಷಿತ ನೆಲೆಯೊಂದನ್ನು ಕಂಡುಕೊಳ್ಳಬೇಕು, ಮತ್ತು ಶತ್ರುಗಳ ಮೇಲೆ ನಿಖರ ದಾಳಿಗೆ ಸೂಕ್ತ ತಾಣ ಬೇಕು ಎಂಬ ಯೋಚನೆಗೆ ಸಿಕ್ಕ ಉತ್ತರ ‘ಕಾರವಾರ’.
ಸಮುದ್ರ ತೀರಕ್ಕೆ ಹತ್ತಿರದಲ್ಲೇ ಪರ್ವತಗಳ ಸಾಲು ಇರುವ ಅಪರೂಪದ ಕರಾವಳಿಯ ಭಾಗವನ್ನು ರಕ್ಷಣಾ ಇಲಾಖೆ ಗುರುತಿಸಿತು. ಭಾರತದ ಮೇಲೆ ಆಕ್ರಮಣ ನಡೆಸಲು ಸದಾ ಹೊಂಚುಹಾಕುವ ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರಕ್ಕೆ ‘ಕಾರವಾರ’ಕ್ಕೆ ಸಮೀಪದ ಕಡಲತೀರವೇ ಸೂಕ್ತ ತಾಣ ಎಂಬುದನ್ನು ಅರಿತು ಇಲ್ಲಿಯೇ ನೌಕಾನೆಲೆ ಸ್ಥಾಪಿಸಲು ಯೋಜಿಸಲಾಯಿತು. ಅದರ ಪರಿಣಾಮವೇ ‘ಕದಂಬ ನೌಕಾನೆಲೆ’ ರೂಪತಳೆಯಿತು.
ಒಂದು ವೇಳೆ ಪಾಕಿಸ್ತಾನ ನೇರ ಯುದ್ಧ ಸಾರಿದರೆ, ಅದರ ಪ್ರಮುಖ ಕರಾವಳಿ ತಾಣವಾದ ಕರಾಚಿ ಮೇಲೆ ಕರಾರುವಕ್ಕಾಗಿ ದಾಳಿ ನಡೆಸಲು ಕದಂಬ ನೌಕಾನೆಲೆಯಿಂದ ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯವಿದೆ.
ದೇಶದ ರಕ್ಷಣಾ ಕ್ಷೇತ್ರಕ್ಕೆ ಬಲಾಢ್ಯ ನೆಲೆಯಾಗಿರುವ ನೌಕಾನೆಲೆ ಸ್ಥಳೀಯ ಪ್ರಾದೇಶಿಕತೆ, ಆರ್ಥಿಕತೆಯ ಭಾರಿ ಬದಲಾವಣೆಗೂ ಕಾರಣವಾಗಿದೆ. ಮೂರು ದಶಕಗಳ ಹಿಂದೆ ಸಣ್ಣ ನಗರವಾಗಿದ್ದ ಕಾರವಾರಕ್ಕೆ ಆಧುನಿಕತೆಯ ಸ್ವರೂಪ ದೊರೆಯುವಲ್ಲಿ ನೌಕಾದಳದ ಪಾತ್ರ ಮಹತ್ವದ್ದು. ಪ್ರೊಜೆಕ್ಟ್ ಸೀಬರ್ಡ್ ಹೆಸರಿನಲ್ಲಿ ಸುಮಾರು 6 ಸಾವಿರ ಎಕರೆ ಪ್ರದೇಶದಲ್ಲಿ ನೌಕಾನೆಲೆ ನಿರ್ಮಾಣದ ಕಾರ್ಯವು 90ರ ದಶಕದಲ್ಲಿ ಆರಂಭಗೊಂಡಿತ್ತು. 2006ರಲ್ಲಿ ಮೊದಲ ಹಂತದ ಯೋಜನೆ ಪೂರ್ಣಗೊಂಡು ಅಧೀಕೃತವಾಗಿ ‘ಕದಂಬ ನೌಕಾನೆಲೆ’ ತಲೆ ಎತ್ತಿತು. ಆ ಬಳಿಕ ಕಾರವಾರದ ಚಿತ್ರಣ ಬದಲಾಗಿದೆ.
ಆರಂಭಿಕ ದಿನಗಳಲ್ಲೇ 8 ಸಾವಿರದಷ್ಟು ಜನರು ಇಲ್ಲಿಗೆ ವಲಸೆ ಬರಲು ಕಾರಣವಾಗಿದ್ದ ಯೋಜನೆಯು, ಹಂತ ಹಂತವಾಗಿ ಹಿಗ್ಗುತ್ತ ಸಾಗಿದೆ. ಒಂದೆಡೆ ರಕ್ಷಣಾತ್ಮಕವಾಗಿ ಬಲಾಢ್ಯಗೊಂಡರೆ, ಇನ್ನೊಂದೆಡೆ ಸುತ್ತಮುತ್ತಲಿನ ಪ್ರದೇಶಗಳ ವಿಕಸನಕ್ಕೂ ಕಾರಣವಾಗಿದೆ ಎಂಬುದು ಸ್ಥಳೀಯರ ಅಭಿಪ್ರಾಯ.
ಕಳೆದ ಐದು ವರ್ಷಗಳಿಂದ ಪ್ರೊಜೆಕ್ಟ್ ಸೀಬರ್ಡ್‌ನ 2ನೇ ಹಂತದ ಕೆಲಸಗಳು ನಡೆಯುತ್ತಿದ್ದು, ಯೋಜನೆ ಪೂರ್ಣಗೊಳ್ಳುವತ್ತ ದಾಪುಗಾಲಿಟ್ಟಿದೆ. ಬಹುಮಹಡಿಯ ವಸತಿ ಸಮುಚ್ಚಯಗಳು, ಅತ್ಯಾಧುನಿಕ ಮೂಲಸೌಕರ್ಯ, ಹಗಡುಕಟ್ಟೆಗಳು, ಹಡಗು ನಿರ್ಮಾಣದ ಅಂಗಳ (ಶಿಪ್ ಯಾರ್ಡ್) ಸೇರಿದಂತೆ ನೌಕಾದಳಕ್ಕೆ ಅಗತ್ಯವಿರುವ ಅತ್ಯಾಧುನಿಕ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಹೊಸದಾಗಿ 10ರಿಂದ 25 ಸಾವಿರ ಉದ್ಯೋಗ ಸೃಷ್ಟಿಗೆ ಇದು ಕಾರಣವಾಗಲಿದೆ. ಯೋಜನೆ ಪೂರ್ಣಗೊಂಡ ಬಳಿಕ ಏಷ್ಯಾದಲ್ಲೇ ದೊಡ್ಡ ನೌಕಾನೆಲೆಯಾಗಿ ಇದು ಗುರುತಿಸಿಕೊಳ್ಳಲಿದೆ ಎನ್ನುತ್ತಾರೆ ನೌಕಾದಳದ ಹಿರಿಯ ಅಧಿಕಾರಿಗಳು.
ಯುದ್ಧವಿಮಾನಗಳನ್ನು ಹೊತ್ತೊಯ್ಯಬಲ್ಲ ಯುದ್ಧವಾಹಕ ನೌಕೆಗಳಾದ ಐಎನ್ಎಸ್ ವಿಕ್ರಮಾದಿತ್ಯ, ಸ್ವದೇಶಿ ನಿರ್ಮಿತ ಐಎನ್ಎಸ್ ವಿಕ್ರಾಂತ್‌ಗೆ ಕದಂಬ ನೌಕಾನೆಲೆ ಸುರಕ್ಷಿತ ನಿಲ್ದಾಣವೂ ಹೌದು. ಅತ್ಯಾಧುನಿಕ ಜಲಾಂತರ್ಗಾಮಿ ನೌಕೆಗಳು ಸೇರಿ ಅತ್ಯಾಧುನಿಕ ನೌಕಾಸೌಲಭ್ಯಗಳನ್ನು ಕದಂಬ ನೌಕಾನೆಲೆ ಹೊಂದಿದೆ.
ಪ್ರಾಚೀನ ಭಾರತದ ನೌಕಾ ಸಾಮರ್ಥ್ಯವನ್ನು ಜಗತ್ತಿಗೆ ತೋರ್ಪಡಿಸಲು ತೆಂಗಿನ ನಾರಿನಿಂದ ಸಿದ್ಧಪಡಿಸಿದ ‘ಐಎನ್ಎಸ್ವಿ ಕೌಂಡಿನ್ಯ’ ಕಾರವಾರದ ಕದಂಬ ನೌಕಾನೆಲೆಯಲ್ಲೇ ಲೋಕಾರ್ಪಣೆಗೊಂಡಿತ್ತು.
ಕಾರವಾರದ ಕದಂಬ ನೌಕಾನೆಲೆ ವ್ಯಾಪ್ತಿಯಲ್ಲಿರುವ ಅಂಜದೀಪ ದ್ವೀಪದಲ್ಲಿ ನಿರ್ಮಿಸಿದ ನೂತನ ‘ಅಂಜದೀಪ ಸ್ಮಾರಕ’ದ ಉದ್ಘಾಟನೆಯಲ್ಲಿ ನೌಕದಳದ ಹಿರಿಯ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು ಪಾಲ್ಗೊಂಡಿದ್ದರು.
ಕಾರವಾರದ ಕದಂಬ ನೌಕಾನೆಲೆಯ ಹಡಗು ಕಟ್ಟೆಯಲ್ಲಿ ನಿಂತಿದ್ದ ಐಎನ್ಎಸ್ ವಿಕ್ರಾಂತ್
ಕದಂಬ ನೌಕಾನೆಲೆ ವ್ಯಾಪ್ತಿಯಲ್ಲಿರುವ ಅಂಜದೀಪ ನಡುಗಡ್ಡೆಯಲ್ಲಿ ‘ಅಂಜದೀವ್ (ಅಂಜದೀಪ) ಯುದ್ಧ ಸ್ಮಾರಕವನ್ನು ಸ್ಥಾಪಿಸಲಾಗಿದೆ. 1961ರ ಡಿ.18 ರಂದು ನಡೆದಿದ್ದ ಯುದ್ಧದಲ್ಲಿ ಗೋವಾ, ದಿಯು ಮತ್ತು ದಮನ್‍ನ್ನು ಪೋರ್ಚುಗೀಸರ ಆಳ್ವಿಕೆಯಿಂದ ಮುಕ್ತಗೊಳಿಸಲು ಹೋರಾಡಿ ಜಯಿಸಿದ ವೀರಸೈನಿಕರ ನೆನಪಿಗೆ ಈ ಸ್ಮಾರಕ ನಿರ್ಮಾಣಗೊಂಡಿದೆ.
ಭಾರತೀಯ ನೌಕಾದಳದ ಬಳಿ ಇರುವ ಜಲಾಂತರ್ಗಾಮಿ ನಿರೋಧಕ ಯುದ್ಧನೌಕೆಯೊಂದಕ್ಕೆ ‘ಅಂಜದೀಪ್’ ಹೆಸರು ಇಡಲಾಗಿದೆ. ಅಂಜದೀಪ್ ದ್ವೀಪದಲ್ಲಿ ನೌಕಾದಳ ಈ ಮುನ್ನ ಶಸ್ತ್ರಾಸ್ತ್ರ ತರಬೇತಿ ನಡೆಸುತ್ತಿತ್ತು. ನೌಕಾದಳಕ್ಕೆ ಬಹುದೊಡ್ಡ ಕೊಡುಗೆ ನೀಡಿರುವ ಕಾರಣಕ್ಕೆ ನೌಕೆಗೆ ದ್ವೀಪದ ಹೆಸರಿಟ್ಟು ಗೌರವಿಸಲಾಗಿದೆ.
ಪ್ರಾಚೀನ ಕಾಲದ ಮಾದರಿಯಲ್ಲೇ ಸಿದ್ಧಪಡಿಸಲಾದ ಭಾರತೀಯ ನೌಕಾಸೇನೆಯ ಹಡಗು ‘ಐಎನ್ಎಸ್ ಕೌಂಡಿನ್ಯ’ ಕೆಲ ತಿಂಗಳ ಹಿಂದೆ ಕದಂಬ ನೌಕಾನೆಲೆಯಲ್ಲಿ ಲೋಕಾರ್ಪಣೆಗೊಂಡಿದೆ. ಮರದ ಹಲಗೆಗಳನ್ನು ತೆಂಗಿನ ನಾರುಗಳ ದಾರ ಬಳಸಿ ಹೊಲಿದು ರಚಿಸಿದ ನೌಕೆಯ ಮುಂಭಾಗದಲ್ಲಿ ಸಿಂಹದ ಪ್ರತಿಕೃತಿ ರಚಿಸಿದ್ದು ಗಮನಸೆಳೆಯುತ್ತಿದೆ. ಹರಪ್ಪ ಶೈಲಿಯ ಲಂಗರು ಹೊಂದಿದೆ.
ಹಿಂದೂ ಮಹಾಸಾಗರದಾದ್ಯಂತ ಪ್ರಯಾಣ ಬೆಳೆಸಿದ ಪೌರಾಣಿಕ ಭಾರತೀಯ ನಾವಿಕ ಮತ್ತು ಸನ್ಯಾಸಿ ಕೌಂಡಿನ್ಯ ಅವರು ನೌಕಾಯಾನದಲ್ಲಿ ಹೆಸರು ಮಾಡಿದ್ದರು. ಹೀಗಾಗಿ ನೌಕೆಗೆ ಅವರ ಹೆಸರು ಇಡಲಾಗಿದೆ. ನೌಕೆಯ ಹಾಯಿಗೆ ಕದಂಬರ ರಾಜಲಾಂಛನವಾಗಿದ್ದ ಗಂಡಭೇರುಂಡ ಚಿತ್ರ ಅಳವಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.