ADVERTISEMENT

ಕಾಸರಗೋಡು | ಸಂಗೀತ ಕಾರ್ಯಕ್ರಮದಲ್ಲಿ ಕಾಲ್ತುಳಿತದ ಸನ್ನಿವೇಶ: 30 ಮಂದಿಗೆ ಗಾಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ನವೆಂಬರ್ 2025, 2:55 IST
Last Updated 24 ನವೆಂಬರ್ 2025, 2:55 IST
   

ಕಾಸರಗೋಡು: ಭಾನುವಾರ ರಾತ್ರಿ ನಡೆದ ಮಲಯಾಳ ಗಾಯಕ ಹನಾನ್ ಶಾ ಅವರ ಸಂಗೀತ ಕಾರ್ಯಕ್ರಮದಲ್ಲಿ ಭಾರಿ ಜನ ಸೇರಿದ್ದರಿಂದ ಕಾಲ್ತುಳಿತದಂತಹ ಸನ್ನಿವೇಶ ನಿರ್ಮಾಣವಾಗಿ 30 ಮಂದಿ ಗಾಯಗೊಂಡಿದ್ದಾರೆ.

ಹೊಸ ಬಸ್ ನಿಲ್ದಾಣದ ಸಮೀಪದ ನಡೆಯುತ್ತಿದ್ದ ಎಕ್ಸ್‌ಪೊ ಒಂದರ ಭಾಗವಾಗಿ ಹನಾನ್ ಅವರ ಕಾರ್ಯಕ್ರಮ ಇತ್ತು. ಘಟನೆ ಸಂಬಂಧ ಐವರು ಸಂಘಟಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರ್ಯಕ್ರಮಕ್ಕೆ ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ಅವ್ಯವಸ್ಥೆ ಉಂಟಾಗಿದೆ. ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ಯಕ್ರಮ ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ. ಅಲ್ಲದೆ ಸೇರಿದ್ದ ಜನರನ್ನು ಚದುರಿಸಲು ಲಾಠಿ ಚಾರ್ಜ್ ಮಾಡಿದ್ದಾರೆ. ‍ಸರಿಯಾದ ಸಮಯಕ್ಕೆ ಪೊಲೀಸರು ಮಧ್ಯಪ್ರವೇಶಿಸಿದ್ದರಿಂದ ಸಂಭವನೀಯ ಕಾಲ್ತುಳಿತ ತಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಜನರು ಭಾರಿ ಸಂಖ್ಯೆಯಲ್ಲಿ ಸೇರಿದ್ದರಿಂದ ಹಲವರು ಅಸ್ವಸ್ಥರಾಗಿದ್ದಾರೆ. ಸುಮಾರು ಹತ್ತು ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದೆ. ಆ ಪೈಕಿ ಕೆಲವರನ್ನು ಹೆಚ್ಚಿನ ಚಿಕಿತ್ಸೆಗೆ ಬೇರೆಡೆ ಸ್ಥಳಾಂತರಿಸಲಾಗಿದೆ. ಅವರೆಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಅಧಿಕಾರಿಗಳು ಖಚಿತ ಪಡಿಸಿದ್ದಾರೆ.

ರಾತ್ರಿ ಸುಮಾರು 9 ಗಂಟೆಗೆ ಅನಿರೀಕ್ಷಿತವಾಗಿ ಜನ ಸೇರಿದ್ದಾರೆ. ಮನವಿಯ ಹೊರತಾಗಿಯೂ ಜನ ಸ್ಥಳ ತೊರೆಯದಿದ್ದರಿಂದ ಗಾನಗೋಷ್ಠಿಯನ್ನು ಅರ್ಧಕ್ಕೆ ನಿಲ್ಲಿಸಲಾಯಿತು.

ಹಲವು ಸಾರ್ವಜನಿಕರು ಪೊಲೀಸರೊಂದಿಗೆ ವಾಗ್ವಾದ ನಡೆಸುವ ವಿಡಿಯೊಗಳನ್ನು ಸ್ಥಳೀಯ ಮಾಧ್ಯಮಗಳು ಪ್ರಸಾರ ಮಾಡಿವೆ. ಭಾನುವಾರವಾಗಿದ್ದರಿಂದ ಭಾರಿ ಪ್ರಮಾಣದಲ್ಲಿ ಜನ ಬಂದಿದ್ದಾರೆ ಎಂದು ಆಯೋಜಕರು ಹೇಳಿದ್ದಾರೆ.

ಸಣ್ಣ ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆ ಬಗ್ಗೆ ಎಚ್ಚರಿಕೆ ನೀಡಲಾಗಿದ್ದರೂ, ಸಂಘಟಕರು ಅದನ್ನು ನಿರ್ಲಕ್ಷಿಸಿದ್ದರು ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಟಿಕೆಟ್ ದರ ₹ 100 ಇದ್ದರೂ, ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗಿದೆ ಎಂದೂ ಆರೋ‍ಪಿಸಲಾಗಿದೆ. ಭದ್ರತಾ ಕಾರಣಗಳನ್ನು ನೀಡಿ, ಟಿಕೆಟ್ ಇದ್ದವರನ್ನು ಪೊಲೀಸರು ಒಳಗೆ ಬಿಡದಿದ್ದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ.

(ವಿವಿಧ ಮೂಲಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.